ಬಿಹಾರ ಜಾತಿ ಜನಗಣತಿ: ಚುನಾವಣೆಗೆ ಪ್ರಬಲ ಅಸ್ತ್ರವಾಗಿಸುತ್ತಿರುವ ನಿತೀಶ್ ಕುಮಾರ್
ಸಾಮರಸ್ಯದಿಂದ ಕೆಲಸ ಮಾಡುತ್ತಿರುವ ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಇಬ್ಬರೂ, ತಮ್ಮ ನಡೆಗಳ ಮೂಲಕ ೨೦೨೪ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳಿಗೆ ಒಂದು ಮಾದರಿಯನ್ನು ಕೊಟ್ಟಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಯಾವ ವಿಚಾರವನ್ನಿಟ್ಟುಕೊಂಡು ಚುನಾವಣೆ ಎದುರಿಸಬೇಕಾಗಿದೆ ಎಂಬುದು ಇಂಡಿಯಾ ಮೈತ್ರಿಕೂಟಕ್ಕೆ ಈಗಾಗಲೇ ಮನವರಿಕೆಯಾದಂತಿದೆ.
ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರಕಾರ ಇತರ ಹಿಂದುಳಿದ ವರ್ಗಗಳು (ಒಬಿಸಿ), ಪರಿಶಿಷ್ಟ ಜಾತಿಗಳು (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಶೇ.65 ಮೀಸಲಾತಿಯನ್ನು ಸಂವಿಧಾನದ ಒಂಭತ್ತನೇ ಶೆಡ್ಯೂಲ್‌ನಲ್ಲಿ ಸೇರಿಸಲು ಕೇಂದ್ರ ಸರಕಾರವನ್ನು ಒತ್ತಾಯಿಸಿದೆ. ಜಾತಿ ಸಮೀಕ್ಷೆಯು ಮುಂದೆ ಮಾಡಿರುವ ಸವಾಲುಗಳನ್ನು ಎದುರಿಸಲು ರಾಜ್ಯಕ್ಕೆ ವಿಶೇಷ ವರ್ಗದ ಸ್ಥಾನಮಾನ ನೀಡುವಂತೆಯೂ ಅದು ಆಗ್ರಹಿಸಿದೆ.
ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಸಂಪುಟ ಸಭೆಯ ತೀರ್ಮಾನದ ವಿವರಗಳನ್ನು ಮಾಧ್ಯಮಗಳ ಮುಂದಿಟ್ಟ ಪ್ರಕಾರ, ಬಿಹಾರದಲ್ಲಿ ಬಡತನ ರೇಖೆಗಿಂತ ಕೆಳಗಿರುವ 94 ಲಕ್ಷ ಕುಟುಂಬಗಳು ಉದ್ಯೋಗ ಪಡೆಯಲು ತಲಾ 2 ಲಕ್ಷ ರೂ., 63,850 ಭೂ ರಹಿತ ಕುಟುಂಬಗಳಿಗೆ ಭೂಮಿ ಖರೀದಿಸಲು ತಲಾ 1 ಲಕ್ಷ ರೂ., ಮನೆ ನಿರ್ಮಿಸಲು ತಲಾ 1.20 ಲಕ್ಷ ರೂ. ಪಾವತಿಸಬೇಕು ಎಂಬ ತೀರ್ಮಾನವಾಗಿದೆ. ಈ ವೆಚ್ಚಗಳಿಗೆ 2.5 ಲಕ್ಷ ಕೋಟಿ ರೂ. ಬೇಕಾಗುತ್ತದೆ, ಇದಕ್ಕಾಗಿ ರಾಜ್ಯಕ್ಕೆ ವಿಶೇಷ ವರ್ಗದ ಸ್ಥಾನಮಾನದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ವಿಸ್ತರಿಸಲಾದ ಮೀಸಲಾತಿಯನ್ನು ತಮಿಳುನಾಡಿನಂತೆ ಒಂಭತ್ತನೇ ಶೆಡ್ಯೂಲ್‌ಗೆ ಸೇರಿಸುವುದರಿಂದ ಬಿಹಾರಕ್ಕೆ ಕಾನೂನು ಸವಾಲುಗಳಿಂದ ವಿನಾಯಿತಿ ಸಿಗುತ್ತದೆ.
