ಒಂದು ದೇಶದಲ್ಲಿನ ಶಿಕ್ಷಣದ ಗುಣಮಟ್ಟ ಅಲ್ಲಿನ ಶಿಕ್ಷಕರ ಗುಣಮಟ್ಟಕ್ಕಿಂತ ಹೆಚ್ಚಿರಲಾರದು
ಶಿಕ್ಷಕ -ಶಿಕ್ಷಕಿಯರು, ಇಂದು ಬದಲಾದ ಪರಿಸ್ಥಿತಿಯಲ್ಲಿ ಸ್ಥಾನಮಾನದ ಘನತೆಯ ಕುಸಿತ ಮತ್ತು ಸೇವಾಭದ್ರತೆಯ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಪರಿಸ್ಥಿತಿ ಎಲ್ಲಿಗೆ ಬಂದಿದೆಯೆಂದರೆ, ಭಾರತದ ಅತಿ ದೊಡ್ಡ ಶಿಕ್ಷಕರ ಸಂಘಟನೆಯಾದ ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್ ಸೆಪ್ಟಂಬರ್ ೫ರಿಂದ ಅಕ್ಟೋಬರ್ ೫ರವರೆಗೆ, ಒಂದು ತಿಂಗಳ ಕಾಲ, ದೇಶಾದ್ಯಂತ ಭಾರತ ಯಾತ್ರೆಯನ್ನು ನಡೆಸಿ ಶಿಕ್ಷಕರ ಸ್ಥಿತಿಗತಿಗಳ ಬಗ್ಗೆ ಸರಕಾರಗಳ ಗಮನ ಸೆಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂದು ವಿಶ್ವ ಶಿಕ್ಷಕರ ದಿನಾಚರಣೆ. ಪ್ರಪಂಚದಾದ್ಯಂತ ಇಂದು ಶಿಕ್ಷಣ ವ್ಯವಸ್ಥೆಯಲ್ಲಿ ಕಾಣುತ್ತಿರುವ ಅತಿ ದೊಡ್ಡ ಸಮಸ್ಯೆಯೆಂದರೆ ಶಿಕ್ಷಕರ ತೀವ್ರ ಕೊರತೆ. ಶಿಕ್ಷಣ ಮಾನವನ ಮೂಲಭೂತ ಹಕ್ಕಿನ ಭಾಗವಾಗಿ ಎಲ್ಲಾ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ಖಾತರಿ ಪಡಿಸುವಲ್ಲಿ, ಶಿಕ್ಷಕರ ಕೊರತೆಯನ್ನು ಹಿಮ್ಮೆಟ್ಟಿಸುವ ಜಾಗತಿಕ ಅನಿವಾರ್ಯತೆಯ ಮುಖ್ಯ ತಿರುಳನ್ನು ಆಧಾರವಾಗಿಟ್ಟುಕೊಂಡು ಜಗತ್ತಿನಾದ್ಯಂತ ಈ ಬಾರಿಯ ವಿಶ್ವ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ನಿಜ ಹೇಳಬೇಕೇಂದರೆ, ಶಿಕ್ಷಕ ವೃತ್ತಿ ಕೇವಲ ಒಂದು ಉದ್ಯೋಗವಲ್ಲ. ಶಿಕ್ಷಕರಾಗುವುದೆಂದರೆ ಇತರರ ಜೀವನದ ಮೇಲೆ ಗಾಢವಾದ, ಪರಿವರ್ತನಾತ್ಮಕ ಮತ್ತು ಶಾಶ್ವತವಾದ ಪ್ರಭಾವವನ್ನು ಬೀರುವ ಮೂಲಕ ಸುಸ್ಥಿರ ಭವಿಷ್ಯವನ್ನು ರೂಪಿಸಲು ಅನನ್ಯ ಅವಕಾಶ. ಆದ್ದರಿಂದಲೇ, ಶಿಕ್ಷಣ ಆಯೋಗ (1964-66) ತನ್ನ ನಾಲ್ಕು ಸಂಪುಟಗಳ ವರದಿಯನ್ನು ಬರೆಯುವಾಗ ಮೊದಲ ಸಂಪುಟದ ಮೊದಲ ವಾಕ್ಯವನ್ನು ‘ದೇಶದ ಭವಿಷ್ಯ ಆಕೆಯ ತರಗತಿಗಳಲ್ಲಿ ರೂಪಿತವಾಗುತ್ತದೆ’ (The destiny of the Nation is being shaped in her classrooms)ಯೆಂದು ಪ್ರಾರಂಭಿಸಿತು. ಅಂದರೆ, ದೇಶದ ಭವಿಷ್ಯವನ್ನು ರೂಪಿಸುವ ಹೊಣೆಗಾರಿಕೆಯನ್ನು ಆಯಾ ದೇಶದ ಶಿಕ್ಷಕರು ಹೊರಬೇಕಿದೆಯೆಂದು ಆಯೋಗ ಮಾರ್ಮಿಕವಾಗಿ ಹೇಳಿದೆ.
