ನ.23ರಂದು ಅರಿಯಡ್ಕ, ಕೆದಂಬಾಡಿ ಗ್ರಾಪಂ ತೆರವಾದ ಸ್ಥಾನಕ್ಕೆ ಉಪಚುನಾವಣೆ
ಪುತ್ತೂರು: ಅರಿಯಡ್ಕ, ಕೆದಂಬಾಡಿ ಗ್ರಾ.ಪಂಗಳಲ್ಲಿ ಸದಸ್ಯರ ಮರಣದಿಂದ ತೆರವಾದ ತೆರವಾದ ತಲಾ ಒಂದು ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದ್ದು, ಚುನಾವಣೆಗೆ ಸಂಬಂಧಿಸಿದಂತೆ ನ.6ರಂದು ಅಧಿಸೂಚನೆ ಪ್ರಕಟಗೊಂಡು ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಗಳು ಪ್ರಾರಂಭಗೊಂಡಿದೆ. ನ.23ರಂದು ಈ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ ಎಂದು ಪುತ್ತೂರು ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.
ಅವರು ಗುರುವಾರ ಪುತ್ತೂರಿನ ತಹಶೀಲ್ದಾರ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಅರಿಯಡ್ಕ ಗ್ರಾ.ಪಂನ ಮಾಡ್ನೂರು 2ನೇ ವಾರ್ಡ್‍ನಲ್ಲಿ ಪ.ಜಾತಿಗೆ ಮೀಸಲಿರಿಸಿದ ಸ್ಥಾನದಲ್ಲಿ ಚುನಾಯಿತರಾಗಿದ್ದ ಶಂಕರ ಮಾಡಂದೂರು ಮತ್ತು ಕೆದಂಬಾಡಿ ಗ್ರಾ.ಪಂನ ವಾರ್ಡ್-4ರಲ್ಲಿ ಸಾಮಾನ್ಯ ಮೀಸಲು ಸ್ಥಾನದಲ್ಲಿ ಚುನಾಯಿತರಾಗಿದ್ದ ಭಾಸ್ಕರ ರೈ ಮಿತ್ರಂಪಾಡಿ ಇವರಿಬ್ಬರ ನಿಧನದಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಚುನಾವಣೆಗೆ ನ.6ರಂದು ಅಧಿಸೂಚನೆ ಪ್ರಕಟಗೊಂಡಿದೆ. ನಾಮಪತ್ರ ಸಲ್ಲಿಸಲು ನ.12 ಅಂತಿಮ ದಿನವಾಗಿದೆ. ರಜಾದಿನ ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ 11ರಿಂದ ಸಂಜೆ 3 ಗಂಟೆ ಒಳಗಾಗಿ ನಾಮಪತ್ರ ಸಲ್ಲಿಸಬಹುದು. ನ.13 ನಾಮ ಪತ್ರ ಪರಿಶೀಲನೆ, ನ.15 ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದೆ. ನ.23 ಮತದಾನ ಪ್ರಕ್ರಿಯೆಗಳು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತದಾನ ನಡೆಯಲಿದೆ. ನ.26ರಂದು ಮತ ಎಣಿಕೆ ನಡೆದು ಫಲಿ ತಾಂಶ ಘೋಷಣೆಯಾಗಲಿದೆ. ಈ ತನಕ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ತಿಳಿಸಿದರು.
