ಜಲಸಂಪನ್ಮೂಲ ಇಲಾಖೆಯೊಂದರಲ್ಲೇ 25 ಸಾವಿರ ಕೋ.ರೂ.ಗೂ ಅಧಿಕ ಮೊತ್ತ ಪಾವತಿಸಲು ಬಾಕಿ

Update: 2023-08-10 03:05 GMT

Photo: PTI

ಬೆಂಗಳೂರು: ಹಿಂದಿನ ಬಿಜೆಪಿ ಸರಕಾರವು ಕಳೆದ 2 ವರ್ಷದಲ್ಲಿ ಜಲಸಂಪನ್ಮೂಲ ಇಲಾಖೆ ಸೇರಿದಂತೆ ಒಟ್ಟು 30 ಇಲಾಖೆಗಳಲ್ಲಿ 1,42,005.92 ಕೋಟಿ ರೂ.ಮೊತ್ತದ ವಿವಿಧ ಕಾಮಗಾರಿಗಳಿಗೆ ಟೆಂಡರ್ ಅಂತಿಮಗೊಳಿಸಿರುವುದು ಇದೀಗ ಬಹಿರಂಗವಾಗಿದೆ.

ಗ್ಯಾರಂಟಿಗಳಿಗೆ ಸಂಪನ್ಮೂಲ ಕ್ರೋಢೀಕರಣದ ಬಗ್ಗೆ ಕಾಂಗ್ರೆಸ್ ಸರಕಾರವು ಲೆಕ್ಕಾಚಾರ ನಡೆಸುತ್ತಿರುವ ಬೆನ್ನಲ್ಲೇ ಹಿಂದಿನ ಬಿಜೆಪಿ ಸರಕಾರವು 1,42,005.92 ಕೋಟಿ ರೂ. ಮೊತ್ತದ ಟೆಂಡರ್ಅನ್ನು ಅಂತಿಮಗೊಳಿಸಿರುವುದು ಮುನ್ನೆಲೆಗೆ ಬಂದಿದೆ. ಅದೇ ರೀತಿ ಜಲಸಂಪನ್ಮೂಲ ಇಲಾಖೆಯೊಂದರಲ್ಲೇ ೨೫,೦೦೦ ಕೋಟಿ ರೂ.ಗೂ ಅಧಿಕ ಮೊತ್ತವನ್ನು ಗುತ್ತಿಗೆದಾರರಿಗೆ ಪಾವತಿಸಲು ಬಾಕಿ ಇದೆ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿಕೆ ನೀಡಿರುವ ನಡುವೆಯೇ ಜಲ ಸಂಪನ್ಮೂಲ ಇಲಾಖೆಯೊಂದರಲ್ಲಿಯೇ ೨೧,೩೦೯.೦೪ ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಟೆಂಡರ್ ಅಂತಿಮಗೊಂಡಿರುವುದು ಸಹ ಮಹತ್ವ ಪಡೆದುಕೊಂಡಿದೆ.

ಈಗಾಗಲೇ ಅಂತಿಮಗೊಂಡಿರುವ 1,42,005.92 ಕೋಟಿ ರೂ.ಮೊತ್ತದ ಟೆಂಡರ್ನ ಕಾರ್ಯಾದೇಶವನ್ನು ಗುತ್ತಿಗೆದಾರರಿಗೆ ನೀಡಬೇಕೇ, ಬೇಡವೇ ಅಥವಾ ಮುಂದೂಡಬೇಕೇ ಎಂಬ ಬಗ್ಗೆ ಇಲಾಖೆಗಳು ಗೊಂದಲದಲ್ಲಿವೆ. ಈ ಸಂಬಂಧ ಇಲಾಖೆಗಳ ಸಚಿವರಾದ ಪ್ರಿಯಾಂಕ್ ಖರ್ಗೆ, ಬೈರತಿ ಸುರೇಶ್ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

