ಯಾದಗಿರಿ | ಮಕ್ಕಳಲ್ಲಿ ಮಾನವೀಯ ಮೌಲ್ಯಗಳ ಮಹತ್ವ ತಿಳಿಸುವುದು ಮುಖ್ಯ : ಮಲ್ಲಿಕಾರ್ಜುನ ಕೌಳೂರು

Update: 2024-11-20 16:27 GMT

ಯಾದಗಿರಿ : ದೇಶದ ಸ್ವಾತಂತ್ರ್ಯ, ಐಕ್ಯತೆಗೆ ಪ್ರತೀಕವಾಗಿರುವ ಭಾರತ ಸೇವಾದಳವನ್ನು ಪ್ರತಿ ಶಾಲೆಯಲ್ಲಿ ಸಂಘಟಿಸಿ, ಶಿಕ್ಷಕರು ಮಕ್ಕಳಲ್ಲಿ ಸೇವಾ ಮನೋಭಾವ ಬೆಳೆಸಬೇಕು. ಮಾನವೀಯ ಮೌಲ್ಯಗಳ ಮಹತ್ವ ತಿಳಿಸಬೇಕು ಎಂದು ಭಾರತ ಸೇವಾದಳದ ಜಿಲ್ಲಾ ಅಧ್ಯಕ್ಷರಾದ ಮಲ್ಲಿಕಾರ್ಜುನರೆಡ್ಡಿ ಕೌಳೂರು ಹೇಳಿದ್ದಾರೆ.

ನಗರದ ಹೊರವಯದಲ್ಲಿರುವ ಸರಕಾರಿ ಆದರ್ಶ ವಿದ್ಯಾಲಯದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ ಯಾದಗಿರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಯಾದಗಿರಿಯವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕ ಹಾಗೂ ಶಿಕ್ಷಕಿಯರಿಗೆ ಒಂದು ವಾರದ ʼಜಿಲ್ಲಾಮಟ್ಟದ ಸಹಾಯಕ ಶಿಕ್ಷಣ ತರಬೇತಿ ಶಿಬಿರʼದ ಸಮಾರೋಪ ಸಮಾರಂಭದಲ್ಲಿ ಡಾ.ನಾ.ಸು.ಹರ್ಡಿಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರಿಗೆ ಅಗತ್ಯ ತರಬೇತಿ ನೀಡುವುದಕ್ಕಾಗಿ ಈ ಕಾರ್ಯಾಗಾರ ಏರ್ಪಡಿಸಲಾಗಿದೆ. ತಾವು ತಿಳಿದುಕೊಂಡ ಮಾಹಿತಿಯನ್ನು ಮಕ್ಕಳಿಗೆ ತಿಳಿಸಿದಾಗ ಮಾತ್ರ ಅದಕ್ಕೆ ಬೆಲೆ ಬರುತ್ತದೆ ಎಂದರು.

ಉಪನಿರ್ದೇಶಕ ಕಾರ್ಯಾಲಯದ ವಿಷಯ ಪರಿವೀಕ್ಷಕರಾದ ಎಚ್ ಹಣಮಂತನವರು ಮಾತನಾಡಿ, ಕರ್ನಾಟಕ ಗಾಂಧಿ ಹೆಸರಿನಿಂದ ಖ್ಯಾತಿ ಪಡೆದಿರುವ ನಾ.ಸು.ಹರ್ಡೀಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಶಿಸ್ತು, ಧೈರ್ಯ ಹಾಗೂ ತ್ಯಾಗ ಮನೋಭಾವನೆಯನ್ನು ಹಿಂದೂಸ್ತಾನಿ ಸೇವಾದಳದ ಮೂಲಕ ಪರಿಚಯಿಸಿ ಸ್ವಾತಂತ್ರ್ಯ ಸಂಗ್ರಾಮವನ್ನು ಚುರುಕುಗೊಳಿಸಿದ ಮಹನೀಯರಲ್ಲಿ ಪ್ರಮುಖರು, ಅವರ ಸ್ಥಾಪಿತದ ಸೇವಾದಳ ಸೇವೆಯಲ್ಲಿ ಸಾರ್ಥಕತೆ ಕಂಡುಕೊಳ್ಳುವ ಸಂಸ್ಥೆಯಾಗಿದ್ದು. ಎಲ್ಲಾ ಕಾಲದಲ್ಲೂ ಈ ಸಂಸ್ಥೆ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಮಾಜದ ಗೌರವಕ್ಕೆ ಪಾತ್ರವಾಗಿದೆ ಎಂದು ಹೇಳಿದರು.