ಚುನಾವಣೆಯ ಮಾಸ್ಟರ್ ಟ್ರೈನರ್ ಪ್ರಶಾಂತ್ ನಾಯಕ್ ಮಾತನಾಡಿ, ಅರಿಯಡ್ಕ ಗ್ರಾ.ಪಂನ ಮಾಡ್ನೂರು 2ನೇ ವಾರ್ಡ್ ನಲ್ಲಿ ಒಟ್ಟು 1537 ಮತದಾರರಿದ್ದು, ಎರಡು ಮತಗಟ್ಟೆಗಳಾಗಿ ವಿಂಗಡಿಸಲಾಗಿದೆ. ಮತಗಟ್ಟೆ ಸಂಖ್ಯೆ 92ರ ಕಾವು ಸಮುದಾಯ ಭವನದಲ್ಲಿ 397 ಪುರುಷ, 416 ಮಹಿಳೆಯರು ಒಟ್ಟು 813 ಮತದಾರರು ಹಾಗೂ ಮತಗಟ್ಟೆ ಸಂಖ್ಯೆ 92ಎ ಮಾಡನ್ನೂರು ಹಿ.ಪ್ರಾ ಶಾಲಾ ಮತಗಟ್ಟೆಯಲ್ಲಿ 356 ಪುರುಷ, 368 ಮಹಿಳೆಯವರು ಸೇರಿದಂತೆ ಒಟ್ಟು 726 ಮಂದಿ ಮತದಾರರು ಮತ ಚಲಾಯಿಸಲಿದ್ದಾರೆ. ಕೆದಂಬಾಡಿ ವಾರ್ಡ್‍ನ 4ರಲ್ಲಿ 368 ಪುರುಷ ಹಾಗೂ 403 ಮಹಿಳಾ ಮತ ದಾರರು ಸೇರಿದಂತೆ ಒಟ್ಟು 801 ಮತ ಚಲಾಯಿಸಲಿದ್ದಾರೆ. ತಿಂಗಳಾಡಿ ಹಿ.ಪ್ರಾ ಶಾಲೆಯ ಮತದಾನ ನಡೆಯಲಿದೆ. ಈ ಬಾರಿ ಮತದಾರರ ಎಡಗೈ ಹೆಬ್ಬರಳಿಗೆ ಶಾಯಿ ಗುರುತು ಹಾಕಲಾಗುವುದು. ನೋಟಾ ಮತದಾನಕ್ಕೆ ಅವಕಾಶವಿರುವು ದಿಲ್ಲ. ಮೂರು ಮತಗಟ್ಟೆಗಳು ಸಾಮಾನ್ಯ ಮತಗಟ್ಟೆಗಳಾಗಿದೆ. ಆಯಾ ವಾರ್ಡ್‍ಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಅನ್ವಯವಾಗಲಿದೆ. ಮತಗಟ್ಟೆ 200 ಮೀ. ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಯಾಗಲಿದೆ. 100 ಮೀ. ವ್ಯಾಪ್ತಿಯ ಒಳಗಡೆ ಯಾವುದೇ ಪ್ರಚಾರ ನಡೆಸುವಂತಿಲ್ಲ. ಅಭ್ಯರ್ಥಿಗಳು ಪಕ್ಷದ ಚಿಹ್ನೆ ಅಥವಾ ಪತಾಕೆಗಳನ್ನು ಬಳಸುವಂತಿಲ್ಲ ಎಂದು ಮಾಹಿತಿ ನೀಡಿದರು.
ಚುನಾವಣಾಧಿಕಾರಿಗಳ ನೇಮಕ
ಅರಿಯಡ್ಕ ಗ್ರಾ.ಪಂಗೆ ಚುನಾವಣಾಧಿಕಾರಿಯಾಗಿ ಕೆಯ್ಯೂರು ಕೆಪಿಎಸ್‍ನ ಪ್ರಾಂಶುಪಾಲ ಇಸ್ಮಾಯಿಲ್, ಸಹಾಯಕ ಚುನಾವಣಾಧಿಕಾರಿಯಾಗಿ ನೆಟ್ಟಣಿಗೆ ಮುಡ್ನೂರು ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ದೇವಿಪ್ರಕಾಶ್ ಶೆಟ್ಟಿ, ಕೆದಂಬಾಡಿ ಗ್ರಾ.ಪಂಗೆ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪೊಡಿಯಾ, ಕುಂಬ್ರ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಪ್ರಸಾದ್ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಪ್ರಶಾಂತ್ ನಾಯಕ್ ತಿಳಿಸಿದರು.
ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಉಪತಹಶೀಲ್ದಾರ್ ಸುಲೋಚನಾ ಪಿ.ಕೆ ಉಪಸ್ಥಿತರಿದ್ದರು.