ಇಂತಹ ಅಭೂತಪೂರ್ವ ಜವಾಬ್ದಾರಿಯನ್ನು ಹೊತ್ತಿರುವ ಶಿಕ್ಷಕ -ಶಿಕ್ಷಕಿಯರು, ಇಂದು ಬದಲಾದ ಪರಿಸ್ಥಿತಿಯಲ್ಲಿ ಸ್ಥಾನಮಾನದ ಘನತೆಯ ಕುಸಿತ ಮತ್ತು ಸೇವಾಭದ್ರತೆಯ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಪರಿಸ್ಥಿತಿ ಎಲ್ಲಿಗೆ ಬಂದಿದೆಯೆಂದರೆ, ಭಾರತದ ಅತಿ ದೊಡ್ಡ ಶಿಕ್ಷಕರ ಸಂಘಟನೆಯಾದ ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್ ಸೆಪ್ಟಂಬರ್ 5ರಿಂದ ಅಕ್ಟೋಬರ್ 5ರವರೆಗೆ, ಒಂದು ತಿಂಗಳ ಕಾಲ, ದೇಶಾದ್ಯಂತ ಭಾರತ ಯಾತ್ರೆಯನ್ನು ನಡೆಸಿ ಶಿಕ್ಷಕರ ಸ್ಥಿತಿಗತಿಗಳ ಬಗ್ಗೆ ಸರಕಾರಗಳ ಗಮನ ಸೆಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಳೆ ಪಿಂಚಣಿ ಯೋಜನೆಯ ಜಾರಿ, ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಖಾಯಂ ಶಿಕ್ಷಕರ ನೇಮಕಾತಿ, ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಹೊಸ ಶಿಕ್ಷಣ ನೀತಿ 2020ರಲ್ಲಿ ಶಿಕ್ಷಣ ಮತ್ತು ಶಿಕ್ಷಕ ವಿರೋಧಿ ನೀತಿಗಳನ್ನು ವಿರೋಧಿಸಿ ಈ ಯಾತ್ರೆಯನ್ನು ಸಂಘಟಿಸಲಾಗಿದೆ. ಇಂದು ದಿಲ್ಲಿಯಲ್ಲಿ ಬೃಹತ್‌ಸಮಾವೇಶ ನಡೆಯುತ್ತಿದೆ.
2023ರ ವಿಶ್ವ ಶಿಕ್ಷಕರ ದಿನವು ತನ್ನ ಜಾಗತಿಕ ಕಾರ್ಯಸೂಚಿಯ ಭಾಗವಾಗಿ ಘನತೆ ಮತ್ತು ಮೌಲ್ಯಯುತ ಶಿಕ್ಷಕ ವೃತ್ತಿಯ ಪ್ರಾಮುಖ್ಯತೆಯನ್ನು ಸಾರಿ ಹೇಳುವ ಗುರಿಯನ್ನು ಹೊಂದಿದೆ. ಅಂದರೆ, ದೇಶ ನಿರ್ಮಾಣದಲ್ಲಿ ಶಿಕ್ಷಕರ ನಿರ್ಣಾಯಕ ಪಾತ್ರ, ಅವರ ಮುಂದಿರುವ ಸವಾಲುಗಳು, ಅತ್ಯುತ್ತಮ ಶಿಕ್ಷಕರನ್ನು ಶಿಕ್ಷಕ ವೃತ್ತಿಗೆ ಆಕರ್ಷಿಸಲು, ಉಳಿಸಿಕೊಳ್ಳಲು ಮತ್ತು ಎಲ್ಲಾ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುವತ್ತ ಅವರನ್ನು ಪ್ರೇರೇಪಿಸಲು ಸ್ಫೂರ್ತಿದಾಯಕ ಕ್ರಮಗಳನ್ನು ಕಂಡುಕೊಳ್ಳುವ ಬಗೆಯನ್ನು ಅದು ವಿಶ್ಲೇಷಿಸುತ್ತದೆ. ಜೊತೆಗೆ, ಶಿಕ್ಷಣ ವ್ಯವಸ್ಥೆ, ಸಮಾಜ, ಸಮುದಾಯ ಮತ್ತು ಕುಟುಂಬ ಶಿಕ್ಷಕರನ್ನು ಗುರುತಿಸುವ, ಪ್ರಶಂಸಿಸುವ ಮತ್ತು ಸಕ್ರಿಯವಾಗಿ ಬೆಂಬಲಿಸುವ ವಿಧಾನಗಳನ್ನು ಸಹ ಇದು ಪರಿಶೀಲಿಸಬೇಕಿದೆ.
