ಯಾದಗಿರಿ | ಏ.15 ರವರಗೆ ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ನಾರಾಯಣಪುರ ಜಲಾಶಯ ಬಳಿ ಪ್ರತಿಭಟನೆ

Update: 2025-03-26 21:47 IST
Photo of Protest
  • whatsapp icon

ಹುಣಸಗಿ : ಕೃಷ್ಣಾ ಎಡದಂಡೆ ಕಾಲುವೆಗಳಿಗೆ ಏ.15 ರವರೆಗೆ ನೀರು ಹರಿಸುವಂತೆ ಆಗ್ರಹಿಸಿ ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ) ನೇತೃತ್ವದಲ್ಲಿ ಹುಣಸಗಿ ಪಟ್ಟಣದಿಂದ ನಾರಾಯಣಪುರ ಬಸವಸಾಗರ ಜಲಾಶಯದ ವರೆಗೆ ಬೃಹತ್ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲಾಯಿತು.

ಹುಣಸಗಿ ಪಟ್ಟಣದಲ್ಲಿ ಮೊದಲು ಬಹಿರಂಗ ಸಮಾವೇಶ ನಡೆಸಿ ಮಾತನಾಡಿದ ರಾಜುಗೌಡ, ಜಲಾಶಯದಲ್ಲಿ ನೀರು ಇದ್ದರು ಕೂಡ ರೈತರಿಗೆ ಸರಕಾರ ನೀರು ಕೊಡುತ್ತಿಲ್ಲ ಎಂದು ಆರೋಪಿಸಿದರು.

ರಾತ್ರೋರಾತ್ರಿ ಆಂಧ್ರಕ್ಕೆ ನೀರು ಬಿಡುವ ಸರಕಾರ ಇಲ್ಲಿಯ ರೈತರು ಬೆಳೆ ಒಣಗುತ್ತಿವೆ ಎಂದು ನಿರಂತರವಾಗಿ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಮಾಡುತ್ತಿದ್ದರು ಸರಕಾರ ನೀರು ಬಿಡುತ್ತಿಲ್ಲ. ಈಗ ಬೆಳೆಗಳಿಗೆ ನೀರಿನ ಅಗತ್ಯವಿದೆ, ಏ.15 ರವರೆಗೆ ನೀರು ಬಿಡದಿದ್ದಲ್ಲಿ ಲಕ್ಷಾಂತರ ಎಕರೆ ಬೆಳೆ ಹಾಳಾಗುತ್ತದೆ, ಇದರಿಂದ ರೈತರಿಗೆ ಸಾವೆ ಗತಿಯಾಗುತ್ತದೆ. ಆದ್ದರಿಂದ ನೀರು ಕೊಡಿ ಇಲ್ಲವಾದಲ್ಲಿ ಒಂದಿಷ್ಟು ವಿಷ ಕೊಡಿ ಎಂದರು.

ನಂತರ ನಾರಾಯಣಪುರ ಜಲಾಶಯದ ವರೆಗೆ ರ‍್ಯಾಲಿ ನಡೆಸಿ ದಾರಿಯುದ್ದಕ್ಕೂ ರೈತರು ಜೊತೆಯಾದರು. ನಂತರ ಜಲಾಶಯದ ಬಳಿಯಲ್ಲಿ ಗೇಟ್‌ಗೆ ನುಗ್ಗಲು ಯತ್ನಿಸಿದ ರಾಜುಗೌಡ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು. ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹ ಪಡುವಂತಾಯಿತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ ಅವರ ನೇತೃತ್ವದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ರೈತರಿಗಾಗಿ ಎಂತಹ ಹೋರಾಟಕ್ಕೂ ಸಿದ್ದರಿದ್ದೇವೆ, ಜಲಾಶಯದಲ್ಲಿ ನೀರು ಇದ್ದರೂ, ಸರಕಾರ ನೀರು ಬಿಡುತ್ತಿಲ್ಲ. ನೀರು ಬಿಡದಿದ್ದಲ್ಲಿ ನಿರಂತರವಾಗಿ ಹೋರಾಟ ನಡೆಯಲಿದೆ. ಸರಕಾರ ಕೂಡಲೇ ಏ.15 ರವರೆಗೆ ಕಾಲುವೆಗೆ ನೀರು ಹರಿಸಬೇಕು.

- ರಾಜುಗೌಡ ಮಾಜಿ ಸಚಿವ

ಕೃಷ್ಣಾ ಎಡದಂಡೆ ಕಾಲುವೆಗಳಿಗೆ ಏ.15 ರವರೆಗೆ ನಿರಂತರವಾಗಿ ನೀರು ಹರಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ನಮ್ಮ ಕರ್ನಾಟಕ ಸೇನೆ, ಕರ್ನಾಟಕ ರಾಜ್ಯ ರೈತ ಸಂಘ ಸೇರಿದಂತೆ ಅನೇಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಸಾವಿರಾರು ಜನ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News