ಜೂ.11: ದ.ಕ.ಜಿಲ್ಲೆಯಲ್ಲಿ ರೆಡ್ ಅಲರ್ಟ್

Update: 2024-06-10 17:46 GMT

ಮಂಗಳೂರು, ಜೂ.10: ದ.ಕ.ಜಿಲ್ಲೆಯಲ್ಲಿ ಸೋಮವಾರ ದಿನಪೂರ್ತಿ ಮೋಡ ಕವಿದ ವಾತಾವರಣ ಕಂಡು ಬಂದಿತ್ತು. ಮಧ್ಯಾಹ್ನದಿಂದ ಮುಂಗಾರು ಮಳೆಯು ತುಸು ಬಿರುಸು ಪಡೆದುಕೊಂಡಿತ್ತು.

ಜೂ.11ರಂದು ದ.ಕ.ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಜೂ.12ರಂದು ಆರೆಂಜ್, ಜೂ.13 ಮತ್ತು 14ರಂದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ತಿಳಿಸಿದೆ.

ಜಿಲ್ಲೆಯಲ್ಲಿ ಗರಿಷ್ಠ 29.4 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ದ.ಕ.ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗಿನವರೆಗೆ ಉಳ್ಳಾಲದಲ್ಲಿ ಗರಿಷ್ಠ 31.1 ಮಿಲಿ ಮೀಟರ್ ಮಳೆಯಾಗಿದೆ. ಜಿಲ್ಲೆಯ ಸರಾಸರಿ ಮಳೆ 33 ಮಿ.ಮೀ. ಆಗಿದೆ. ಬೆಳ್ತಂಗಡಿ 26.4 ಮಿ.ಮೀ, ಬಂಟ್ವಾಳ 21.8 ಮಿ.ಮೀ, ಮಂಗಳೂರು 30.1 ಮಿ.ಮೀ, ಪುತ್ತೂರು 29 ಮಿ.ಮೀ, ಸುಳ್ಯ 25.7 ಮಿ.ಮೀ, ಮೂಡುಬಿದಿರೆ 24.9 ಮಿ.ಮೀ, ಕಡಬ 23.2 ಮಿ.ಮೀ. ಮಳೆ ದಾಖಲಾಗಿದೆ.

*ಮೂಲ್ಕಿ ತಾಲೂಕು ವ್ಯಾಪ್ತಿಯಲ್ಲಿ ರವಿವಾರ ಸುರಿದ ಭಾರೀ ಮಳೆಗೆ ಹಲವು ಕಡೆಗಳಲ್ಲಿ ಹಾನಿಯಾಗಿವೆ. ಗಾಳಿ ಮಳೆಗೆ ಕಿಲ್ಪಾಡಿ ಕುಬೆವೂರು ರೈಲ್ವೆ ಮೇಲ್ಸೇತುವೆ ಬಳಿ ವಿದ್ಯುತ್ ಕಂಬಕ್ಕೆ ಮರದ ಗೆಲ್ಲು ಬಿದ್ದ ಪರಿಣಾಮ ವಿದ್ಯುತ್ ಕಂಬ ತುಂಡಾಗಿದೆ. ಸ್ಥಳಕ್ಕೆ ಮೂಲ್ಕಿ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಶಿಮಂತೂರು ಬಾವ ಬಳಿಯ ವಿಶ್ವನಾಥ ಶೆಟ್ಟಿ ಎಂಬುವರ ಮನೆಯ ಎದುರು ಭಾಗದ ಗೋಡೆ ಕುಸಿದು ಹಾನಿ ಸಂಭವಿಸಿದೆ. ಮುಲ್ಕಿ ತಾಲೂಕು ವ್ಯಾಪ್ತಿಯ ಕಿನ್ನಿಗೋಳಿ, ಪಕ್ಷಿಕೆರೆ, ಕಟೀಲು, ಪಡುಪಣಂಬೂರು, ಅತಿಕಾರಿಬೆಟ್ಟು, ಮುಲ್ಕಿ ನಗರ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News