ವಿಶ್ವಸಂಸ್ಥೆಯ ಭಾಗವಾಗಿ ಮತ್ತು ಅದರ ಆಶಯಕ್ಕನುಗುಣವಾಗಿ ಕಾರ್ಯನಿರ್ವಹಿಸುತ್ತಿರುವ ಯುನೆಸ್ಕೋ ಶಿಕ್ಷಣದ ಹಕ್ಕನ್ನು ಮಾನವ ಹಕ್ಕುಗಳ ಮೂಲಭೂತ ಕೊಡುಗೆಯಾಗಿ ಖಚಿತಪಡಿಸಿಕೊಳ್ಳಲು ಮತ್ತು ಆ ಮೂಲಕ ಅಂತರ್‌ರಾಷ್ಟ್ರೀಯ ಶಾಂತಿಯನ್ನು ಕಟ್ಟಿಕೊಡಲು ಮತ್ತು ರಕ್ಷಿಸಲು ನಿರಂತರವಾಗಿ ಕೆಲಸ ಮಾಡುತ್ತಿದೆ. ಈ ದೃಷ್ಟಿಯನ್ನು ಸುಸ್ಥಿರ ಅಭಿವೃದ್ಧಿ ಗುರಿ 4ರಲ್ಲಿ ವ್ಯಕ್ತಪಡಿಸಲಾಗಿದೆ. ಎಲ್ಲರನ್ನು ಒಳಗೊಳ್ಳುವ ಸಮಾನ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ಮತ್ತು ಎಲ್ಲರಿಗೂ ಜೀವನಪರ್ಯಂತ ಕಲಿಕೆಯ ಅವಕಾಶಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದು ಸಾಧ್ಯವಾಗಬೇಕಾದರೆ ಅರ್ಹತೆ ಮತ್ತು ಪ್ರೇರಣೆ ಹೊಂದಿರುವ ಶಿಕ್ಷಕರಿದ್ದಾಗ ಮಾತ್ರ ಸಾಧಿಸಬಹುದು.
ಆದರೆ, ಇಂದು ಜಗತ್ತಿನೆಲ್ಲೆಡೆ ಶಿಕ್ಷಕರ ತೀವ್ರ ಕೊರತೆಯಿಂದಾಗಿ ಮಕ್ಕಳು ಗುಣಾತ್ಮಕ ಶಿಕ್ಷಣವನ್ನು ಪಡೆಯುವುದು ಕಷ್ಟವಾಗುತ್ತಿದೆ. ಉದಾಹರಣೆಗೆ, ಲಭ್ಯವಿರುವ ಅಂಕಿ-ಅಂಶಗಳ ಅನ್ವಯ, 2021-22ನೇ ಶೈಕ್ಷಣಿಕ ಸಾಲಿನಲ್ಲಿ ನಮ್ಮ ದೇಶದಲ್ಲಿ ಸುಮಾರು 12,54,773 ಶಿಕ್ಷಕರ ಹುದ್ದೆಗಳು ಖಾಲಿ ಇದ್ದವು. ಕರ್ನಾಟಕದಲ್ಲಿ ಖಾಲಿ ಇದ್ದ ಹುದ್ದೆಗಳ ಸಂಖ್ಯೆ 1,41,358. ಶಿಕ್ಷಕರ ಒಟ್ಟು ಹುದ್ದೆಗಳಲ್ಲಿ ಖಾಲಿ ಇರುವ ಶೇಕಡಾವಾರು ಹುದ್ದೆ 57.57. ಅಂದರೆ, ಒಂದು ವ್ಯವಸ್ಥೆಯಲ್ಲಿ ಅರ್ಧಕ್ಕಿಂತ ಹೆಚ್ಚು ಶಿಕ್ಷಕರ ಹುದ್ದೆ ಖಾಲಿ ಇದ್ದಲ್ಲಿ ಯಾವ ಬಗೆಯ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯ?