ಬಿಹಾರದ ಬೇಡಿಕೆಯನ್ನು ನರೇಂದ್ರ ಮೋದಿ ಸರಕಾರ ಒಪ್ಪಿಕೊಳ್ಳುತ್ತದೆಯೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಜೆಡಿಯು, ಆರ್‌ಜೆಡಿ, ಕಾಂಗ್ರೆಸ್, ಎಡ ಪಕ್ಷಗಳ ಮಹಾಘಟಬಂಧನ್ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ನಡುವಿನ ಸಂಬಂಧವನ್ನು ಗಮನಿಸಿದರೆ, ಕೇಂದ್ರವು ರಾಜ್ಯದ ಆಶಯಗಳಿಗೆ ಮಣಿಯುವ ಸಾಧ್ಯತೆ ಕಡಿಮೆ. ಎರಡು ವರ್ಷಗಳ ಹಿಂದೆ ರಾಷ್ಟ್ರೀಯ ಜಾತಿ ಗಣತಿ ಬೇಡಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ತಿರಸ್ಕರಿಸಿದ್ದರು. 2015ರ ವಿಧಾನಸಭಾ ಚುನಾವಣೆಯ ವೇಳೆ ಅರ್ರಾದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಅವರು ಭರವಸೆ ನೀಡಿದ್ದ 1.20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್‌ಗಳನ್ನು ಕೂಡ ಮಂಜೂರು ಮಾಡಿಲ್ಲ. ಬಿಜೆಪಿಯ ಪರವಿರುವವರು ಬಿಹಾರದ ಜಾತಿ ಸಮೀಕ್ಷೆಯನ್ನು ಪಾಟ್ನಾ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು ಎಂಬುದನ್ನೂ ಗಮನಿಸಬೇಕು. ಸಾಲಿಸಿಟರ್ ಜನರಲ್ ಜಾತಿ ಸಮೀಕ್ಷೆಯನ್ನು ಸುಪ್ರೀಂಕೋರ್ಟ್‌ನಲ್ಲಿ ವಿರೋಧಿಸಿದ್ದರು.
ಕೇಂದ್ರ ಸರಕಾರವು ಬಿಹಾರ ಸರಕಾರದ ಬೇಡಿಕೆಗೆ ಮನ್ನಣೆ ನೀಡುವುದಿಲ್ಲ ಎಂಬುದು ಬಿಜೆಪಿಯ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿಯವರಿಗೆ ಸ್ಪಷ್ಟವಾಗಿದೆ. ಲಾಲು ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ ಇಬ್ಬರೂ ಕೇಂದ್ರದಲ್ಲಿ ಮಂತ್ರಿಗಳಾಗಿದ್ದರು. ಕಾಂಗ್ರೆಸ್ 75 ವರ್ಷಗಳ ಕಾಲ ಭಾರತವನ್ನು ಆಳಿತು. ಆದರೆ ಅವರು ಬಿಹಾರವನ್ನು ವಿಶೇಷ ವರ್ಗದ ಸ್ಥಾನಮಾನಕ್ಕೆ ಪರಿಗಣಿಸಲಿಲ್ಲ. ಇನ್ನು ಮುಂದೆ ಯಾವುದೇ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವುದಿಲ್ಲ ಎಂದು 14 ಮತ್ತು 15ನೇ ಹಣಕಾಸು ಆಯೋಗಗಳು ಹೇಳಿವೆ. ಪ್ರಧಾನಮಂತ್ರಿಯವರು ಬಿಹಾರಕ್ಕೆ ವಿಶೇಷ ಆರ್ಥಿಕ ಸಹಾಯವಾಗಿ 1.50 ಲಕ್ಷ ಕೋಟಿ ರೂ. ಅನುದಾನ ನೀಡಿದ್ದಾರೆ ಎಂಬುದು ಅವರ ಹೇಳಿಕೆ.
