ಅಲ್ಪಸಂಖ್ಯಾತರು, ದಲಿತರ ಪಾಲಿಗೆ ಎಲ್ಲಿದೆ ಸ್ವಾತಂತ್ರ್ಯ?

Update: 2023-08-15 04:16 GMT
Editor : jafar sadik

ಡಾ. ಮುಜಾಫರ್ ಅಸ್ಸಾದಿ

ಸ್ವಾತಂತ್ರ್ಯ ದಿನಾಚರಣೆಯಲ್ಲಿ ಎರಡು ಬಹುಮುಖ್ಯ ಕಥನಗಳಿವೆ. ಒಂದನೇ ಕಥನದಲ್ಲಿ ಸ್ವಾತಂತ್ರ್ಯ ಎಂಬುದು ಮರೀಚಿಕೆ. ಅದು ಕ್ರೌರ್ಯದ, ಅತ್ಯಾಚಾರದ, ಸ್ಥಾನಪಲ್ಲಟದ, ಭೂಮಿ ಕಳೆದುಕೊಂಡ ಮತ್ತು ಸ್ಥಳಾಂತರಗೊಂಡ ನೋವುಗಳ ಒಂದು ನೆನಪು. ಇದು ಬಹಳ ಮುಖ್ಯವಾಗಿ ಕಾಡುತ್ತಿರುತ್ತದೆ. ಮತ್ತೆ ಮತ್ತೆ ನೆನಪಿನ ಭಾಗವಾಗಿ, ಕೋಮುವಾದದ ಭಾಗವಾಗಿ, ಹಿಂಸೆಗಳ ನೆನಪಿನ ಭಾಗವಾಗಿ ಉತ್ಪಾದಿಸಲ್ಪಡುವ ಮತ್ತು ಮಾರಾಟಕ್ಕಿರುವ ಒಂದು ಸರಕಾಗಿ ಮಾರ್ಪಾಡಾಗುತ್ತದೆ. ಈ ಸರಮಾಲೆಯಲ್ಲಿ ಬರೀ ಸ್ವಾತಂತ್ರ್ಯದ ದಿನ ಮಾತ್ರ ನೆನಪಿನಲ್ಲುಳಿಯುವುದಿಲ್ಲ. ಅದು ಇತಿಹಾಸವನ್ನು ಕೆದಕುತ್ತದೆ. ಅದರಲ್ಲಿಯೂ ಮಧ್ಯಕಾಲೀನ ಸಂದರ್ಭದ ಲೂಟಿ, ಮತಾಂತರ, ನಾಶ ಇತ್ಯಾದಿಗಳು ಮತ್ತೆ ಮತ್ತೆ ಮುನ್ನೆಲೆಗೆ ಬರುತ್ತವೆ ಮತ್ತು ಸ್ಮತಿಯ ಭಾಗವಾಗುತ್ತವೆ.

ಇದರಲ್ಲಿ ಅಲ್ಪಸಂಖ್ಯಾತರು ತಕ್ಷಣದ ವೈರಿಗಳಾಗುತ್ತಾರೆ. ಇತಿಹಾಸದ ಘಟನೆಗಳಿಗೆ ಅವರು ಸಾಕ್ಷಿಯನ್ನಾಗಿರಿಸುತ್ತಾರೆ, ಔರಂಗಜೇಬ್, ಅಲ್ಲಾವುದ್ದೀನ್ ಖಿಲ್ಜಿ ಇವರು ಮಾಡಿದ ತಪ್ಪುಗಳಿಗೆ ಪ್ರಸಕ್ತ ಕಾಲಾವಧಿಯಲ್ಲಿ ಅಲ್ಪಸಂಖ್ಯಾತರು ಹೊಣೆಗಾರರಾಗುತ್ತಾರೆ. ಇವುಗಳ ನಡುವೆ ಅವರನ್ನು ಭಾರತದ ವಿಭಜನೆಯ ಹೊಣೆಗಾರರನ್ನಾಗಿ ಮಾಡುವುದೂ ಅಷ್ಟೇ ಸತ್ಯ.

