ಉತ್ತರ ಪ್ರದೇಶ: ‘ಇಂಡಿಯಾ’ ಮೈತ್ರಿಕೂಟ ಕ್ರಮಿಸಬೇಕಾದ ದೂರ

Update: 2023-09-14 06:45 GMT

ಉತ್ತರ ಪ್ರದೇಶದ ಘೋಸಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ವಿರುದ್ಧದ ಸಮಾಜವಾದಿ ಪಕ್ಷದ ಗೆಲುವು ‘ಇಂಡಿಯಾ’ ಪ್ರತಿಪಕ್ಷ ಮೈತ್ರಿಕೂಟದ ಉತ್ಸಾಹಕ್ಕೆ ಕಾರಣವಾಗಿದೆ. ೨೦೨೪ರ ಲೋಕಸಭೆ ಚುನಾವಣೆಗೆ, ಅದರಲ್ಲಿಯೂ ವಿಶೇಷವಾಗಿ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಈ ಗೆಲುವು ದೊಡ್ಡ ಸ್ಫೂರ್ತಿ ಎಂದು ಮೈತ್ರಿಕೂಟ ಭಾವಿಸತೊಡಗಿದೆ.

೧೯೭೭ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹೀನಾಯ ಸೋಲಿನ ನಂತರ ೧೯೭೮ರ ಉಪಚುನಾವಣೆಯಲ್ಲಿ ಪಕ್ಷದ ಮೊಹ್ಸಿನಾ ಕಿದ್ವಾಯಿ ಅಝಂಗಢ ಲೋಕಸಭಾ ಕ್ಷೇತ್ರ ಗೆದ್ದಿದ್ದರು ಎಂಬುದನ್ನು ನೆನಪಿಸಿಕೊಳ್ಳುವ ಕೆಲ ರಾಜಕೀಯ ವಿಶ್ಲೇಷಕರು, ಈಗ ಘೋಸಿಯಲ್ಲಿ ಬಿಜೆಪಿ ವಿರುದ್ಧದ ಗೆಲುವು ಕೂಡ ಒಂದು ಮಹತ್ವದ ತಿರುವು ಆಗಬಹುದು ಎಂದು ನಂಬುತ್ತಾರೆ. ಅವತ್ತಿನ ಕಿದ್ವಾಯಿ ಗೆಲುವು ಉತ್ತರ ಭಾರತದಲ್ಲಿ ಕಾಂಗ್ರೆಸ್‌ಗೆ ಅದೃಷ್ಟವನ್ನು ಮರಳಿ ತಂದುಕೊಟ್ಟಿದ್ದ ಗೆಲುವಾಗಿತ್ತು.

ಉತ್ತರ ಪ್ರದೇಶವೂ ಸೇರಿದಂತೆ ಉತ್ತರ ಭಾರತದ ಇತರ ರಾಜ್ಯಗಳಲ್ಲಿ ಜನತಾ ಪಕ್ಷದ ಎದುರು ಕಾಂಗ್ರೆಸ್ ೧೯೭೭ರಲ್ಲಿ ಭಾರೀ ದೊಡ್ಡ ಸೋಲನ್ನು ಅನುಭವಿಸಿತ್ತು ಮತ್ತು ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಕೇಂದ್ರದಲ್ಲಿ ಅದು ಅಧಿಕಾರವನ್ನು ಕಳೆದುಕೊಂಡಿತ್ತು. ಮೊಹ್ಸಿನಾ ಕಿದ್ವಾಯಿ ಅವರ ಗೆಲುವು ಮತ್ತೆ ಪಕ್ಷದ ಚೇತರಿಕೆಯ ಆರಂಭಕ್ಕೆ ನಾಂದಿ ಹಾಡಿತು. ಅಂತಿಮವಾಗಿ ೧೯೮೦ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು.