ಇದೀಗ ರಾಷ್ಟ್ರಮಟ್ಟದಲ್ಲಿ ಬಿಹಾರ ಜಾತಿ ಸಮೀಕ್ಷೆಗೆ ಸಿಕ್ಕ ಪ್ರತಿಕ್ರಿಯೆಯಿಂದ ಉತ್ತೇಜಿತರಾಗಿರುವ ನಿತೀಶ್ ಕುಮಾರ್ ತಮ್ಮ ಕಾರ್ಯಕರ್ತರನ್ನು ರಾಜ್ಯದಲ್ಲಿ ಪ್ರತಿಭಟನೆಗಿಳಿಸಲು ನಿರ್ಧರಿಸಿದ್ದಾರೆ. ರಾಜ್ಯದಲ್ಲಿ ಆಡಳಿತಾರೂಢ ಮಹಾಘಟಬಂಧನ್ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ರಾಜ್ಯಕ್ಕೆ ವಿಶೇಷ ವರ್ಗದ ಸ್ಥಾನಮಾನಕ್ಕೆ ಒತ್ತಾಯಿಸಿ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳನ್ನು ನಡೆಸಿದೆ.
ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶವು ಡಿಸೆಂಬರ್ 3ರಂದು ಪ್ರಕಟವಾಗಲಿದೆ. ಜಾತಿ ಸಮೀಕ್ಷೆಯು ಮಧ್ಯಪ್ರದೇಶ, ಛತ್ತೀಸ್‌ಗಡ ಮತ್ತು ರಾಜಸ್ಥಾನದ ಮತದಾರರ ಮೇಲೆ ಬಲವಾದ ಪರಿಣಾಮ ಬೀರುವ ನಿರೀಕ್ಷೆಯಿದೆ ಎಂದು ವರದಿಗಳು ಸೂಚಿಸುತ್ತಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಚುನಾವಣಾ ಪ್ರಚಾರ ಭಾಷಣಗಳಲ್ಲೆಲ್ಲ ಜಾತಿ ಜನಗಣತಿ ನಡೆಸುವುದಾಗಿಯೂ, ಅಂಚಿನಲ್ಲಿರುವ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಆಡಳಿತದಲ್ಲಿ ಪ್ರಾತಿನಿಧ್ಯ ನೀಡುವುದಾಗಿಯೂ ಭರವಸೆ ನೀಡಿದ್ದಾರೆ. ಬಿಹಾರದ ಜಾತಿ ಜನಗಣತಿಯನ್ನು ಇಂಡಿಯಾ ಮೈತ್ರಿಕೂಟದ ಪಕ್ಷಗಳು ಬಹು ಮಟ್ಟಿಗೆ ಬೆಂಬಲಿಸಿವೆ. ಅಂಚಿನಲ್ಲಿರುವ ವರ್ಗಗಳ ನಡುವಿನ ದೊಡ್ಡ ಪ್ರಮಾಣದ ನಿರುದ್ಯೋಗಕ್ಕೆ ಪರಿಹಾರವಾಗಿ ಜಾತಿ ಜನಗಣತಿ ಬಹು ದೊಡ್ಡ ಸಾಧನವಾಗಿದೆ ಎಂದು ಪ್ರತಿಪಾದಿಸುವುದನ್ನು 2024ರ ಚುನಾವಣೆಯ ಮುಖ್ಯ ವಿಷಯವನ್ನಾಗಿ ಅವು ತೆಗೆದುಕೊಳ್ಳಲಿವೆ ಎಂಬುದು ಸ್ಪಷ್ಟವಾಗಿದೆ.
ಸಾಮರಸ್ಯದಿಂದ ಕೆಲಸ ಮಾಡುತ್ತಿರುವ ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಇಬ್ಬರೂ, ತಮ್ಮ ನಡೆಗಳ ಮೂಲಕ, 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳಿಗೆ ಒಂದು ಮಾದರಿಯನ್ನು ಕೊಟ್ಟಿದ್ದಾರೆ ಎಂಬುದು ಕೂಡ ಈಗಾಗಲೇ ಸ್ಪಷ್ಟವಾಗಿದೆ. ಹಾಗಾಗಿ, ಬಿಜೆಪಿ ತಮ್ಮ ಬೇಡಿಕೆಗಳಿಗೆ ಮನ್ನಣೆ ನೀಡಿದರೂ, ಅವರು ಜಾತಿ ಸಮೀಕ್ಷೆ ವರದಿ ಬಹಿರಂಗದ ನಂತರ ಮಾಡಲಾದ 1.20 ಲಕ್ಷ ಶಿಕ್ಷಕರ ನೇಮಕವನ್ನು ನರೇಂದ್ರ ಮೋದಿ ನೇತೃತ್ವದ ಸರಕಾರದ ಮೇಲೆ ಒತ್ತಡವನ್ನು ತರಲು ಬಳಸುತ್ತಾರೆ ಎಂಬುದು ಕೂಡ ಸ್ಪಷ್ಟ.