ಈ ಸಂದರ್ಭದ ಬಲಿಪಶುಗಳು ಬಡ ಮುಸಲ್ಮಾನರು, ಹಿಂದುಳಿದ ಮುಸಲ್ಮಾನರು, ಕೆಳಜಾತಿಯ ಮುಸಲ್ಮಾನರು. ವಾಸ್ತವವಾಗಿ ಸ್ವಾತಂತ್ರ್ಯಾನಂತರ ಮುಸಲ್ಮಾನರು ನಾಲ್ಕು ಪ್ರಶ್ನೆಗಳಿಗೆ ಉತ್ತರವನ್ನು ನೀಡಬೇಕಾದ ಅನಿವಾರ್ಯತೆಯಲ್ಲಿ ತಮ್ಮ ಇಡೀ ಜೀವನವನ್ನು ಮೀಸಲಿಡಬೇಕಾಗಿತ್ತು. ಅದರಲ್ಲಿ ಬಹಳ ಮುಖ್ಯವಾಗಿರುವುದು ಭಾರತದ ಮೇಲೆ ತಮ್ಮ ವಿಧೇಯತೆಯನ್ನು ಮತ್ತೆ ಮತ್ತೆ ಪ್ರದರ್ಶಿಸುವುದು, ದೇಶಪ್ರೇಮವನ್ನು ಮತ್ತೆ ಮತ್ತೆ ಅಭಿವ್ಯಕ್ತಗೊಳಿಸುವುದು, ರಾಷ್ಟ್ರಭಕ್ತಿಯನ್ನು ಮತ್ತೆ ಮತ್ತೆ ಪುನರುಚ್ಚರಿಸುವುದು. ಇದು ಒಂದನೇ ಅಂಶ.

ಎರಡನೆಯದಾಗಿ, ರಾಷ್ಟ್ರ ನಿರ್ಮಾಣದಲ್ಲಿ ಭಾಗಿಯಾಗಿದ್ದೇವೆ ಎಂಬ ಸಾಕ್ಷ್ಯ ನೀಡುವುದು. ಇದರಲ್ಲಿ ಕೆಳಸ್ತರದ ಮುಸಲ್ಮಾನರು ಸಾಕ್ಷಿಯಾಗುತ್ತಾರೆ. ಸಿನೆಮಾ ನಟರು, ಕ್ರಿಕೆಟ್ ಆಟಗಾರರು, ಸಂಗೀತಗಾರರು ಇತ್ಯಾದಿಯವರು ಈ ಭೂಮಿಕೆಯ ಭಾಗವಾಗುವುದಿಲ್ಲ. ಅವರೆಲ್ಲರೂ ಕೂಡ ಭಾರತದ ಸಾಕ್ಷಿಪ್ರಜ್ಞೆಗೆ ಒಂದು ರೂಪಕವಾಗುತ್ತಾರೆ. ಆದರೆ ಬಡ ಮುಸಲ್ಮಾನರು ರೂಪಕಗಳಾಗದೆ, ವೈರಿಗಳಾಗುತ್ತಾರೆ, ಶತ್ರುಗಳಾಗುತ್ತಾರೆ, ‘ಬೇರೆಯವ’ರಾಗುತ್ತಾರೆ.

