ಯಾದಗಿರಿ | ಆಲ್ದಾಳ ಪಂಚಾಯತ್ ಪಿಡಿಓ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ಯಾದಗಿರಿ : ಸುರಪುರ ತಾಲ್ಲೂಕಿನ ಆಲ್ದಾಳ ಗ್ರಾಮ ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಹಾಗೂ ಅಧ್ಯಕ್ಷರು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೋ.ಬಿ.ಕೃಷ್ಣಪ್ಪನವರು ಸ್ಥಾಪಿತ) ಸಂಘಟನೆ ಜಿಲ್ಲಾ ಘಟಕದ ಮುಖಂಡರು ತಾಲ್ಲೂಕು ಪಂಚಾಯತ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಘದ ಜಿಲ್ಲಾ ಸಂಚಾಲಕ ನಿಂಗಣ್ಣ ಗೋನಾಲ ಮಾತನಾಡಿ,15ನೇ ಹಣಕಾಸು ಯೋಜನೆಯಲ್ಲಿ ಬಂದಿರುವ ಅನುದಾನದಲ್ಲಿ ಯಾವುದೇ ಕ್ರೀಯಾಯೋಜನೆ ತಯಾರಿಸದೆ ಕೋಟ್ಯಾಂತರ ರೂಪಾಯಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ, ಇದಕ್ಕೆ ಕಾರಣರಾಗಿರುವ ಗ್ರಾಮ ಪಂಚಾಯತ್ ಹಿಂದಿನ ಮತ್ತು ಈಗಿನ ಅಭಿವೃಧ್ಧಿ ಅಧಿಕಾರಿಗಳು ಹಾಗೂ ಅಧ್ಯಕ್ಷರು ಕಾರಣರಾಗಿದ್ದು, ಕೂಡಲೇ ಇವರ ಮೇಲೆ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಬೇಡಿಕೆ ಈಡೇರಿಸದಿದ್ದಲ್ಲಿ ಡಿ.3ರಂದು ತಾಲ್ಲೂಕು ಪಂಚಾಯತ್ ಕಚೇರಿ ಮುಂದೆ ಮುಳ್ಳು ಬೇಲಿ ಹಚ್ಚಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಬರೆದ ಮನವಿಯನ್ನು ತಾಲ್ಲೂಕು ಪಂಚಾಯತ್ ವ್ಯವಸ್ಥಾಪಕರ ಮೂಲಕ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾ ಸಂಘಟನಾ ಸಂಚಾಲಕ ನಾಗರಾಜ ಓಕಳಿ, ತಾಲ್ಲೂಕು ಸಂಚಾಲಕ ರಮೇಶ ಪೂಜಾರಿ, ಮಲ್ಲಣ್ಣ ವಜ್ಜಲ್, ಗೋಪಾಲ ಗೋಗಿಕೇರಾ, ಭೀಮಣ್ಣ ಅಡ್ಡೊಡಗಿ, ನಾಗು ಗೋಗಿಕೇರಾ, ಹಣಮಂತ ಎಮ್.ದೊಡ್ಮನಿ, ಮಲ್ಲಪ್ಪ ಕೋಟೆ, ಶಿವಣ್ಣ ನಾಗರಾಳ, ಸದಾಶಿವ ದೊಡ್ಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.