ಮೂಡುಬಿದಿರೆ: 'ಆಳ್ವಾಸ್' ವತಿಯಿಂದ 22ನೇ ಬೃಹತ್ ಇಫ್ತಾರ್ ಕೂಟ

Update: 2025-03-15 20:19 IST
ಮೂಡುಬಿದಿರೆ: ಆಳ್ವಾಸ್ ವತಿಯಿಂದ 22ನೇ ಬೃಹತ್ ಇಫ್ತಾರ್ ಕೂಟ
  • whatsapp icon

ಮೂಡುಬಿದಿರೆ, ಮಾ.15: ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇದರ 22ನೇ ವರ್ಷದ ಬೃಹತ್ ʼಆಳ್ವಾಸ್ ಇಫ್ತಾರ್ ಕೂಟ 2025ʼ ಶನಿವಾರ ಕೃಷಿ ಸಿರಿ ವೇದಿಕೆಯಲ್ಲಿ ನಡೆಯಿತು.

ಸಮಾರಂಭದಲ್ಲಿ ರಮಝಾನ್ ಕುರಿತು ಸಂದೇಶ ನೀಡಿದ ಜಮಾಅತೆ ಇಸ್ಲಾಮೀ ಹಿಂದ್ ನ ರಾಜ್ಯ ಕಾರ್ಯದರ್ಶಿ, ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮೊಹಮ್ಮದ್ ಕುಂಞಿ ಅವರು, ಕೆಲ ಶಕ್ತಿಗಳು ಎಲ್ಲೆಡೆ ದ್ವೇಷ ಹರಡುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಡಾ. ಮೋಹನ್ ಆಳ್ವ ಅವರ ನೇತೃತ್ವದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಇಫ್ತಾರ್ ಕೂಟ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದೆ‌. ಕೆಡುಕುಗಳನ್ನು ಕೆಡುಕುಗಳ ಮೂಲಕ ನಿವಾರಿಸಲು ಅಸಾಧ್ಯ. ಅದನ್ನು ಒಳಿತು, ಪ್ರೀತಿಯ ಸಂದೇಶದ ಮೂಲಕ ನಿವಾರಿಸಬೇಕು. ಈ ಕಾರ್ಯಕ್ರಮ ಸಮಾಜಕ್ಕೆ ಶಕ್ತಿಯುತ ಸಂದೇಶ ನೀಡುವ ಕಾರ್ಯಕ್ರಮ ಎಂದರು.

ರಮಝಾನ್ ಮನುಷ್ಯನ ಮನಸ್ಸು ಸ್ವಚ್ಛಗೊಳಿಸುವ ಆರಾಧನೆ. ಮನುಷ್ಯನನ್ನು ಕೆಡುಕುಗಳಿಂದ ಒಳಿತಿನೆಡೆಗೆ ಆಹ್ವಾನಿಸುವ ಮತ್ತು ಒಳಿತಿನೊಂದಿಗೆ ಮುನ್ನಡೆಸುವ ಮತ್ತು ಕಡುಕುಗಳಿಗೆ ಕಡಿವಾಣ ಹಾಕುವ ಆರಾಧನೆ. ಜಗತ್ತಿನ ಎಲ್ಲಾ ಮಾಲಿನ್ಯಗಳಿಗೆ ಮನುಷ್ಯನ ಮನಸ್ಸು ಮಲಿನವಾಗಿರುವುದೇ ಕಾರಣ ಎಂದ ಅವರು, ಇಂತಹಾ ಸೌಹಾರ್ದ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು. ಈ ಮೂಲಕ ಸೌಹಾರ್ದಕ್ಕೆ ಒತ್ತು ನೀಡಬೇಕು ಎಂದು ಮೊಹಮ್ಮದ್ ಕುಂಞಿ ಹೇಳಿದರು.

ಬೀದರ್ ನ ಶಾಹೀನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.

ಸಮಾರಂಭದಲ್ಲಿ ಡಾ. ಮೋಹನ್ ಆಳ್ವ, ಭಾರತ್ ಮುಸ್ತಫಾ, ವಿವೇಕ್ ಆಳ್ವ, ಮೊದಲಾದವರು ಉಪಸ್ಥಿತರಿದ್ದರು.

ಅಬುಲ್ ಅಲಾ ಪುತ್ತಿಗೆ ಅವರು ಕಾರ್ಯಕ್ರಮ ನಿರೂಪಿಸಿದರು.‌ ಈ ಇಫ್ತಾರ್ ಕೂಟದಲ್ಲಿ ವಿದ್ಯಾರ್ಥಿಗಳಲ್ಲದೆ ಸ್ಥಳೀಯರ ಸಹಿತ ಸುಮಾರು 10,000ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

ಇಫ್ತಾರ್ ಬಳಿಕ ನಮಾಝ್‌ಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಇಫ್ತಾರ್ ನಲ್ಲಿ ಹಣ್ಣು ಹಂಪಲು, ಸಮೋಸ, ಶರಬತ್ತುಗಳಲ್ಲದೆ ಇಫ್ತಾರ್ ಬಳಿಕ ಮಟನ್ ಬಿರಿಯಾನಿ, ಚಿಕನ್ ಮಸಾಲಾ, ಚಿಕನ್ ಕಬಾಬ್, ಸಲಾಡ್ ಗಳಿದ್ದವು. ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿತ್ತು.

 

 

 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News