ಮೂರನೆಯದಾಗಿ, ಅಲ್ಪಸಂಖ್ಯಾತರು ಸಾಂಸ್ಕೃತಿಕ ಯಜಮಾನಿಕೆಗೆ ಯಾವುದೇ ತಡೆಯೊಡ್ಡದಿರುವಂಥದ್ದು. ಇಂದಿನ ಸಂದರ್ಭದ ಸಾಂಸ್ಕೃತಿಕ ಯಜಮಾನಿಕೆ ಎಲ್ಲಾ ಅಂಶಗಳಲ್ಲಿ ಕಂಡುಬಂದರೂ ಅದು ಭಾಷೆಯಿರಬಹುದು, ಆಹಾರ ಪದ್ಧತಿ ಇರಬಹುದು, ಉಡುಗೆ ಸಂಸ್ಕೃತಿ ಇರಬಹುದು, ಇವುಗಳ ಮೇಲೆ ಯಜಮಾನಿಕೆಯನ್ನು ಸಾಧಿಸಲು ಯತ್ನ ಮಾಡಿದರೂ ಕೂಡ ಅಲ್ಪಸಂಖ್ಯಾತರು ವೌನವಾಗಿರಬೇಕಾದದ್ದು ಬಹಳ ಮುಖ್ಯವಾದ ಅಂಶ. ನಾಲ್ಕನೆಯದಾಗಿ, ಅವಮಾನಿತರಾದರೂ ಯಾವುದೇ ರೀತಿಯ ಪ್ರತಿರೋಧವನ್ನು ಅಭಿವ್ಯಕ್ತಗೊಳಿಸದೆ ಇರುವುದು. ಅವಮಾನ ಬೇರೆ ಬೇರೆ ರೂಪಗಳಲ್ಲಿ ಅಭಿವ್ಯಕ್ತಗೊಳ್ಳುತ್ತದೆ. ಅದರಲ್ಲೂ ಉದ್ಯೋಗದ ನಿರಾಕರಣೆಯಲ್ಲಿ, ಅವಕಾಶಗಳ ನಿರಾಕರಣೆಯಲ್ಲಿ, ಸ್ಥಳಗಳ ನಿರಾಕರಣೆಯಲ್ಲಿ, ಆಹಾರ ಪದ್ಧತಿಯನ್ನು ಅವಹೇಳನ ಮಾಡುವ ರೂಪಕದಲ್ಲಿ ಕಂಡುಬರುತ್ತದೆ.

ಒಟ್ಟಾರೆ ಈ ದೃಷ್ಟಿಕೋನದಲ್ಲಿ ನಿರಾಕರಣೆ, ಅವಮಾನ, ದೌರ್ಜನ್ಯ, ಹಿಂಸೆ, ಪ್ರತಿನಿತ್ಯದ ವಿಷಯಗಳು. ಆದಕಾರಣವೇ ಈ ಸಂದರ್ಭದ ಬಹುಮುಖ್ಯ ಪ್ರಶ್ನೆ, ಸ್ವಾತಂತ್ರ್ಯ ಎಷ್ಟರ ಮಟ್ಟಿಗೆ ಒಂದು ಅನುಭವವಾಗಿದೆ? ಇಲ್ಲಿ ಸ್ವಾತಂತ್ರ್ಯ ಎಂಬುದು ಸೋತು ಹೋಗುತ್ತದೆ. ದಲಿತರಿಗೆ, ಅಲ್ಪಸಂಖ್ಯಾತರಿಗೆ ಒಂದೇ ವ್ಯತ್ಯಾಸವೆಂದರೆ ದಲಿತರ ಮೇಲಿನ ದೌರ್ಜನ್ಯಗಳನ್ನು ಇತಿಹಾಸದ ಆರಂಭದ ಘಟ್ಟದಿಂದಲೂ ನೋಡಬಹುದು. ಭಾರತದ ವಿಭಜನೆ ಸಂದರ್ಭದಲ್ಲಿ ಅಂಬೇಡ್ಕರ್,ದಲಿತರ ಪರವಾಗಿ ನಿಂತರೂ, ಅದ್ಭುತವಾದ ಸಂವಿಧಾನವನ್ನು ನೀಡಿದರೂ, ಊಳಿಗಮಾನ್ಯದಿಂದ ದಲಿತರನ್ನು ಸಂಪೂರ್ಣವಾಗಿ ಬಿಡುಗಡೆಗೊಳಿಸಲು ಸಾಧ್ಯವಾಗಲಿಲ್ಲ. ಅಲ್ಪಸಂಖ್ಯಾತರು ಸ್ವಾತಂತ್ರಾನಂತರ ಮಾರುಕಟ್ಟೆಯ ಮುಖಾಂತರ ಬಲಿಪಶುಗಳಾದರೆ, ದಲಿತರು ಈಗಲೂ ಊಳಿಗಮಾನ್ಯದ ಮೂಲಕ ಬಲಿಪಶುಗಳಾಗುತ್ತ ಇರುವುದು ವಾಸ್ತವ.

