ಯಾದಗಿರಿ | ವಿಕಲಚೇತನರು ಸಾಧನ ಸಲಕರಣೆಗಳ ಸೌಲಭ್ಯ ಪಡೆದುಕೊಳ್ಳಿ: ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ.
ಯಾದಗಿರಿ : ಸರಕಾರದಿಂದ ಹಾಗೂ ಸಂಘ ಸಂಸ್ಥೆಗಳಿಂದ ವಿಕಲಚೇತನರಿಗಾಗಿ ವಿತರಿಸಲಾಗುತ್ತಿರುವ ಸಾಧನ ಸಲಕರಣೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ತಿಳಿಸಿದ್ದಾರೆ.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಎ.ಪಿ.ಡಿ ಸಂಸ್ಥೆ ವತಿಯಿಂದ ವಿಕಲಚೇತನರಿಗೆ ಸಾಧನೆ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಎಪಿಡಿ ಸಂಸ್ಥೆ ಜಿಲ್ಲೆಯಲ್ಲಿ ಮೊದಲಿನಿಂದಲೂ ಅಂಗವಿಕಲರಿಗೆ ಹಲವು ರೀತಿಯ ಸಹಾಯ ಮಾಡುತ್ತಾ ಬಂದಿರುವುದರಿಂದ ನಮ್ಮ ಜಿಲ್ಲೆಯ ವಿಕಲಚೇತನರಿಗೆ ತುಂಬಾ ಅನುಕೂಲವಾಗುತ್ತಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಶರಣಪ್ಪ ಪಾಟೀಲ್ ಹರ್ಷ ವ್ಯಕ್ತಪಡಿಸಿದರು.
ಎಪಿಡಿ ಸಂಸ್ಥೆ ಕಲಬುರಗಿ ಮತ್ತು ಬೆಳಗಾವಿ ವಿಭಾಗ ನಿರ್ದೇಶಕರಾದ ರಮೇಶ ದುಂಡಪ್ಪ ಗೊಂಗಡಿ ಮಾತನಾಡಿ, ಸರಕಾರದ ಸಹಯೋಗದೊಂದಿಗೆ ಉತ್ತಮ ಕಾರ್ಯನಿರ್ವಹಿಸುತ್ತಿದೆ. ಅಕ್ಟೋಬರ್ ತಿಂಗಳಲ್ಲಿ ಫಲಾನುಭವಿಗಳಿಗೆ ಅವಶ್ಯವಿರುವ ಸಾಧನ ಸಲಕರಣೆಗಳಾದ ವಾಕರ್, ಟ್ರೈಸೈಕಲ್, ಸ್ಟೀಕ್ ಕಾರ್ನರ್ ಚೇರ್, ಸ್ಟ್ಯಾಂಡಿಂಗ್ ಪ್ರೇಮ್, ಕ್ಯಾಲಿಫರ್, ಲಿಂಬ್, ಎಲಬೋ ಕ್ಲಚಸ್, ಗೈಟರ್ಸ, ಮುಂತಾದ ಸಲಕರಣೆಗಳು ಬಂದಿದ್ದು ಅದನ್ನು ವಿತರಣೆ ಮಾಡಲಾಗುತ್ತಿದೆ. ಇದರಿಂದ ಫಲಾನುಭವಿಗಳಿಗೆ ತುಂಬಾ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಟಿ.ಎಚ್.ಓ ಡಾ.ಹಣಮಂತರೆಡ್ಡಿ ಮಾತನಾಡಿ, ಸಂಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಸಾಧನೆ ಸಲಕರಣೆಯನ್ನು ಎಲ್ಲಾರೂ ಚೆನ್ನಾಗಿ ಸದಯಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ವಿನಾಯಕಗೌಡ ಮಾಲಿಪಾಟೀಲ, ನಗರ ಸಭೆ ಸದಸ್ಯರಾದ ಬಸ್ಸಮ್ಮ ಮಹೇಶ ಕುರುಂಕುಂಬ, ಶ್ಯಾಮಸನ ಮಾಳಿಕೇರಿ, ಡಾ.ಮಲ್ಲಣ್ಣಗೌಡ ಎಸ ಪಾಟೀಲ್, ಉತ್ತರಾದೇವಿ, ರಜನಿಕಾಂತ ಶೃಂಗೇರಿ, ಡಾ.ಮಲ್ಲಪ್ಪ.ಕೆ, ಡಾ.ಪದ್ಮಾನಂದ ಗಾಯಕ್ವಾಡ, ಡಾ.ಹಣಮಂತರಡ್ಡಿ, ಎಪಿಡಿ ಸಂಸ್ಥೆಯಿಂದ ಸಂಪ್ರೀತಾ ದೇವಪುತ್ರ, ರಮೇಶ ಕಟ್ಟಿಮನಿ, ಮತ್ತಿತರರು ಉಪಸ್ಥಿತರಿದ್ದರು.