ಬಿಹಾರದ ಜನಸಮುದಾಯಗಳಲ್ಲಿ ಅವರು ಬಹು ದೊಡ್ಡ ಬೆಂಬಲವನ್ನು ಹೊಂದಿರುವುದರಿಂದಾಗಿ ಅದನ್ನು ಮಾಡಲು ಅವರು ಬಹು ಮಟ್ಟಿಗೆ ಸಮರ್ಥರಾಗಿದ್ದಾರೆ. ಆರ್‌ಜೆಡಿಯು ಬಹುಪಾಲು ಬಿಹಾರದ ಒಳನಾಡಿನ ಹಿಂದುಳಿದ ವರ್ಗಗಳನ್ನು ಒಳಗೊಂಡಿರುವ ಕಾರ್ಯಕರ್ತರ ದೊಡ್ಡ ಜಾಲವನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಕಲ್ಯಾಣ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳನ್ನು ತಳಮಟ್ಟದಲ್ಲಿ ಜಾರಿಯಲ್ಲಿ ತರಲು ಮತ್ತು ಜನರ ಪ್ರತಿಕ್ರಿಯೆಯನ್ನು ತಿಳಿಯಲು ನಿತೀಶ್ ಕುಮಾರ್ ರಾಜ್ಯದ ಒಳನಾಡಿನಲ್ಲಿ ಪ್ರವಾಸ ಕೈಗೊಳ್ಳುವುದಕ್ಕೆ ನಿರ್ಧರಿಸಿದ್ದಾರೆ. ಈ ಹಂತದಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರಭಾವ ಬೀರುತ್ತಿರುವ ನಿತೀಶ್ ಕುಮಾರ್ ಅವರ ನಡೆಗಳನ್ನು ಎದುರಿಸಲು ಬಿಜೆಪಿಗೆ ಯಾವುದೇ ದಾರಿ ಕಾಣಿಸುತ್ತಿಲ್ಲ.
ನಿತೀಶ್ ಯಾವುದೇ ಯೋಜನೆ ಮತ್ತು ಆಲೋಚನೆಯಿಲ್ಲದೆ ಇದ್ದಕ್ಕಿದ್ದಂತೆ ಈ ಎಲ್ಲಾ ಕೆಲಸಗಳನ್ನು ಮಾಡಿದ್ದಾರೆ ಎಂದು ಹೇಳುವಂತಿಲ್ಲ. 2022ರ ಆಗಸ್ಟ್‌ನಲ್ಲಿ ಅವರು ಬಿಜೆಪಿಯನ್ನು ಬಿಟ್ಟು ಮಹಾಘಟಬಂಧನ್‌ಗೆ ಸೇರುವ ಮೊದಲು, ತೇಜಸ್ವಿ ಯಾದವ್ ಸಹಜವಾಗಿಯೇ ಅವರ ತಂದೆ ಲಾಲು ಅವರಿಂದ ಪ್ರೇರಿತರಾಗಿ ಜಾತಿ ಗಣತಿಗೆ ಒತ್ತಾಯಿಸುತ್ತಿದ್ದರು. 2020ರ ವಿಧಾನಸಭಾ ಚುನಾವಣೆ ವೇಳೆ ಯುವಕರಿಗೆ 10 ಲಕ್ಷ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಹೀಗೆ ನಿತೀಶ್ ಮತ್ತು ತೇಜಸ್ವಿ ಪರಸ್ಪರ ಕೈಜೋಡಿಸುವ ಮೊದಲೇ ಈ ವಿಚಾರಗಳಲ್ಲಿ ಒಂದಾಗಿಬಿಟ್ಟಿದ್ದರು.