ಮೂರು ಹಂತದ ಭೂಮಸೂದೆ, ಮೀಸಲಾತಿ ಇತ್ಯಾದಿಗಳು ದಲಿತರಿಗೆ ಹೊಸ ರಾಜಕೀಯ ಪ್ರಜ್ಞೆಯನ್ನು, ಭೂ ಒಡೆತನವನ್ನು ಅತ್ಯಧಿಕವಾಗಿ ನೀಡಿದರೂ, ಈ ಪ್ರಮಾಣದ ದಲಿತರು ಈಗಲೂ ಬಡತನ ರೇಖೆಯಿಂದ ಕೆಳಗಿರುವುದು ಅಷ್ಟೇ ವಾಸ್ತವ. ಭೂಮಸೂದೆಗಳು, ಮೀಸಲಾತಿಗಳು ದಲಿತರನ್ನೇಕೆ ಶ್ರೀಮಂತರನ್ನಾಗಿಸಲಿಲ್ಲ? ಅವರೇಕೆ ಮಾರುಕಟ್ಟೆಯಲ್ಲಿ ಒಡೆಯರಾಗುವುದಿಲ್ಲ? ಅವರೇಕೆ ಮಾಲ್‌ಗಳ, ಕೈಗಾರಿಕೆಗಳ, ಉದ್ಯಮಗಳ ಒಡೆಯರಾಗುವುದಿಲ್ಲ?

ಈ ಪ್ರಶ್ನೆಗಳನ್ನು ಕೆದಕುತ್ತಾ ಹೋದರೆ ಸ್ವಾತಂತ್ರ್ಯದ ಪ್ರಶ್ನೆ ಮತ್ತೊಮ್ಮೆ ಧುತ್ತೆಂದು ನಮ್ಮೆದುರಾಗುತ್ತದೆ. ಉಳುವ, ಬದುಕುವ, ಉತ್ಪಾದಿಸುವ, ಸ್ವಾತಂತ್ರ್ಯ ಎಲ್ಲ ಕಡೆ ತಲುಪದಿರುವುದು ಕಂಡುಬರುವುದು ಸಹಜ. ಆದ ಕಾರಣವೇ ಸ್ವಾತಂತ್ರ್ಯ ಎಂಬುದನ್ನು ಅಷ್ಟು ಸುಲಭವಾಗಿ ಒಂದು ದೃಷ್ಟಿಕೋನದಿಂದ ವಿವರಿಸಲು ಸಾಧ್ಯವಿಲ್ಲ. ಎರಡನೇ ದೃಷ್ಟಿಕೋನದಲ್ಲಿ ಸ್ವಾತಂತ್ರ್ಯ ಎಂಬುದು ಒಂದು ವಿಜೃಂಭಣೆ, ಒಂದು ಉತ್ಸಾಹ. ಹಳೆಯ ನೆನಪುಗಳನ್ನು ಕಳಚಿ, ಹೊಸ ದೇಶವನ್ನು ಕಟ್ಟುವ ಉನ್ಮಾದದ ಹಂತ ಎನ್ನಬಹುದು. ಇದರಲ್ಲಿ ಮೂರು ತಾತ್ವಿಕ ನೆಲೆಗಟ್ಟುಗಳಿವೆ.

