ಯಾದಗಿರಿ | ಗುರುಮಠಕಲ್ ಶಿಶುಗಳ ಮರಣಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾತಿಗೆ ಕ್ರಮ : ಶಶಿಧರ್ ಕೋಸಂಬೆ

ಯಾದಗಿರಿ : ಅಕ್ರಮ ಮಕ್ಕಳ ದತ್ತು ಪ್ರಕ್ರಿಯೆ, ಅವಧಿ ಮೀರಿದ ವ್ಯಾಕ್ಸಿನ್ ವಿತರಣೆ ಹಾಗೂ ಗುರುಮಠಕಲ್ ಆಸ್ಪತ್ರೆಯಲ್ಲಿ ಶಿಶುಗಳು ಮರಣಕ್ಕೆ ಸಂಬಂಧಿಸಿದ ಈ ಮೂರು ಪ್ರಕರಣಗಳಲ್ಲಿ ಕ್ರಮ ಜರುಗಿಸುವಲ್ಲಿ ಆಡಳಿತ ವರ್ಗದಿಂದ ಆಗಿರುವ ಲೋಪ, ನಿಯಮ ಉಲ್ಲಂಘನೆ ಹಾಗೂ ವಿಳಂಬ ನೀತಿ ಅನುಸರಣೆ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಗಂಭೀರವಾಗಿ ಪರಿಗಣಿಸಿದ್ದು, ಆಯೋಗದಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಾಗುವುದು ಎಂದು ಆಯೋಗದ ಸದಸ್ಯರಾದ ಶಶಿಧರ್ ಕೋಸಂಬೆ ಅವರು ಹೇಳಿದರು.
ನಗರದ ತಾಯಿ ಮಕ್ಕಳ ಆಸ್ಪತ್ರೆಲ್ಲಿಂದು ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳ ದತ್ತು ಪ್ರಕ್ರಿಯೆಯಲ್ಲಿ ನಿಯಮಬಾಹಿರ, ಅಕ್ರಮ ದತ್ತು ಪ್ರಕ್ರಿಯೆ ಪ್ರಕರಣದಲ್ಲಿ ಕಾನೂನಾತ್ಮವಾಗಿ ಕ್ರಮ ಜರುಗಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದಿದೆ. ಅದರಂತೆ ಅವಧಿ ಮೀರಿದ ಔಷಧಿ ಹಾಗೂ ಲಸಿಕೆ ವಿತರಣೆ ವಿಷಯದಲ್ಲಿಯೂ ನಿರ್ಲಕ್ಷ್ಯ ಹಾಗೂ ವಿಳಂಬ ಧೋರಣೆ ಅನುಸರಿಸಿರುವುದು ಮತ್ತು ನಿಯಮಬಾಹಿರವಾಗಿ ವರ್ತಿಸಿರುವುದು ಕಂಡು ಬಂದಿದೆ ಎಂದು ಹೇಳಿದರು.
ಗುರುಮಠಕಲ್ ಆಸ್ಪತ್ರೆಯಲ್ಲಿ ಮೂರಕ್ಕು ಹೆಚ್ಚು ಶಿಶುಗಳಿಗೆ ಸಕಾಲಕ್ಕೆ ಚಿಕಿತ್ಸೆಗೆ ಒಳಪಡಿಸದೆ ಇರುವುದರಿಂದ ಸಾವನಪ್ಪಿರುವ ಘಟನೆ ನಡೆದಿದ್ದು, ಆಶಾ ಕಾರ್ಯಕರ್ತೆಯ ನಿರ್ಲಕ್ಷ ಹಾಗೂ ವೈದ್ಯಾಧಿಕಾರಿಗಳ ನಡುವೆ ಸಮನ್ವಯತೆ ಕೊರತೆ ಹಾಗೂ ಪ್ರಕರಣ ದಾಖಲಾಗಿದ್ದರೂ ಯಾರ ವಿರುದ್ಧವೂ ಕ್ರಮ ಆಗಿಲ್ಲ. ಇದರಲ್ಲೂ ವಿಳಂಬ ಧೋರಣೆ ಅನುಸರಿಸಿರುವಂತಹ ಲೋಪ ಕಂಡು ಬಂದಿದೆ. ಈ ಎಲ್ಲ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಸ್ವಯಂ ಪ್ರೇರಿತವಾಗಿ ಈ ಮೂರು ವಿಷಯಗಳಲ್ಲಿ ಆಯೋಗವು ಪ್ರಕರಣ ದಾಖಲಿಸಿಕೊಂಡು, ತಪ್ಪಿತಸ್ಥರ ವಿರುದ್ಧ ತೀವ್ರ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಮಕ್ಕಳ ಜೀವಹಾನಿ ವಿಷಯದಲ್ಲಿ ನಿರ್ಲಕ್ಷತೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಔಷಧಿ ಅವಧಿ ಮೀರಿದ ವಿಷಯದಲ್ಲಿ ಕೆಪಿಎಮ್ಇ ಕಾಯ್ದೆ ಹಾಗೂ ಕಾಸ್ಮೆಟಿಕ್ಸ್ ಕಾನೂನು ಪ್ರಕಾರ ಸೂಕ್ತ ಕ್ರಮ ಆಗಬೇಕು. ನಿರ್ಲಕ್ಷ ತೋರಿದ ಏಜೆನ್ಸಿ ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಆಗಬೇಕು. ಡಿವೈಎಸ್ಪಿ, ಡಿಹೆಚ್ಓ ಅವರು ಮಾನ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿ ಅವಶ್ಯಕ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಈವರೆಗೆ 84 ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾದ ಬಗ್ಗೆ ವರದಿಯಾಗಿದೆ. ಆಯಾ ಪೋಲಿಸ್ ಠಾಣೆಗಳಿಗೆ ನೀಡಿದ ದೂರುಗಳ ಮೇಲಿನ ಕ್ರಮಗಳ ಬಗ್ಗೆ ತಕ್ಷಣ ವರದಿ ಸಲ್ಲಿಸಬೇಕು. ಆರೋಗ್ಯ ಇಲಾಖೆ, ಮಕ್ಕಳ ರಕ್ಷಣಾ ಘಟಕ, ಆಸ್ಪತ್ರೆಗಳ ವೈದ್ಯಾಧಿಕಾರಿಗಳು, ಸರ್ಜನ್, ಪೋಲಿಸ್ ಇಲಾಖೆ ಅಧಿಕಾರಿಗಳು, ಔಷಧೀಯ ನಿಯಂತ್ರಣಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಅವರು ಸೂಚನೆ ನೀಡಿದರು.
ಸಭೆಯಲ್ಲಿ ಡಿವೈಎಸ್ಪಿ ಅರುಣಕುಮಾರ್,ಜಿಲ್ಲಾ ಆಸ್ಪತ್ರೆ ಸರ್ಜನ್ ರಿಜ್ವಾನಾ ಆಫ್ರೀನ್, ಡಿಹೆಚ್ಓ ಮಹೇಶ್ ಬಿರಾದಾರ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಹನುಮಂತರಾಯ ಕರಡಿ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಆಯೋಗದ ಸದಸ್ಯರು ವಿಶೇಷ ದತ್ತು ಕೇಂದ್ರ, ಆನಂದ ನರ್ಸಿಂಗ್ ಹೋಮ್, ಹಳೆಯ ಜಿಲ್ಲಾ ಆಸ್ಪತ್ರೆಯಲ್ಲಿ ವಿವಿಧ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು.