ಯಾದಗಿರಿ | ಶಾಲಾ-ಕಾಲೇಜುಗಳಲ್ಲಿ ಡಾ.ಅಂಬೇಡ್ಕರ್, ಬುದ್ಧ ಜಯಂತಿ ಆಚರಿಸಿ : ಮಲ್ಲಿಕಾರ್ಜುನ ಕ್ರಾಂತಿ

ಸುರಪುರ : ತಾಲೂಕಿನ ಎಲ್ಲಾ ಶಾಲಾ ಕಾಲೇಜು ವಸತಿ ನಿಲಯಗಳಲ್ಲಿ ಏ.4ರಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಹಾಗೂ ನಂತರ ಬರುವ ಮಹಾತ್ಮ ಗೌತಮ್ ಬುದ್ಧರ ಜಯಂತಿ ಕಡ್ಡಾಯವಾಗಿ ಆಚರಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಆಗ್ರಹಿಸಿದರು.
ಸಂಘಟನೆಯಿಂದ ನಗರದ ಮಹಾತ್ಮ ಗಾಂಧಿ ವ್ರತದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ ಮಾತನಾಡಿ, ಶಾಲಾ ಕಾಲೇಜುಗಳಿಗೆ ಈಗ ರಜೆ ನೀಡುತ್ತಿದ್ದು, ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ಉಪನ್ಯಾಸಕರು ಯಾರು ಇರುವುದಿಲ್ಲ. ಆದರೆ ಅಂಬೇಡ್ಕರ್ ಅವರ ಜಯಂತಿಯನ್ನು ಕಡ್ಡಾಯವಾಗಿ ಶಾಲಾ ಕಾಲೇಜುಗಳಲ್ಲಿ ಮತ್ತು ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಜಯಂತಿ ಆಚರಿಸಲು ಎಲ್ಲರೂ ಭಾಗವಹಿಸಬೇಕು. ಅದಕ್ಕಾಗಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಕಚೇರಿ ಸಿರಸ್ತೆದಾರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಾನಪ್ಪ ಕಟ್ಟಿಮನಿ, ನಿಂಗಣ್ಣ ಗೋನಾಲ, ಮಾನಪ್ಪ ಶೆಳ್ಳಗಿ, ಸಂಘಟನೆ ತಾಲೂಕು ಸಂಚಾಲಕ ಬಸವರಾಜ ದೊಡ್ಡಮನಿ, ರಾಮಣ್ಣ ಶೆಳ್ಳಗಿ, ಮಹೇಶ ಯಾದಗಿರಿ, ಶಿವಶಂಕರ ಬೊಮ್ಮನಹಳ್ಳಿ, ವೀರಭದ್ರಪ್ಪ ತಳವಾರಗೇರ, ಖಾಜಾಹುಸೇನ ಗುಡುಗುಂಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.