ಮೊದಲನೆಯದು, ನೆಹರೂ ತಾತ್ವಿಕ ನೆಲೆಗಟ್ಟು. ಈ ನೆಲೆಗಟ್ಟು ರಾಷ್ಟ್ರವನ್ನು ಕಟ್ಟುವ ನೆಲೆ ಬೇರೆ. ಈ ನೆಲೆಗಟ್ಟುಗಳಲ್ಲಿ ಬಹಳ ಮುಖ್ಯವಾಗಿರುವುದು, ಸಂಸದೀಯ ಸಂಸ್ಥೆಗಳನ್ನು ಕಟ್ಟುವುದು, ಪ್ರಜಾಪ್ರಭುತ್ವದ ನೆಲೆಗಟ್ಟುಗಳನ್ನು ವಿಸ್ತರಿಸುವುದು, ನೂರಾರು ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸುವುದು, ನೂರಾರು ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸುವುದು, ಸಾವಿರಾರು ಹಿಂದುಳಿದ ಜಾತಿಗಳ, ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯ ಅಸ್ಮಿತೆಯನ್ನು ಗುರುತಿಸುವುದು, ಜಾತ್ಯತೀತ ಮತ್ತು ಲಿಬರಲ್ ಪರಂಪರೆಯನ್ನು ವ್ಯಕ್ತಗೊಳಿಸುವುದು ಇತ್ಯಾದಿಗಳು ಸೇರಿಕೊಂಡಿದ್ದವು. ನೆಹರೂ ಕಾಲಘಟ್ಟವನ್ನು ಅವರು ತೀರಿಹೋಗುವ ಕಾಲಘಟ್ಟದ ತನಕ ಮಾತ್ರ ನೋಡಬಾರದು ಮತ್ತು ನೆಹರೂ ಕಾಲಘಟ್ಟದ ವಿಚಿತ್ರ ರೂಪ ಇಂದಿರಾ ಗಾಂಧಿಯವರ ಕಾಲಘಟ್ಟದಲ್ಲಿ ಅದರಲ್ಲೂ ಭೂಸುಧಾರಣೆ, ಮನಮೋಹನ್ ಸಿಂಗ್‌ರ ಕಾಲಘಟ್ಟದ ಆಹಾರ ಹಕ್ಕಿನ ಕಾಯ್ದೆ ಮತ್ತು ಮನ್‌ರೆಗಾ ಕಾಲಘಟ್ಟದಲ್ಲಿಯೂ ವಿಸ್ತೃತಗೊಂಡಿರುವುದನ್ನು ನೋಡಬಹುದು. ಇದಕ್ಕೆ ಒಂದಿಷ್ಟು ಹೊಡೆತಗಳು ಬಂದದ್ದು, ನವ ಉದಾರವಾದಿ ಜಾಗತೀಕರಣ. ಅದು ಹುಸಿ ಕನಸುಗಳನ್ನು ಹುಸಿ ಭ್ರಮೆಗಳನ್ನು ನಿರ್ಮಿಸುತ್ತ ಹೋಯಿತು. ಹುಸಿ ಕನಸಿನ ಲಾಭ ಪಡೆದವರು ಅದೇ ಬಂಡವಾಳಶಾಹಿಗಳು. ಇಲ್ಲಿರುವ ಒಂದು ದುರಂತವೆಂದರೆ, ಸ್ವಾತಂತ್ರ್ಯ ಸಂಭ್ರಮದ ನಡುವೆ ಸಾವಿನ ಶೋಕವನ್ನು ಆಚರಿಸುವುದು. ಇದಕ್ಕೆ ಸಾಕ್ಷಿ ಎಂಬಂತೆ ಲಕ್ಷಗಟ್ಟಲೆ ರೈತರ ಆತ್ಮಹತ್ಯೆಯನ್ನು ದಾಖಲಿಸಬೇಕು. ಈ ಸಾವುಗಳು ಮನುಷ್ಯ ನಿರ್ಮಿತ, ಉದಾರವಾದಿ ವ್ಯವಸ್ಥೆ ನಿರ್ಮಿತ ಸಾವುಗಳು. ಆದ ಕಾರಣ ಸ್ವಾತಂತ್ರ್ಯ ಎಂಬುದು ಸಂಭ್ರಮ ಮತ್ತು ಶೋಕಾಚರಣೆಯ ನಡುವಿನ ಭಾಗವಾಗುತ್ತದೆ. ಎರಡನೆಯದು, ಗಾಂಧಿತತ್ವ ಸ್ವಾತಂತ್ರ್ಯ ಸಂಭ್ರಮದ ಒಂದು ಭಾಗವಾದರೂ ಕೂಡ, ಅದರಲ್ಲಿ ಆಳವಾದ ನೋವು ಭ್ರಮನಿರಸನ, ಬೆಸೆದುಕೊಂಡಿತ್ತು. ಭ್ರಮನಿರಸನಕ್ಕೆ ಕಾರಣಗಳಿದ್ದವು. ಸ್ವಾತಂತ್ರ್ಯದ ನಂತರ ಗಾಂಧಿಯನ್ನು ಶಾಂತಿಯ ರೂಪಕವನ್ನಾಗಿ ಮಾಡಿದರೇ ಹೊರತು ಒಂದು ಕಟ್ಟಕಡೆಯ ವ್ಯಕ್ತಿಯ ಬಿಡುಗಡೆಯ ರೂಪಕವಾಗಿ ಮಾಡಲಿಲ್ಲ. ಗಾಂಧಿಯ ಆದರ್ಶದ ಕನಸುಗಳು ಅದರಲ್ಲಿಯೂ ಗುಡಿ ಕೈಗಾರಿಕೆಗಳು, ಸಾಮೂಹಿಕ ಜೀವನ, ಕೋಮು ಸೌಹಾರ್ದ ಇವುಗಳೆಲ್ಲ ನೇಪಥ್ಯಕ್ಕೆ ಸೇರಿಕೊಂಡವು. ಗಾಂಧಿ ಸ್ವಾತಂತ್ರ್ಯದ ನಂತರ ಚಳವಳಿಗಳ, ನಾಗರಿಕ ಸಮಾಜದ, ಅಂತರ್‌ರಾಷ್ಟ್ರೀಯ ಪ್ರತಿರೋಧದ ರೂಪಕವಾದರೇ ಹೊರತು ಅವರು ರಾಷ್ಟ್ರದ, ಅಭಿವೃದ್ಧಿಯ ರೂಪಕವಾಗಲಿಲ್ಲ. ಗಾಂಧಿ ಇಂದು ಅಪಹಾಸ್ಯದ ತುಣುಕು ಆಗಿರುವುದು ದುರಂತವೇ ಸರಿ.