೬೦,೦೦೦ಕ್ಕೂ ಹೆಚ್ಚು ದಲಿತ ಮತದಾರರನ್ನು ಹೊಂದಿರುವ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಸುಧಾರ್ಕರ್ ಸಿಂಗ್ ಬಿಜೆಪಿ ಅಭ್ಯರ್ಥಿ ದಾರಾ ಸಿಂಗ್ ಚೌಹಾಣ್ ವಿರುದ್ಧ ೪೨,೭೫೯ ಮತಗಳಿಂದ ಗೆಲುವು ಸಾಧಿಸಿರುವುದು ಅದ್ಭುತ ಎನ್ನಿಸುವಂತಿದೆ. ಸೋತಿರುವ ಚೌಹಾಣ್ ಮತ್ತೆ ಮತ್ತೆ ಪಕ್ಷಾಂತರ ಮಾಡುವ ವಾಡಿಕೆಯ ರಾಜಕಾರಣಿ.

ಆದರೆ ೧೯೭೮ರಲ್ಲಿನ ರಾಜಕೀಯ ವಾಸ್ತವ ಮತ್ತು ೪೫ ವರ್ಷಗಳ ನಂತರ ೨೦೨೩ರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಉತ್ತರ ಪ್ರದೇಶದಲ್ಲಿ ಅತ್ಯಂತ ಸಕ್ರಿಯ ಪಕ್ಷಗಳಾಗಿರುವ ‘ಇಂಡಿಯಾ’ ಒಕ್ಕೂಟದ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಹಿಂದಿ ಹೃದಯಭಾಗದ ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಲು ಬಹಳಷ್ಟು ದೂರವನ್ನು ಕ್ರಮಿಸಬೇಕಿದೆ ಎಂಬುದು ಕೂಡ ಅಷ್ಟೇ ನಿಜ.

ಉತ್ತರ ಪ್ರದೇಶದಲ್ಲಿ ೨೦೨೨ರ ಚುನಾವಣೆಯಲ್ಲಿ ಬಿಜೆಪಿ ಶೇ.೪೧.೨೯ರಷ್ಟು ಮತಗಳನ್ನು ಪಡೆದಿದ್ದರೆ, ಸಮಾಜವಾದಿ ಪಕ್ಷ ಶೇ.೩೨.೧ರಷ್ಟು ಮತಗಳನ್ನು ಗಳಿಸಿತ್ತು. ಕಾಂಗ್ರೆಸ್ ಕೇವಲ ಶೇ.೨.೩೩ರಷ್ಟು ಮತಗಳನ್ನು ಪಡೆದುಕೊಂಡಿತ್ತು. ಅದು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ ಅತ್ಯಲ್ಪ ಪ್ರಮಾಣದ ಮತಹಂಚಿಕೆ. ೨೦೧೭ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಶೇ.೨೧.೮ರಷ್ಟು ಮತಗಳನ್ನು ಮಾತ್ರ ಪಡೆದಿತ್ತು ಮತ್ತದರ ಸ್ಥಾನಗಳು ೪೭ಕ್ಕೆ ಇಳಿದಿತ್ತು ಎಂಬುದನ್ನು ನೋಡಿಕೊಂಡರೆ ೨೦೨೨ರ ಚುನಾವಣೆಯಲ್ಲಿನ ಸಾಧನೆ ಹೆಚ್ಚಿನದಾಗಿತ್ತು. ಸಮಾಜವಾದಿ ಪಕ್ಷದ ಸ್ಥಾನಗಳು ೧೧೧ಕ್ಕೆ ಏರಿದ್ದವು.