ಅಧಿಕಾರಕ್ಕೆ ಬಂದ ನಂತರ ಉದ್ಯೊಗ ನೀಡುವುದು ಮತ್ತು ಜಾತಿ ಸಮೀಕ್ಷೆ ನಡೆಸುವುದನ್ನು ಅವರು ಆಕ್ರಮಣಕಾರಿ ರೀತಿಯಲ್ಲಿ ಜಾರಿಗೆ ತಂದರು. ಮಹಾತ್ಮಾ ಗಾಂಧಿಯವರ ಜನ್ಮದಿನವಾದ ಅಕ್ಟೋಬರ್ 2ರಂದು ಬಿಹಾರ ಸರಕಾರವು ರಾಜ್ಯದ ವಿವಿಧ ಜಾತಿಗಳ ಅಂಕಿಅಂಶಗಳನ್ನು ಬಿಡುಗಡೆ ಮಾಡಿತು. ನವೆಂಬರ್ 2ರಂದು ನಿತೀಶ್, ತೇಜಸ್ವಿ ಮತ್ತು ಇತರ ಸಚಿವರು ಹೊಸದಾಗಿ ನೇಮಕಗೊಂಡ 1.20 ಲಕ್ಷ ಶಿಕ್ಷಕರಿಗೆ ಒಂದೇ ದಿನದಲ್ಲಿ ನೇಮಕಾತಿ ಪತ್ರಗಳನ್ನು ವಿತರಿಸಿದರು. ಒಟ್ಟಾರೆ ಯಾಗಿ, 2022ರ ಆಗಸ್ಟ್‌ನಲ್ಲಿ ಮಹಾಘಟಬಂಧನ್ ಅಧಿಕಾರಕ್ಕೆ ಬಂದ ನಂತರ ಬಿಹಾರ ಸರಕಾರವು ಸುಮಾರು ನಾಲ್ಕು ಲಕ್ಷ ನಿರುದ್ಯೋಗಿ ಯುವಕರಿಗೆ ಉದ್ಯೋಗಗಳನ್ನು ನೀಡಿದೆ.
ಜಾತಿ ಸಮೀಕ್ಷೆ ಬಹಿರಂಗಪಡಿಸಿರುವ ಅಂಕಿ ಅಂಶಗಳು ಇಟ್ಟಿರುವ ಸವಾಲುಗಳನ್ನು ಎದುರಿಸಲು ಬಿಹಾರ ಸರಕಾರವು ಐದು ವರ್ಷಗಳ ಯೋಜನೆ ರೂಪಿಸಿದೆ. ಇದು ಪ್ರಾಥಮಿಕವಾಗಿ, ಸಂಬಂಧಪಟ್ಟ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗ, ವಸತಿ, ಭೂಮಿ ಮತ್ತು ಆಡಳಿತ ಯಂತ್ರದಲ್ಲಿ ಅಂಚಿನಲ್ಲಿರುವ ವರ್ಗಗಳ ಒಳಗೊಳ್ಳುವಿಕೆಯನ್ನು ಒಳಗೊಂಡಿರುತ್ತದೆ. ಬಿಜೆಪಿಯ ರಾಜಕೀಯದ ಮುಖ್ಯ ನೆಲೆಯಾಗಿರುವ ಹಿಂದುತ್ವದ ರಾಜಕೀಯಕ್ಕೆ ಪ್ರತಿಯಾಗಿ ಬಳಸಲು ಈ ಎಲ್ಲ ನಿಜವಾದ ವಿಚಾರಗಳು ಪರಿಣಾಮಕಾರಿ ಸಾಧನ ಎಂದು ಪರಿಗಣಿಸಲಾಗಿದೆ. ಇಂಡಿಯಾ ಮೈತ್ರಿಕೂಟದ ಪಕ್ಷಗಳು ಸೀಟು ಹಂಚಿಕೆಯ ವಿಚಾರವಾಗಿ ಇನ್ನೂ ತೀರ್ಮಾನ ತೆಗೆದುಕೊಳ್ಳುವುದು ಬಾಕಿಯಿದೆ. ಆದರೆ 2024ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅವು ಬಿಹಾರ ಮಾದರಿಯಿಂದ ಮುನ್ನೆಲೆಗೆ ಬಂದಿರುವ ಸಾಮಾನ್ಯ ಚುನಾವಣಾ ವಿಚಾರಗಳ ಒಂದು ನೆಲೆಯನ್ನು ಈಗಾಗಲೇ ಕಂಡುಕೊಂಡಿವೆ ಎಂಬುದಂತೂ ನಿಜ.
(ಕೃಪೆ:thewire.in)