ಆದರೆ, ಇಂದು ಸರಕಾರಗಳು ಖಾಲಿ ಇರುವ ಶಿಕ್ಷಕರ ಹುದ್ದೆಗೆ ಖಾಯಂ ಶಿಕ್ಷಕರನ್ನು ನೇಮಿಸಿಕೊಳ್ಳುವ ಬದಲು ಹೊರಗುತ್ತಿಗೆ ಆಧಾರದಲ್ಲಿ ಶಿಕ್ಷಕ, ಅತಿಥಿ ಶಿಕ್ಷಕ, ಪ್ಯಾರಾ ಶಿಕ್ಷಕ, ಸ್ವಯಂ ಸೇವಕರನ್ನು ಶಿಕ್ಷಕರನ್ನಾಗಿ ನೇಮಿಸಿಕೊಳ್ಳುವ ಮೂಲಕ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ದುರ್ಬಲಗೊಳಿಸುತ್ತಿದೆ. ಇದರಿಂದ ಮಕ್ಕಳ ಶಿಕ್ಷಣದ ಮೂಲಭೂತ ಹಕ್ಕು ದುರ್ಬಲಗೊಳ್ಳುತ್ತಿದೆ. ಆರ್‌ಟಿಇ ಕಾಯ್ದೆಯ ಅನುಷ್ಠಾನದ ಬಗ್ಗೆ ಎನ್‌ಇಪಿ-2020 ಮೌನವಾಗಿದೆ. ಹಲವು ದೇಶಗಳಲ್ಲಿ, ಶಿಕ್ಷಕ ವೃತ್ತಿ ಅನೇಕ ಯುವ ಪೀಳಿಗೆಗೆ ಮತ್ತು ಪ್ರಸಕ್ತ ಸೇವೆಯಲ್ಲಿರುವ ಅನೇಕ ಶಿಕ್ಷಕರಿಗೆ ಆಕರ್ಷಕ ವೃತ್ತಿಯಾಗಿ ಉಳಿದಿಲ್ಲವೆಂದು ಜಾಗತಿಕ ಅಂಕಿ-ಅಂಶಗಳು ದೃಢಪಡಿಸುತ್ತವೆ. ವೃತ್ತಿಗೆ ಸೇರುವ ಮುನ್ನ ವೃತ್ತಿಯನ್ನು ಉತ್ಸಾಹದಿಂದ ಸ್ವೀಕರಿಸಿದ್ದರೂ ಸಹ, ಹದಗೆಡುತ್ತಿರುವ ಕೆಲಸದ ಪರಿಸ್ಥಿತಿ, ಸರಕಾರದ ಸೇವಾ ನೀತಿ ಮತ್ತು ಶಾಲಾ ಆಡಳಿತ ಮಂಡಳಿ ಧೋರಣೆಗಳ ಪರಿಣಾಮವಾಗಿ ಶಿಕ್ಷಕರು ಸಾಮಾನ್ಯವಾಗಿ ತಮ್ಮ ವೃತ್ತಿಯನ್ನು ತೊರೆಯುತ್ತಿದ್ದಾರೆ. ವೃತ್ತಿಯನ್ನು ತೊರೆಯಲು ಮತ್ತೊಂದು ಕಾರಣವೆಂದರೆ ವೃತ್ತಿಗಿರುವ ಮಾನ್ಯತೆಯ ಕೊರತೆ ಮತ್ತು ಅವರ ಕೆಲಸಕ್ಕಾಗಿ ನೀಡಲಾಗುವ ವೇತನವೂ ಪ್ರಮುಖ ಕಾರಣವೆಂದು ದೃಢೀಕರಿಸಲ್ಪಟ್ಟಿದೆ.
ಈ ಎಲ್ಲಾ ಕಾರಣಗಳಿಂದ, ಅಕ್ಟೋಬರ್ 5 ರಂದು ಆಚರಿಸಲಾಗುವ ಈ ವರ್ಷದ ವಿಶ್ವ ಶಿಕ್ಷಕರ ದಿನವನ್ನು ಶಿಕ್ಷಕ ವೃತ್ತಿಯ ಆಕರ್ಷಣೆಯನ್ನು ಸುಧಾರಿಸುವ ದಿನವನ್ನಾಗಿ ಆಚರಿಸುವ ಮೂಲಕ ಶಿಕ್ಷಕರ ಕೊರತೆಯನ್ನು ಹಿಮ್ಮೆಟ್ಟಿಸುವ ವಿಷಯದ ಮೇಲೆ ಕೇಂದ್ರೀಕರಿಸಲಾಗಿದೆ. ಈ ಆಚರಣೆಯ ಸಂದರ್ಭದಲ್ಲಿ, ಶಿಕ್ಷಕರಾಗಿರುವುದರ ಅರ್ಥಪೂರ್ಣತೆ ಮತ್ತು ಅರ್ಹ ಶಿಕ್ಷಕರನ್ನು ವೃತ್ತಿಗೆ ಆಕರ್ಷಿಸುವ ಮತ್ತು ಉಳಿಸಿಕೊಳ್ಳುವ ವಿಷಯಗಳ ಮೇಲೆ ಕೇಂದ್ರೀಕರಿಸುತ್ತವೆ. ಇದು ಕಲಿಕಾ ವೃತ್ತಿಗೆ ಯುವಕರನ್ನು ಆಕರ್ಷಿಸುವ ತುರ್ತು ಅನಿವಾರ್ಯತೆ ಮತ್ತು ಅಗತ್ಯವನ್ನು ಪ್ರತಿಪಾದಿಸುತ್ತದೆ.