ಭಾಷೆಗಳ ಉಳಿವಿಗೆ ದೇಶದಲ್ಲಿ ಸಮರ್ಪಕ ಭಾಷಾ ನೀತಿ ಅಗತ್ಯ: ಡಾ.ಪುರುಷೋತ್ತಮ ಬಿಳಿಮಲೆ
ಮಂಗಳೂರು, ನ.4: ದೇಶದಲ್ಲಿ ಸಾಕಷ್ಟು ಭಾಷೆಗಳು ಅವನತಿ ಹೊಂದಿವೆ ಮತ್ತು ಅವನತಿಯ ದಾರಿಯಲ್ಲಿವೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಸಮರ್ಪಕ ಭಾಷಾ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರಕಾರವನ್ನು ಆಗ್ರಹಿಸ ಬೇಕಾಗಿದೆ ಎಂದು ಹಿರಿಯ ವಿದ್ವಾಂಸ ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ಅವರು ಇಂದು ನಗರದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ಕೊಂಕಣಿ ಸಮ್ಮೇಳನದಲ್ಲಿ ಬರಹಗಾರರ ಸವಾಲುಗಳ ಬಗ್ಗೆ ಹಮ್ಮಿಕೊಂಡಿದ್ದ ಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಈ ಹಿಂದಿನ ದೇಶದ ಜನಗಣತಿಯ ಪ್ರಕಾರ ಯಾವ ಭಾಷೆಗಳು ನಮ್ಮ ನಡುವಿನಿಂದ ಕಣ್ಮರೆಯಾಗಿವೆ ಎಂದು ಗಮನಿಸಬಹುದು. ಉದಾಹರಣೆಗೆ 2001 ಮತ್ತು 2011ರ ಗಣತಿಯನ್ನು ಗಮನಿಸಿದಾಗ ಕೊಂಕಣಿ ಮಾತನಾಡುವವರ ಸಂಖ್ಯೆ 10 ವರ್ಷಗಳಲ್ಲಿ ಶೇ.9.2ಕ್ಕೆ ಇಳಿಕೆ ಯಾಗಿದೆ. ಅದೇ ರೀತಿ ಕೊಡವ ಭಾಷೆ ಮಾತನಾಡುವವರ ಸಂಖ್ಯೆ ಶೇ.30ಕ್ಕೆ ಇಳಿಕೆಯಾಗಿದೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ಕೊರಗ ಭಾಷೆ ಮಾತನಾಡುವವರ ಸಂಖ್ಯೆ 55,000 ಜನರಿದ್ದರು. ಆದರೆ 2011ರ ಗಣತಿಯಲ್ಲಿ ಕೊರಗ ಭಾಷೆ ಮಾತನಾಡುತ್ತಿರುವವರ ಸಂಖ್ಯೆ ಕೇವಲ 5,000. ಇನ್ನು 5-6ವರ್ಷಗಳಲ್ಲಿ ಈ ಭಾಷೆ ಮಾತನಾಡುವವರೇ ಸಿಗದೆ ಇರಬಹುದು ಎಂದರು.
ಕೊಂಕಣಿ ಭಾಷೆಯೂ ಈ ಹಾದಿಯಲ್ಲೇ ಸಾಗುತ್ತಿದೆ. ಇದು ನಡೆಯುತ್ತಿದ್ದರೂ ಬರಹಗಾರರಾದ ನಾವು ಏನು ಮಾಡದೆ ಕಣ್ಮುಚ್ಚಿ ಕುಳಿತಿರುವುದು ಇಂದಿನ ಸವಾಲು. ದೇಶದಲ್ಲಿ ತ್ರಿಭಾಷಾ ಸೂತ್ರ ಇದೆ. ಅದು ಸಮರ್ಪಕವಾಗಿ ಅನುಷ್ಠಾನ ಗೊಂಡರೆ ಉತ್ತಮ. ಆದರೆ ಒಂದೊಂದು ರಾಜ್ಯದಲ್ಲಿ ಈ ಭಾಷಾ ಸೂತ್ರ ಒಂದೊಂದು ರೀತಿ ಅನುಷ್ಠಾನಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಸಾಯುತ್ತಿರುವ ನಮ್ಮ ಭಾಷೆಯನ್ನು ಬರಹಗಾರರು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಕೊರೋನ ಸಂದರ್ಭದಲ್ಲಿ ಜನ ಸಾಮಾನ್ಯರ ಬವಣೆಗಳ ಬಗ್ಗೆ ಬರಹಗಾರರು ಕೃತಿಗಳನ್ನು ರಚಿಸಿರುವುದು ಕಡಿಮೆ. ಇಂತಹ ಸಂದರ್ಭದಲ್ಲಿ ನಮ್ಮ ಸುತ್ತ ಮುತ್ತಲಿನ ವಿದ್ಯಾಮಾನಗಳನ್ನು ಬರಹಗಾರರು ಕಣ್ತೆರೆದು ನೋಡಬೇಕಾಗಿದೆ. ಅದನ್ನು ತಮ್ಮ ಭಾಷೆಯಲ್ಲಿ ಪ್ರಾಮಾಣಿಕವಾಗಿ ತಿಳಿಸಬೇಕಾಗಿದೆ. ಇತರ ಭಾಷೆಗಳಿಗೂ ಭಾಷಾಂತರ ಮಾಡಿ ಜನ ಓದುವಂತೆ ಮಾಡಬೇಕಾಗಿದೆ. ಸರಕಾರವು ಭಾಷೆಯ ಉಳಿವಿಗೆ ಸಮರ್ಪಕವಾದ ಭಾಷಾ ನೀತಿಯನ್ನು ಜಾರಿಗೊಳಿಸಬೇಕಾಗಿದೆ ಎಂದು ಬಿಳಿಮಲೆ ತಿಳಿಸಿದರು.
ಗೋಷ್ಠಿಯಲ್ಲಿ ಉದಯ ವಾಜಪೇಯಿ, ಮಮತಾ ಜಿ. ಸಾಗರ್ ಉಪಸ್ಥಿತರಿದ್ದರು.