ಮೂರನೆಯದು, ಅಂಬೇಡ್ಕರ್ ಬಹಳ ಮುಖ್ಯವಾಗಿ ಮುನ್ನೆಲೆಗೆ ಬಂದದ್ದು ಕೆಲವೇ ಕೆಲವು ವರ್ಷಗಳ ಹಿಂದೆ. ಅವರನ್ನು ದಲಿತರ ರೂಪಕವಾಗಿ ಸೀಮಿತಗೊಳಿಸಿದ್ದೇ ಇಲ್ಲಿರುವ ದುರಂತ. ಅಂಬೇಡ್ಕರ್ ಪ್ರತಿಪಾದಿಸಿದ ಸಾಮಾಜಿಕ ನ್ಯಾಯ, ಸಾಂವಿಧಾನಿಕ ಹಕ್ಕು, ಪ್ರಜಾಪ್ರಭುತ್ವದ ಒಳಗೊಳ್ಳುವಿಕೆ ಇವೆಲ್ಲವೂ ಸ್ವಾತಂತ್ರ್ಯ ಸಿಕ್ಕಿದ ಕೂಡಲೇ ದಲಿತರಿಗೆ ಸಿಗಲಿಲ್ಲ. ಅದನ್ನು ಸೋಲಿಸಲು ಬಹಳ ಯೋಜನೆಗಳನ್ನು ಮಾಡಿದ್ದನ್ನು ಇಲ್ಲಿ ನೆನಪಿಸಬೇಕು. ಒಂದು ಉದಾಹರಣೆ, ಭೂಮಸೂದೆಯ ಸೋಲು. ದೇಶದ ವಿವಿಧ ರಾಜ್ಯಗಳಲ್ಲಿ ಭೂಮಸೂದೆಗಳು ಜಾರಿಗೆ ಬಂದರೂ, ದಲಿತರು ಬಡತನ ರೇಖೆಯಿಂದ ಮೇಲಕ್ಕೆ ಬರಲು ಸಾಧ್ಯವಾಗಲಿಲ್ಲ. ಇದನ್ನೇ ಮೀಸಲಾತಿಯಲ್ಲಿಯೂ ನೋಡಬಹುದು. ಮೀಸಲಾತಿ ದಲಿತರಿಗೆ ಒಂದಿಷ್ಟು ಅವಕಾಶ ಕೊಟ್ಟಿದ್ದನ್ನು ಮರೆಯಬಾರದು. ಆದರೆ ಅದೇ ಮೀಸಲಾತಿ ಸಂಪೂರ್ಣವಾಗಿ ದಲಿತರನ್ನು ಒಳಗೊಳ್ಳಲಿಲ್ಲವೆಂದೇ ಹೇಳಲು ಸಾಕಷ್ಟು ಆಧಾರಗಳಿವೆ. ಇಲ್ಲಿರುವ ವೈರುಧ್ಯವೆಂದರೆ, ಸ್ವಾತಂತ್ರ್ಯದ ನಂತರ ಅಂಬೇಡ್ಕರ್ ದಲಿತ ರೂಪಕವಾಗುತ್ತಾರೆ. ಆದರೆ ದಲಿತರು ಅಧಿಕಾರವಂಚಿತ ಬಡ ಸಮುದಾಯವಾಗಿ ಉಳಿದುಬಿಡುತ್ತಾರೆ. ಸ್ವಾತಂತ್ರ್ಯ ಎಂಬುದು ಇಲ್ಲಿ ಒಂದು ಆಶಾಕಿರಣವಾಗುತ್ತದೆ, ಅಷ್ಟೆ, ಹೊರತು ವಾಸ್ತವದ ಸಂಪೂರ್ಣ ಬದಲಾವಣೆಯ ರೂಪಕವಾಗುವುದಿಲ್ಲ.

