ಮೂಡುಬಿದರೆ: ಪ್ರಸಾದ್ ನೇತ್ರಾಲಯದ ನೂತನ ಕಣ್ಣಿನ ಆಸ್ಪತ್ರೆ ಶುಭಾರಂಭ

Update: 2025-03-16 20:09 IST
ಮೂಡುಬಿದರೆ: ಪ್ರಸಾದ್ ನೇತ್ರಾಲಯದ ನೂತನ ಕಣ್ಣಿನ ಆಸ್ಪತ್ರೆ ಶುಭಾರಂಭ
  • whatsapp icon

ಮೂಡುಬಿದಿರೆ: ಕಣ್ಣಿನ ಶಸ್ತ್ರಚಿಕಿತ್ಸೆ ಮೂಲಕ ಅವಿಭಜಿತ ಜಿಲ್ಲೆಗೆ ಕೀರ್ತಿ ತಂದಿರುವ ಪ್ರಸಾದ್ ನೇತ್ರಾಲಯದ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಮ್ಮ ಮೂಡುಬಿದಿರೆಯಲ್ಲಿ ಆರಂಭಗೊಂಡಿರುವುದು ಸಂತೋಷದ ವಿಚಾರ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದ್ದಾರೆ.

ಆಸ್ಪತ್ರೆಯು ಶಿಬಿರಗಳ ಮೂಲಕ ಕಣ್ಣಿನ ತಜ್ಞ ವೈದ್ಯರನ್ನು ಗ್ರಾಮೀಣ ಭಾಗಗಳಿಗೆ ತಲುಪಿಸಿ ಕಣ್ಣಿನ ತಪಾಸಣೆ, ಜನರಲ್ಲಿ ಕಣ್ಣಿನ ಆರೋಗ್ಯದ ಕುರಿತು ಪ್ರಜ್ಞೆ ಮೂಡಿಸುತ್ತಿರುವುದು ಶ್ಲಾಘನೀಯ. ನಗರ ನಿವಾಸಿಗಳಿಗೆ ಸಿಗುವ ಉತ್ತಮ ಗುಣಮಟ್ಟದ ಕಣ್ಣಿನ ಚಿಕಿತ್ಸೆ ಮೂಡುಬಿದಿರೆ ತಾಲೂಕು ಹಾಗೂ ಆಸುಪಾಸಿನ ಗ್ರಾಮಾಂತರ ಜನರಿಗೂ ಸಿಗುವಂತಾಗಲಿ ಎಂದು ಹೇಳಿದರು.

ಅವರು ಮೂಡುಬಿದಿರೆಯ ಬಡಗ ಬಸದಿ ಎದುರಿನ ಫಾರ್ಚೂನ್-2 ವಾಣೀಜ್ಯ ಸಂಕೀರ್ಣದಲ್ಲಿ ಶುಭಾರಂಭಗೊಂಡ ಪ್ರಸಾದ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ 10ನೇ ಸುಸಜ್ಜಿತ ಚಿಕಿತ್ಸಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು, ದೇಶದಲ್ಲಿ 3 ಕೋಟಿಗೂ ಅಧಿಕ ಜನರು ವಿವಿಧ ರೀತಿಯಲ್ಲಿ ಕಣ್ಣಿನ ದೋಷವನ್ನು ಹೊಂದಿದ್ದು, ಕಳೆದ ವರ್ಷ ವಿವಿಧ ಪ್ರಕಾರದ 83 ಲಕ್ಷದಷ್ಟು ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ನಮ್ಮ ವೈದ್ಯರು ಮಾಡಿದ್ದಾರೆ. ಈ ವರ್ಷ 90ಲಕ್ಷ ಮಂದಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಮಾಡುವ ಗುರಿಯನ್ನು ದೇಶದ ನೇತ್ರ ವೈದ್ಯರು ಹೊಂದಿದ್ದಾರೆ. ಕಣ್ಣಿನ ಸಣ್ಣಪುಟ್ಟ ದೋಷಗಳು ಬಂದಾಗ ನಿರ್ಲಕ್ಷ್ಯ ಮಾಡದೇ, ಸಕಾಲ ದಲ್ಲಿ ವೈದ್ಯರ ಸಲಹೆ ಪಡೆದು ಚಿಕಿತ್ಸೆಗೆ ಒಳಗಾಗಬೇಕು ಎಂದು ನುಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಲ್ಕಿ ಮೂಡುಬಿದಿರೆ ಕ್ಷೇತ್ರ ಶಾಸಕ ಉಮಾನಾಥ ಎ. ಕೋಟ್ಯಾನ್ ಅವರು, ಅನಾರೋಗ್ಯ ಪೀಡಿತರು ಸಮಸ್ಯೆಗಳನ್ನು ಹೇಳುವಾಗ, ವೈದ್ಯರು ತಾಲ್ಮೆಯಿಂದ ಕೇಳಬೇಕು. ರೋಗಿಗಳ ಸಮಸ್ಯೆ ಕೇಳಿದ ಬಳಿಕ ಅವರಿಗೆ ಸಲಹೆ ಮತ್ತು ಸಮಾಧಾನ ತರುವಂತಹಾ ಎರಡು ಉತ್ತಮ ಮಾತುಗಳನ್ನು ಆಡಿದರೆ ಅದು ಅನಾರೋಗ್ಯ ಪೀಡಿತ ವ್ಯಕ್ತಿಯ ಶೇ.50 ರೋಗವನ್ನು ಗುಣ ಪಡಿಸುತ್ತದೆ ಎಂದರು.

ಸಮಾರಂಭದಲ್ಲಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್, ವಿರೋಧ ಪಕ್ಷದ ನಾಯಕ ಪಿ.ಕೆ. ಥೋಮಸ್, ಉದ್ಯಮಿ ಮಹೇಂದ್ರ ವರ್ಮ ಜೈನ್ ಮುಖ್ಯ ಅತಿಥಿ ಯಾಗಿದ್ದರು. ಪ್ರಸಾದ್‌ ನೇತ್ರಾಲಯ ಕಣ್ಣಿನ ಆಸ್ಪತ್ರೆ ಸಮೂಹ ಸಂಸ್ಥೆಗಳ ನಿರ್ದೇಶಕ ಕೆ. ರಘುರಾಮ್‌ ರಾವ್‌, ರಶ್ಮಿ ಕೃಷ್ಣಪ್ರಸಾದ್, ಆಸ್ಪತ್ರೆಯ ಆಡಳಿತ ಪಾಲುದಾರರಾದ ಡಾ. ಸ್ಮೃತಿ, ಡಾ. ವಿಕ್ರಮ್‌ ಜೈನ್‌, ಡಾ. ಹರೀಶ್‌ ಶೆಟ್ಟಿ, ವೇದಿಯಲ್ಲಿ ಉಪಸ್ಥಿತರಿದ್ದರು.

ಪ್ರಸಾದ್ ನೇತ್ರಾಲಯ ಸಮೂಹ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣ ಪ್ರಸಾದ್ ಕೂಡ್ಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭ ಆಸ್ಪತ್ರೆಯ ನಿರ್ಮಾಣಕ್ಕೆ ಸಹಕರಿಸಿದ ಆದಿತ್ಯ ಹಾಗೂ ರಾಜೇಶ್ ಕೂಡ್ಲು ಅವರನ್ನು ಸನ್ಮಾನಿಸಲಾಯಿತು. ಪ್ರೊ. ಬಾಲಕೃಷ್ಣ ಮಡ್ಡೋಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.





Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News