ಮಕ್ಕಳಲ್ಲಿ ಸೇವಾದಳದ ಕುರಿತು ಅರಿವು ಮೂಡಿ ಬರಬೇಕು. ಶ್ರದ್ಧೆ, ಸ್ವಯಂ ದೇಶಾಭಿಮಾನ ಹಾಗೂ ನಾಗರಿಕ ಪ್ರಜ್ಞೆಯನ್ನು ಸೇವಾದಳದ ಚಟುವಟಿಕೆಗಳಿಂದ ಬೆಳೆಯುತ್ತದೆ. ಶಿಕ್ಷಕರು ತಮ್ಮ ಕರ್ತವ್ಯದ ಜತೆ ಸೇವಾದಳದ ಚಟುವಟಿಕೆಗಳನ್ನು ರೂಢಿಸಿಕೊಂಡು ಮಕ್ಕಳಲ್ಲಿ ದೇಶಾಭಿಮಾನ ಬಿತ್ತಿ ಉತ್ತಮ ಪ್ರಜೆಗಳನ್ನಾಗಿ ನಿರ್ಮಿಸಬೇಕು, ಅಲ್ಲದೆ ಈ ಸೇವಾದಳ ರಾಷ್ಟ್ರಧ್ವಜದ ಕುರಿತು ಗೌರವ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.

ಬಳಿಕ ಆರು ದಿನಗಳ ಶಿಬಿರದಲ್ಲಿ ಭಾಗವಹಿಸಿದ ಶಿಕ್ಷಕ, ಶಿಕ್ಷಕಿಯರಿಗೆ, ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.

ಬಸವಂತಪುರ ಶಾಲೆಯ ದೈಹಿಕ ಶಿಕ್ಷಕರಾದ ತುಳಜಾರವರು ನಿರೂಪಿಸಿದರು. ದೈಹಿಕ ಶಿಕ್ಷಕರಾದ ಜೋಗಪ್ಪನವರ ಸ್ವಾಗತಿಸಿದರು, ಸೈಯದ್ ಕಮರುದ್ದೀನ್, ವಂದಿಸಿದರು.

ಈ ಸಂದರ್ಭದಲ್ಲಿ ಭಾ.ಸೇ. ದಳದ ರಾಜ್ಯ ಉಪಾಧ್ಯಕ್ಷರಾದ ಚೆನ್ನಾರೆಡ್ಡಿ ಗೌಡ ಬಿಲಾರ್, ಪ್ರಭಾರಿ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳಾದ ಅನೀಲ ಕುಮಾರ, ಸರಕಾರಿ ಆದರ್ಶ ವಿದ್ಯಾಲಯದ ಮುಖ್ಯಗುರುಗಳಾದ ಶಂಕರಮ್ಮ, ನಿ. ದೈಹಿಕ ಶಿಕ್ಷಕರು ಹಾಗೂ ಭಾರತ ಸೇವಾದಳದ ನಿವೃತ್ತ ತಾಲೂಕು ಸಂಘಟಿಕರಾದ ಮಲ್ಲಿಕಾರ್ಜುನ ಬಳೆ, ಭಾ.ಸೇ.ದಳದ ಕಲ್ಬುರ್ಗಿ ಜಿಲ್ಲಾ ಸಂಘಟಿಕರಾದ ಚಂದ್ರಶೇಖರ್ ಜಮಾದಾರ್, ಚಿತ್ತಾಪುರ ತಾಲೂಕಿನ ನಿವೃತ್ತ ಸಂಘಟಿಕರಾದ ಸೈಯದ್ ಮೈಚೋದ್ದೀನ್, ಪತ್ರಕರ್ತ ಕುದಾನ್ ಸಾಬ್, ಅಜೀವ ಸದಸ್ಯರಾದ ಉಪನ್ಯಾಸಕ ಎಲ್. ಎನ್ ರೆಡ್ಡಿ, ವಿರೂಪಕ್ಷಯ್ಯ ದಂಡಗಿಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News