Argumentative Indian ಈಗ ನಾವು ಎರಡು ದೃಷ್ಟಿಕೋನಗಳ ನಡುವೆ ಇದ್ದೇವೆ. ಒಂದು, ವಿಜೃಂಭಣೆ; ಮತ್ತೊಂದು, ನೋವುಗಳ ಸ್ಮತಿ. ಸೌಹಾರ್ದ ಭಾರತವನ್ನು ಕಟ್ಟುವುದು ವಿಜೃಂಭಣೆಯ ಭಾಗವಾಗಬೇಕೇ ಹೊರತು ಪ್ರತಿನಿತ್ಯದ ಕ್ರೌರ್ಯಗಳಲ್ಲ. ಸಾದತ್ ಹಸನ್ ಮಂಟೊ ಹೇಳಿದಂತೆ, ಎಷ್ಟು ಜನ ಸತ್ತಿದ್ದಾರೆ ಎಂಬುದು ಮುಖ್ಯವಲ್ಲ; ಎಷ್ಟು ಮನುಷ್ಯರು ಸತ್ತಿದ್ದಾರೆ ಎಂಬುದು ಮುಖ್ಯ. ವಿಜೃಂಭಣೆಯಲ್ಲಿ ನೆಹರೂ ತಮ್ಮ ಪುಸ್ತಕ ‘ಡಿಸ್ಕವರಿ ಆಫ್ ಇಂಡಿಯಾ’ದಲ್ಲಿ ಹೇಳಿದಂತೆ ಗತಕಾಲದ ವೈಭವಗಳ ನೆನಪುಗಳಿರಲಿ, ಎಂ.ಎನ್.ರಾವ್ ಹೇಳಿದಂತೆ ಗತಕಾಲದ ತಾತ್ವಿಕ ಸಿದ್ಧಾಂತಗಳ ಚಾರ್ವಾಕ, ಶೂನ್ಯ ಇತ್ಯಾದಿ - ಕಥನಗಳಿರಲಿ ಅಥವಾ ಅಮರ್ತ್ಯ ಸೇನ್ ತಮ್ಮ ಕೃತಿಯಲ್ಲಿ ಹೇಳಿದಂತೆ ಸೌಹಾರ್ದ ಭಾರತದ, ಅದರಲ್ಲೂ ಕೂಡ ದೀನ್ ಇಲಾಹಿ ಎಂಬ ಪರಿಕಲ್ಪನೆಯ ಮರುಹುಟ್ಟು ಇರಲಿ. ಅದರೊಟ್ಟಿಗೆ ನಮ್ಮ ಕರ್ನಾಟಕದ ಸೂಫಿ ಪರಂಪರೆ, ದಾಸ ಸಾಹಿತ್ಯ, ವಚನ ಚಳವಳಿ, ದಲಿತ ಚಳವಳಿ, ರೈತ ಚಳವಳಿಗಳು ಕಟ್ಟಿದ ಸೌಹಾರ್ದ ಕರ್ನಾಟಕವಿರಲಿ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Similar News