ಲಿಂಗಾಯತ ಧರ್ಮದ ಮಾನ್ಯತೆಗಾಗಿ ಕೇಂದ್ರಕ್ಕೆ ಮರು ಪ್ರಸ್ತಾವ: ವರದಿ ಕೇಳಿದ ಸರಕಾರ

Update: 2023-11-02 05:35 GMT

Photo: PTI

ಬೆಂಗಳೂರು, ನ.1: ಲಿಂಗಾಯತ ಧರ್ಮದ ಮಾನ್ಯತೆಗಾಗಿ ಕೇಂದ್ರ ಸರಕಾರಕ್ಕೆ ಮರು ಪ್ರಸ್ತಾವನೆ ಕಳಿಸುವುದು ಹಾಗೂ ಗುರು ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು ಘೋಷಿಸುವ ಕುರಿತು ರಾಜ್ಯ ಕಾಂಗ್ರೆಸ್ ಸರಕಾರವು ಬೀದರ್ ಜಿಲ್ಲಾಧಿಕಾರಿ ಮತ್ತು ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯ ಆಯುಕ್ತರಿಂದ ವರದಿ ಕೇಳಿರುವುದು ಇದೀಗ ಬಹಿರಂಗವಾಗಿದೆ.

2018ರ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಲಿಂಗಾಯತ ಧರ್ಮದ ಕುರಿತು ಕಾಂಗ್ರೆಸ್ ಪಕ್ಷವು ತಳೆದಿದ್ದ ನಿಲುವಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ 2023ರಲ್ಲಿ ಅಧಿಕಾರ ಹಿಡಿದಿರುವ ಹೊತ್ತಿನಲ್ಲಿಯೇ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಕೇಂದ್ರ ಸರಕಾರಕ್ಕೆ ಮರು ಪ್ರಸ್ತಾವ ಸಲ್ಲಿಸುವ ಸಂಬಂಧ ವರದಿ ಕೇಳಿರುವುದು ಮಹತ್ವ ಪಡೆದುಕೊಂಡಿದೆ.

ವಿಜಯಪುರ ಜಿಲ್ಲೆ ಮತ್ತು ನಮ್ಮ ಮೆಟ್ರೊಗೆ ಬಸವಣ್ಣನ ಹೆಸರು ಘೋಷಿಸುವ ಸಂಬಂಧ ಎಂ.ಬಿ.ಪಾಟೀಲ್ ನೀಡಿರುವ ಹೇಳಿಕೆ ಕುರಿತು ಚರ್ಚೆಯಾಗುತ್ತಿರುವ ಮಧ್ಯೆಯೇ ಇದೀಗ ಬಸವಣ್ಣನನ್ನು ಕರ್ನಾಟಕ ಸಾಂಸ್ಕೃತಿಕ ನಾಯಕರು ಎಂದು ಘೋಷಿಸಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಸರಕಾರದ ಕಾರ್ಯದರ್ಶಿಗಳು 2023ರ ಜೂನ್ 28ರಂದೇ ವರದಿ ಕೇಳಿ ಮೊದಲನೇ ನೆನಪೋಲೆ ರವಾನಿಸಿದ್ದರು ಎಂದು ಗೊತ್ತಾಗಿದೆ.

ಈ ಕುರಿತು ಕಂದಾಯ ಇಲಾಖೆಯ ಸರಕಾರದ ಕಾರ್ಯದರ್ಶಿಯು 2023ರ ಜೂನ್ 28ರಂದು ಬರೆದಿರುವ ನೆನಪೋಲೆಯು (ಕಂಇ 53 ಆರ್‌ಬಿಎ 2023)"The-file.in"ಗೆ ಲಭ್ಯವಾಗಿದೆ.

ಲಿಂಗಾಯತ ಧರ್ಮದ ಮಾನ್ಯತೆಗಾಗಿ ಕೇಂದ್ರ ಸರಕಾರಕ್ಕೆ ಮರು ಪ್ರಸ್ತಾವ ಸಲ್ಲಿಸುವುದು ಮತ್ತು ಗುರು ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರು ಎಂದು ಘೋಷಿಸುವ ಸಂಬಂಧ ಬೆಳಗಾವಿ ಜಿಲ್ಲೆಯ ರಾಷ್ಟ್ರೀಯ ಬಸವ ದಳದ ಅಶೋಕ ಬೆಂಡಿಗೇರಿ ಅವರು ಮನವಿ ಸಲ್ಲಿಸಿದ್ದರು. ಈ ಮನವಿ ಆಧರಿಸಿ ಕಂದಾಯ ಇಲಾಖೆಯು 2023ರ ಜೂನ್ 28ರಂದು ನೆನಪೋಲೆ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಜಿ.ಮಹಾಂತೇಶ್

contributor

Similar News