ಅಲ್ಲದೇ ಈ ಹಿಂದಿನ 2 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿರುವ ಗುತ್ತಿಗೆದಾರರಿಗೆ 36,784 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿದೆ. ಈ ಪೈಕಿ ಸಿವಿಲ್ ಗುತ್ತಿಗೆದಾರರಿಗೇ 25 ಸಾವಿರ ಕೋಟಿ ರೂ., ವಿದ್ಯುತ್ ಸರಬರಾಜು ಕಂಪೆನಿಗಳಿಗೆ 8,584 ಕೋಟಿ ರೂ. ಬಿಲ್ ಬಾಕಿ ಮರು ಪಾವತಿ ಮಾಡಬೇಕು. ಹೀಗಿರುವಾಗ 1,42,005.92 ಕೋಟಿ ರೂ. ಮೊತ್ತದ ಟೆಂಡರ್ಅನ್ನು ಅಂತಿಮಗೊಳಿಸಿರುವುದರಿಂದ ಬಿಡ್ನಲ್ಲಿ ಯಶಸ್ವಿಯಾಗಿರುವ ಟೆಂಡರ್ದಾರರಿಗೆ ಕಾಮಗಾರಿ ಚಾಲನೆಗೊಳಿಸಲು ಹಣ ಬಿಡುಗಡೆಯೂ ಸವಾಲು ಕೂಡ ಎದುರಾಗಿದೆ.

ವಿವಿಧ ಇಲಾಖೆಗಳು ಟೆಂಡರ್ಗೆ ಸಂಬಂಧಿಸಿದಂತೆ ಇ-ಪ್ರೊಕ್ಯೂರ್ಮೆಂಟ್ ಜಾಲತಾಣದಲ್ಲಿ ಅಂಕಿ ಅಂಶಗಳನ್ನು ಅಳವಡಿಸಿದೆ. ಇಲಾಖಾವಾರು ಅಂಕಿ ಅಂಶಗಳ ವಿವರಗಳು ‘the file.in’ಗೆ ಲಭ್ಯವಾಗಿವೆ.

100 ಕೋಟಿ ರೂ.ಗಿಂತ ಹೆಚ್ಚು ಕಾಮಗಾರಿ:

100 ಕೋಟಿ ರೂ.ಗಿಂತ ಹೆಚ್ಚು ಕಾಮಗಾರಿಗಳ ಸಂಬಂಧ ೬೪,೪೩೫.೬೫ ಕೋಟಿ ರೂ. ಮೊತ್ತದ ಟೆಂಡರ್ ಅಂತಿಮಗೊಳಿಸಿದೆ. ಇದರಲ್ಲಿ ಜಲಸಂಪನ್ಮೂಲ ಇಲಾಖೆಯು ೫೩ ಯೋಜನೆಗಳಿಗೆ ೨೧,೩೦೯.೦೪ ಕೋಟಿ ರೂ., ಗ್ರಾಮೀಣಾಭಿವೃದ್ಧಿ ಇಲಾಖೆಯು ೪೮ ಯೋಜನೆಗಳಿಗೆ ೨೧,೬೮೧.೮೭ ಕೋಟಿ ರೂ., ನಗರಾಭಿವೃದ್ಧಿ ಇಲಾಖೆ ೩೩ ಯೋಜನೆಗಳಿಗೆ ೮,೨೮೫.೩ ಕೋಟಿ ರೂ., ಇಂಧನ ಇಲಾಖೆಯು ೧೮ ಯೋಜನೆಗಳಿಗೆ ೫,೧೫೧.೪೯ ಕೋಟಿ ರೂ., ಸಣ್ಣ ನೀರಾವರಿಯಲ್ಲಿ ೧೧ ಯೋಜನೆಗಳಿಗೆ ೨,೧೪೭.೧೭ ಕೋಟಿ ರೂ., ಆರೋಗ್ಯ ಇಲಾಖೆಯು ೭ ಯೋಜನೆಗಳಿಗೆ ೧,೬೬೨.೬೪ ಕೋಟಿ ರೂ., ಟೆಂಡರ್ ಅಂತಿಮಗೊಂಡಿದೆ.