ಮತ್ತೊಂದೆಡೆ, ೨೦೧೭ ಮತ್ತು ೨೦೨೨ರಲ್ಲಿ ಬಿಜೆಪಿಯ ಮತ ಹಂಚಿಕೆ ಪ್ರಮಾಣ ಹೆಚ್ಚುಕಡಿಮೆ ಒಂದೇ ಬಗೆಯಲ್ಲಿತ್ತು. ಆದರೆ ಅದರ ಸ್ಥಾನಗಳು ಗಣನೀಯವಾಗಿ ಕಡಿಮೆಯಾಗಿದ್ದವು. ೨೦೨೨ರಲ್ಲಿ ಬಿಜೆಪಿ ೨೫೫ ಸ್ಥಾನಗಳನ್ನು ಗಳಿಸಿತು. ೨೦೧೭ರಲ್ಲಿ ೩೧೨ ಸ್ಥಾನಗಳಿದ್ದವು. ಹೀಗಾಗಿ, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಒಟ್ಟು ಮತ ಹಂಚಿಕೆ ಪ್ರಮಾಣ ೨೦೨೨ರ ಚುನಾವಣೆಯಲ್ಲಿ ಬಿಜೆಪಿಯ ಮತ ಹಂಚಿಕೆ ಮೇಲೆ ಯಾವುದೇ ಪರಿಣಾಮ ಉಂಟುಮಾಡಿರಲಿಲ್ಲ.

ಇದೇನೇ ಇದ್ದರೂ, ಘೋಸಿ ಉಪಚುನಾವಣೆ ಫಲಿತಾಂಶ ಪೂರ್ವ ಉತ್ತರ ಪ್ರದೇಶದ ಉಪ ಪ್ರದೇಶಗಳಲ್ಲಿನ ಸಣ್ಣ ಜಾತಿ ಆಧಾರಿತ ಪಕ್ಷಗಳ ದುರ್ಬಲತೆಯನ್ನು ಮುನ್ನೆಲೆಗೆ ತಂದಿದೆ. ಉದಾಹರಣೆಗೆ, ದಾರಾ ಸಿಂಗ್ ಚೌಹಾಣ್ ಮತ್ತು ಓಂಪ್ರಕಾಶ್ ರಾಜ್‌ಭರ್ ಇಬ್ಬರೂ ತಮ್ಮ ನೋನಿಯಾ ಮತ್ತು ಭರ್ ಸಮುದಾಯಗಳ ಮೇಲೆ ಹಿಡಿತ ಹೊಂದಿದವರೆಂದು ಹೇಳಲಾಗುತ್ತದೆ. ಆದರೆ ಅವರೀಗ ರಾಜ್ಯ ರಾಜಕೀಯದಲ್ಲಿ ಪ್ರಾಮುಖ್ಯತೆ ಕಳೆದುಕೊಳ್ಳುತ್ತಿದ್ದಾರೆ. ಹಿಂದೆ ಸಮಾಜವಾದಿ ಪಕ್ಷದಲ್ಲಿಯೇ ಇದ್ದ ಈ ಇಬ್ಬರೂ ಇತ್ತೀಚೆಗೆ ಬಿಜೆಪಿ ಸೇರಿದ್ದರು. ೨೦೨೨ರ ಚುನಾವಣೆಯಲ್ಲಿ ಅವರನ್ನು ಅಖಿಲೇಶ್ ಯಾದವ್ ತಮ್ಮ ಪಕ್ಷಕ್ಕೆ ತಂದಿದ್ದಾಗಲೂ ಪಕ್ಷದ ಪಾಲಿಗೆ ಹೇಳಿಕೊಳ್ಳುವಂಥ ಲಾಭವೇನೂ ಆಗಿರಲಿಲ್ಲ.

ಮತ್ತೊಂದು ಗಮನಾರ್ಹ ಅಂಶವೆಂದರೆ, ಮಾಯಾವತಿ ಮತ್ತು ಅವರ ಬಹುಜನ ಸಮಾಜವಾದಿ ಪಕ್ಷದ ವರ್ಚಸ್ಸು ಕ್ಷೀಣಿಸುತ್ತಿದೆ ಎಂಬುದು. ೨೦೨೨ರಲ್ಲಿ ಅದು ಶೇ.೧೨.೮೮ರಷ್ಟು ಮತಗಳನ್ನು ಮಾತ್ರ ಪಡೆದುಕೊಂಡಿತ್ತು. ಮತ್ತದು ಕಳೆದ ೩೦ ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಪ್ರಮಾಣದ ಮತ ಹಂಚಿಕೆಯಾಗಿತ್ತು. ಮಾಯಾವತಿ ೨೦೨೨ರಲ್ಲಿ ಅತಿ ಹೆಚ್ಚು ಮುಸ್ಲಿಮ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಜಾತವ್ ಸಮುದಾಯಕ್ಕೆ ಹೊರತಾದ ಮತಗಳು ಬಿಜೆಪಿಗೆ ಹೋಗುವಂತೆ ಮಾಡಿ, ಸಮಾಜವಾದಿ ಪಕ್ಷದ ವಿರುದ್ಧವಾಗಿ ಬಿಜೆಪಿಗೆ ನೆರವಾಗಿದ್ದರು ಎಂಬ ಆರೋಪವಿತ್ತು.

