ಬಿಷ್ಣೋಯಿ ಹತ್ಯೆ ಮಾಡಿದರೆ 1.11 ಕೋಟಿ ಬಹುಮಾನ: ಕರ್ಣಿ ಸೇನೆ
ಜೈಪುರ: ಜೈಲಿನಲ್ಲಿರುವ ಕುಖ್ಯಾತ ರೌಡಿ ಲಾರೆನ್ಸ್ ಬಿಷ್ಣೋಯಿಯನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದರೆ 1,11,11,111 ರೂಪಾಯಿ ಬಹುಮಾನ ನೀಡುವುದಾಗಿ ಕ್ಷತ್ರಿಯ ಕರ್ಣಿ ಸೇನೆ ಘೋಷಿಸಿದೆ. ಎನ್ ಸಿಪಿ ಮುಖಂಡ ಬಾಬಾ ಸಿದ್ದೀಕಿಯವರನ್ನು ತಮ್ಮ ಗುಂಪು ಹತ್ಯೆ ಮಾಡಿದ್ದಾಗಿ ಬಿಷ್ಣೋಯಿ ಗ್ಯಾಂಗ್ ಇತ್ತೀಚೆಗೆ ಒಪ್ಪಿಕೊಂಡಿತ್ತು. ಕ್ಷತ್ರಿಯ ಕರ್ಣಿ ಸೇನಾ ರಾಷ್ಟ್ರೀಯ ಅಧ್ಯಕ್ಷ ರಾಜ ಶೇಖಾವತ್ ವಿಡಿಯೊ ಹೇಳಿಕೆಯಲ್ಲಿ, "ಬಿಷ್ಣೋಯಿಯನ್ನು ಹತ್ಯೆ ಮಾಡುವ ಪೊಲೀಸ್ ಅಧಿಕಾರಿಗೆ 1,11,11,111 ರೂಪಾಯಿ ಬಹುಮಾನ ನೀಡುತ್ತೇನೆ" ಎಂದು ಘೋಷಿಸಿದ್ದಾರೆ ಎಂದು ನವಭಾರತ್ ಟೈಮ್ಸ್ ವರದಿ ಮಾಡಿದೆ.
ತಮ್ಮ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ಲಾರೆನ್ಸ್ ಬಿಷ್ಣೋಯಿಯನ್ನು ಎನ್ ಕೌಂಟರ್ ನಲ್ಲಿ ಹತ್ಯೆಮಾಡುವ ಭದ್ರತಾ ಪಡೆಯ ಯಾವುದೇ ಸಿಬ್ಬಂದಿಗೆ ಈ ಬಹುಮಾನ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಬಿಷ್ಣೋಯಿ ವಿಚಾರದಲ್ಲಿ ಕೇಂದ್ರ ಹಾಗೂ ಗುಜರಾತ್ ಸರ್ಕಾರದ ವಿರುದ್ಧವೂ ಅವರು ಕಿಡಿ ಕಾರಿದ್ದಾರೆ.
ಗಡಿಯಾಚೆಗೆ ಮಾದಕ ವಸ್ತು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಲ್ಲಿ ಬಂಧಿತನಾಗಿರುವ ಬಿಷ್ಣೋಯಿ ಗುಜರಾತ್ ನ ಸಾಬರಮತಿ ಜೈಲಿನಲ್ಲಿದ್ದಾನೆ. ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಎದುರು ನಡೆದ ಗುಂಡಿನ ದಾಳಿ ಪ್ರಕರಣದಲ್ಲೂ ಈತನ ವಿರುದ್ಧ ಆರೋಪವಿದೆ. ಆದರೆ ಮುಂಬೈ ಪೊಲೀಸರು ಇಂದಿಗೂ ಆತನನ್ನು ವಶಕ್ಕೆ ಪಡೆದುಕೊಳ್ಳುವುದು ಸಾಧ್ಯವಾಗಿಲ್ಲ.
"ಬಿಷ್ಣೋಯಿ ನಮ್ಮ ಹಿಂದಿನ ಮುಖಂಡ ಅಮರ್ ಶಹೀದ್ ಸುಖದೇವ್ ಸಿಂಗ್ ಗೊಗಮೇಡಿಯವರ ಹಂತಕ" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲಾಗಿರುವ ಈ ವಿಡಿಯೊ ಹೇಳಿಕೆಯಲ್ಲಿ ಕ್ಷತ್ರಿಯ ಕರ್ಣಿ ಸೇನಾ ಮುಖ್ಯಸ್ಥರು ಆಪಾದಿಸಿದ್ದಾರೆ. 2023ರ ಡಿಸೆಂಬರ್ 5ರಂದು ಸುಖದೇವ್ ಸಿಂಗ್ ಗೊಗಮೇಡಿಯವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಸಾಯಿಸಿದ್ದರು. ಈ ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಈ ಹತ್ಯೆಯ ಹೊಣೆ ಹೊತ್ತಿತ್ತು.