ವಸತಿ ಇಲಾಖೆಯು ೬ ಯೋಜನೆಗಳಿಗೆ ೮೦೦.೪೪ ಕೋಟಿ ರೂ., ವಾಣಿಜ್ಯ ಕೈಗಾರಿಕೆ ೩ ಯೋಜನೆಗಳಿಗೆ 1,591.29 ಕೋಟಿ ರೂ., ಲೋಕೋಪಯೋಗಿ ಇಲಾಖೆಯಲ್ಲಿ ೧ ಯೋಜನೆಗೆ ೧೫೭.೮೬ ಕೋಟಿ ರೂ., ಸಹಕಾರ ಇಲಾಖೆಯಲ್ಲಿ 1 ಯೋಜನೆಗೆ 289.93 ಕೋಟಿ ರೂ., ಮೂಲಭೂತ ಸೌಕರ್ಯದಲ್ಲಿ 1 ಯೋಜನೆಗೆ 849.97 ಕೋಟಿ ರೂ., ಕಂದಾಯ ಇಲಾಖೆಯಲ್ಲಿ ೧ ಯೋಜನೆಗೆ ೫೦೮.೬೬ ಕೋಟಿ ರೂ. ಸೇರಿ ಒಟ್ಟಾರೆ ೧೮೩ ಯೋಜನೆಗಳಿಗೆ ೬೪,೪೩೫.೬೫ ಕೋಟಿ ರೂ. ಮೊತ್ತದ ಟೆಂಡರ್ ಅಂತಿಮಗೊಂಡಿರುವುದು ಪಿಪಿಎಂಎಸ್ ತಂತ್ರಾಂಶದಿಂದ ಗೊತ್ತಾಗಿದೆ.

ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿಯೇ ಅತಿ ಹೆಚ್ಚು ಮೊತ್ತದ ಟೆಂಡರ್‌ಅನ್ನು ಅಂತಿಮಗೊಳಿಸಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯು ೩೨,೭೯೦.೦೧ ಕೋಟಿ ರೂ., ನಗರಾಭಿವೃದ್ಧಿ ಇಲಾಖೆಯು ೨೫,೧೭೨.೧೭ ಕೋಟಿ ರೂ., ಜಲಸಂಪನ್ಮೂಲ ಇಲಾಖೆಯು ೨೭,೯೫೮.೪೧ ಕೋಟಿ ರೂ. ಮೊತ್ತದ ಟೆಂಡರ್‌ಅನ್ನು ಅಂತಿಮಗೊಳಿಸಿರುವುದು ಇ-ಪ್ರೊಕ್ಯೂರ್ಮೆಂಟ್ ಜಾಲತಾಣದಿಂದ ತಿಳಿದು ಬಂದಿದೆ.

ಅದೇ ರೀತಿ ೫೦ ರಿಂದ ೧೦೦ ಕೋಟಿ ರೂ.ಮೊತ್ತದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ೩೦ ಇಲಾಖೆಗಳು ೮,೬೧೬.೧೪ ಕೋಟಿ ರೂ., ೨೫ರಿಂದ ೫೦ ಕೋಟಿ ರೂ.ಮೊತ್ತದ ಕಾಮಗಾರಿಗಳಿಗೆ ೧೨,೯೫೮.೬೧ ಕೋಟಿ ರೂ., ೧೦ ರಿಂದ ೫೦ ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ೧೪,೨೦೫.೪೮ ಕೋಟಿ ರೂ., 1ರಿಂದ 10 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ 41,388.19 ಕೋಟಿ ರೂ. ಮೊತ್ತದ ಟೆಂಡರ್ಗಳನ್ನು ಅಂತಿಮಗೊಳಿಸಿದೆ. ಒಟ್ಟಾರೆಯಾಗಿ 16,988 ಯೋಜನೆಗಳಿಗೆ 1,42,005.92 ಕೋಟಿ ರೂ. ಮೊತ್ತದಲ್ಲಿ ಟೆಂಡರ್ಗಳನ್ನು ಅಂತಿಮಗೊಳಿಸಿರುವುದು ತಿಳಿದು ಬಂದಿದೆ.

ಇದಲ್ಲದೇ ಪ್ರಮುಖ ಯೋಜನೆಗಳ ಕಾರ್ಯನಿರ್ವಹಣೆ ವ್ಯವಸ್ಥೆಯಡಿಯಲ್ಲಿ 15,225.69 ಕೋಟಿ ರೂ. ಟೆಂಡರ್ ಅಂತಿಮಗೊಂಡಿದೆ. ಈ ಪೈಕಿ947.29 ಕೋಟಿ ರೂ. ಬಿಡುಗಡೆಯಾಗಿದೆ. ಇದರಲ್ಲಿ ಗುತ್ತಿಗೆದಾರರಿಗೆ 787.40 ಕೋಟಿ ರೂ. ಸಂದಾಯವಾಗಿದ್ದರೇ ಇನ್ನೂ 159.90 ಕೋಟಿ ರೂ. ಬಾಕಿ ಉಳಿಸಿಕೊಂಡಿರುವುದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - jafar sadik

contributor

Contributor - -ಜಿ.ಮಹಾಂತೇಶ್

contributor

Similar News