೨೦೨೨ರಲ್ಲಿ ಬಿಜೆಪಿಗೆ ಮಾಯಾವತಿ ಎಷ್ಟರ ಮಟ್ಟಿಗೆ ಸಹಾಯ ಮಾಡಿದ್ದಾರೆ ಎಂಬುದು ಪರಿಶೀಲಿಸಬೇಕಿರುವ ವಿಷಯ. ಆದರೆ ಉಪಚುನಾವಣೆಯಲ್ಲಿ ಮತದಾನದಿಂದ ದೂರವಿರುವಂತೆ ಮಾಯಾವತಿ ನೀಡಿದ್ದ ಕರೆಗೆ ದಲಿತ ಮತದಾರರು ಸೊಪ್ಪು ಹಾಕಿಲ್ಲ ಎಂಬುದಕ್ಕೆ ಘೋಸಿ ಫಲಿತಾಂಶ ಮಹತ್ವದ ಪುರಾವೆಗಳನ್ನು ನೀಡಿದೆ. ಘೋಸಿ ಗಮನಾರ್ಹ ದಲಿತ ಜನಸಂಖ್ಯೆಯನ್ನು ಹೊಂದಿದ್ದರೂ, ಸಮಾಜವಾದಿ ಪಕ್ಷದ ಅಭ್ಯರ್ಥಿ ತನ್ನ ಪ್ರತಿಸ್ಪರ್ಧಿಯ ವಿರುದ್ಧ ಸುಮಾರು ಶೇ.೫೮ರಷ್ಟು ಮತಗಳನ್ನು ಗಳಿಸಿದರು ಎಂಬುದು ದಲಿತ ಮತಗಳನ್ನು ಕೂಡ ಆ ಅಭ್ಯರ್ಥಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದನ್ನೇ ಸೂಚಿಸುತ್ತದೆ.

ಆದರೂ, ಬಿಜೆಪಿ ಮತ್ತು ‘ಇಂಡಿಯಾ’ ಮೈತ್ರಿಕೂಟದ ನಡುವಿನ ಮತ ಹಂಚಿಕೆಯಲ್ಲಿ ದೊಡ್ಡ ಕಂದಕವಿದೆ. ರಾಹುಲ್ ಗಾಂಧಿಯವರ ‘ಭಾರತ್ ಜೋಡೊ’ ಯಾತ್ರೆ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಭಾರೀ ಗೆಲುವಿನ ನಂತರ ಕಾಂಗ್ರೆಸ್ ಇಮೇಜ್ ಸಹಜವಾಗಿಯೇ ಸುಧಾರಿಸಿದೆ. ಕರ್ನಾಟಕದಲ್ಲಿ ಪ್ರಧಾನಿ ಮೋದಿ ಬಿಜೆಪಿ ಪ್ರಚಾರದ ಪ್ರಮುಖ ಮುಖವಾಗಿದ್ದಾಗಲೂ, ಮತ ತರುವಲ್ಲಿ ಯಶಸ್ವಿಯಾಗಲಿಲ್ಲ. ಮೋದಿ ತಮ್ಮ ಪಕ್ಷಕ್ಕೆ ಚುನಾವಣೆಗಳನ್ನು ಗೆಲ್ಲಿಸಿಕೊಡಬಲ್ಲರೆಂಬ ವಿಚಾರದಲ್ಲಿ ಅನುಮಾನ ಮೂಡಿಸುವ ಹಾಗೆ ಕರ್ನಾಟಕದ ಫಲಿತಾಂಶ ನಮ್ಮೆದುರು ಇದೆ.

ಆದರೆ ‘ಇಂಡಿಯಾ’ ಮೈತ್ರಿಕೂಟ ಇತ್ತೀಚಿನ ಇಂಥ ಕೆಲವು ಸಕಾರಾತ್ಮಕ ಅಂಶಗಳ ಆಧಾರದ ಮೇಲಷ್ಟೇ ಸಂತೃಪ್ತಿ ಹೊಂದಿರುವುದು ಸಾಧ್ಯವಿಲ್ಲ.

ಪಶ್ಚಿಮ ಬಿಹಾರ ಮತ್ತು ಪೂರ್ವ ಉತ್ತರ ಪ್ರದೇಶದ ಜನರ ನಡವಳಿಕೆಯ ನಡುವೆ ಗಮನಾರ್ಹ ಸಾಮ್ಯತೆಗಳಿವೆ. ಆದರೆ ಉತ್ತರ ಪ್ರದೇಶಕ್ಕೆ ಹೋಲಿಸಿದರೆ, ಹರ್ಯಾಣ, ಛತ್ತೀಸ್‌ಗಡ, ರಾಜಸ್ಥಾನ ಮತ್ತು ಮಧ್ಯಪ್ರದೇಶ ಸೇರಿದಂತೆ ಹಲವಾರು ಇತರ ರಾಜ್ಯಗಳಿಗೆ ಹೋಲಿಸಿದರೆ ಬಿಹಾರದಲ್ಲಿ ‘ಇಂಡಿಯಾ’ ಮೈತ್ರಿಕೂಟ ಉತ್ತಮ ಪ್ರದರ್ಶನ ತೋರಿಸುವ ಸಾಧ್ಯತೆಗಳಿವೆ.

ಬಿಜೆಪಿ ಮತ್ತು ಜನತಾ ದಳ (ಯು) ಜೊತೆಗಿದ್ದಾಗ ಎನ್‌ಡಿಎ ಶೇ.೪೫.೩೯ ಮತಗಳನ್ನು ಗಳಿಸಿತ್ತು. ಅದರಲ್ಲಿ ಬಿಜೆಪಿಯ ಪಾಲು ಶೇ.೨೩.೫೮ ಮತ್ತು ಜೆಡಿ (ಯು) ಪಾಲು ಶೇ.೨೧.೮೧ ಇತ್ತು. ಒಟ್ಟು ೩೯ ಸ್ಥಾನಗಳನ್ನು ಎನ್‌ಡಿಎ ಗೆದ್ದುಕೊಂಡಿತ್ತು. ರಾಷ್ಟ್ರೀಯ ಜನತಾ ದಳ ಪೂರ್ತಿ ವಿಫಲವಾಗಿದ್ದರೆ, ಕಾಂಗ್ರೆಸ್ ಕಿಶನ್‌ಗಂಜ್ ಸ್ಥಾನವನ್ನು ಗೆದ್ದಿತ್ತು.

ಆದರೂ, ಜೆಡಿಯು ಎನ್‌ಡಿಎಯನ್ನು ತೊರೆದು ರಾಷ್ಟ್ರೀಯ ಜನತಾ ದಳದೊಂದಿಗೆ ಕೈಜೋಡಿಸಿದ ಪ್ರತೀ ಬಾರಿಯೂ ರಾಜ್ಯದಲ್ಲಿ ಪ್ರಬಲ ಶಕ್ತಿಯಾಗಿ ಉಳಿಯಲು ಬಿಜೆಪಿ ಹೆಣಗಾಡುವ ಸ್ಥಿತಿಯಿದೆ. ಬಿಹಾರದಲ್ಲಿ ಬಿಜೆಪಿ ಮತ್ತು ‘ಇಂಡಿಯಾ’ ಮೈತ್ರಿಕೂಟದ ನಿರೀಕ್ಷೆಯ ಸಂದರ್ಭದಲ್ಲಿ ೨೦೧೫ರ ವಿಧಾನಸಭಾ ಚುನಾವಣೆ ಒಂದು ಮಾನದಂಡವಾಗಿ ಕಾಣಿಸುತ್ತಿದೆ.

ಜೆಡಿಯು-ಆರ್‌ಜೆಡಿ-ಕಾಂಗ್ರೆಸ್ ಮಹಾಮೈತ್ರಿಕೂಟ ೨೦೧೫ರಲ್ಲಿ ಶೇ.೪೧.೮ರಷ್ಟು ಮತಗಳನ್ನು ಪಡೆದುಕೊಂಡಿತ್ತು. ೧೭೮ ಸ್ಥಾನಗಳು ಮೈತ್ರಿಕೂಟದ ಪಾಲಾಗಿದ್ದವು. ಆಗ ಬಿಜೆಪಿ ಶೇ.೩೪.೧ ಮತಗಳು ಮತ್ತು ೫೩ ಸ್ಥಾನಗಳನ್ನು ಪಡೆದಿತ್ತು. ಈಗ ‘ಇಂಡಿಯಾ’ ಮೈತ್ರಿಕೂಟ ಸಿಪಿಐ-ಎಂಎಲ್-ಲಿಬರೇಶನ್ ಅನ್ನು ಒಳಗೊಂಡಿದೆ. ಮಧ್ಯ, ದಕ್ಷಿಣ ಮತ್ತು ಉತ್ತರ ಬಿಹಾರದ ಹಲವಾರು ಭಾಗಗಳಲ್ಲಿ ಗಣನೀಯ ಮತ ಪಾಲನ್ನು ಹೊಂದಿರುವ ಅತಿದೊಡ್ಡ ಎಡಪಕ್ಷ ಅದಾಗಿದೆ. ಆದರೆ ಈಗಾಗಲೇ ಜೆಡಿಯು ಮಿತ್ರತ್ವವನ್ನು ಕಳೆದುಕೊಂಡಿರುವ ಬಿಜೆಪಿಗೆ ರಾಜ್ಯದಲ್ಲಿ ಯಾವುದೇ ಅರ್ಥಪೂರ್ಣ ಬೆಂಬಲವಾಗಿ ಮ್ತತೊಂದು ಪಕ್ಷ ಜೊತೆಯಾಗಿಲ್ಲ.

ಕೊಯಿರಿ ನಾಯಕ ಉಪೇಂದ್ರ ಕುಶ್ವಾಹಾ ಮತ್ತು ಮುಸಾಹರ್ ನಾಯಕ ಜಿತನ್ ರಾಮ್ ಮಾಂಝಿ ಅವರನ್ನು ಸೇರಿಸಿಕೊಳ್ಳುವ ವಿಚಾರದಲ್ಲಿ ಬಿಜೆಪಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದೆ. ಆದರೆ ಕುಶ್ವಾಹಾ ಮತ್ತು ಮಾಂಝಿ ೨೦೧೫ರ ಚುನಾವಣೆ ಹೊತ್ತಿನಲ್ಲಿ ಬಿಜೆಪಿಯೊಂದಿಗಿದ್ದರು. ಘೋಸಿಯಲ್ಲಿ ದಾರಾ ಸಿಂಗ್ ಚೌಹಾಣ್ ಮತ್ತು ಓಂಪ್ರಕಾಶ್ ರಾಜ್‌ಭರ್ ಕಂಡಿರುವ ಸ್ಥಿತಿಯನ್ನೇ ಮಾಂಝಿ ಮತ್ತು ಕುಶ್ವಾಹಾ ಅವರ ಪಕ್ಷಗಳು ಎದುರಿಸಬೇಕಾಗಿ ಬಂದರೂ ಅಚ್ಚರಿಯೇನಿಲ್ಲ.

(ಕೃಪೆ: thewire.in)

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ನಳಿನ್ ವರ್ಮಾ

contributor

Similar News