ವಿಧಾನ ಪರಿಷತ್ ಉಪಚುನಾವಣೆಗೆ ಆಡಳಿತ ವ್ಯವಸ್ಥೆ ಸಜ್ಜು: ಉಭಯ ಜಿಲ್ಲೆಗಳ 6,032 ಜನಪ್ರತಿನಿಧಿಗಳು ಮತದಾನಕ್ಕೆ ಅರ್ಹ

Update: 2024-10-18 13:03 GMT

ಮಂಗಳೂರು: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಉಪ ಚುನಾವಣೆಯಲ್ಲಿ 392 ಮತಗಟ್ಟೆಗಳನ್ನು ತೆರೆಯಲಾಗುತ್ತದೆ. ಉಭಯ ಜಿಲ್ಲೆಗಳು ಗ್ರಾಪಂ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಹಾಗೂ ಶಾಸಕರು, ಸಂಸದರ ಸಹಿತ 6,032 ಜನಪ್ರತಿನಿಧಿಗಳು ಮತದಾನ ಮಾಡಲು ಅರ್ಹರಿರುತ್ತಾರೆ.

ದ.ಕ. ಜಿಲ್ಲೆಯಲ್ಲಿ 223 ಗ್ರಾಪಂಗಳ 3,263 ಸದಸ್ಯರು, ಮಂಗಳೂರು ಮಹಾನಗರ ಪಾಲಿಕೆಯಲ್ಲಿ 65, ಉಳ್ಳಾಲ ಮತ್ತು ಪುತ್ತೂರು ನಗರ ಸಭೆಗಳಲ್ಲಿ 64, ಮೂಡುಬಿದಿರೆ, ಬಂಟ್ವಾಳ, ಸೋಮೇಶ್ವರ ಪುರಸಭೆಗಳಲ್ಲಿ 74 ಹಾಗೂ ಮುಲ್ಕಿ, ಬೆಳ್ತಂಗಡಿ, ಕಡಬ, ವಿಟ್ಲ, ಕೋಟೆಕಾರ್ ಪಟ್ಟಣ ಪಂಚಾಯತ್‌ನಲ್ಲಿ 86 ಮಂದಿ ಮತ ಚಲಾಯಿಸಲು ಅರ್ಹರಾಗಿರುತ್ತಾರೆ.

ಉಡುಪಿ ಜಿಲ್ಲೆಯಲ್ಲಿ 153 ಗ್ರಾಪಂಗಳ 2,355 ಸದಸ್ಯರು, ಉಡುಪಿ ನಗರ ಸಭೆಯಲ್ಲಿ 36, ಮೂರು ಪುರಸಭೆಗಳಲ್ಲಿ 72 ಹಾಗೂ ಒಂದು ನಗರ ಪಂಚಾಯತ್‌ನಲ್ಲಿ 17 ಮಂದಿ ಮತ ಚಲಾಯಿಸಲು ಅರ್ಹರಾಗಿರುತ್ತಾರೆ.

ದ.ಕ. ಜಿಲ್ಲೆಯ 234 ಮತಗಟ್ಟೆಯಲ್ಲಿ 3,552 (ಪುರುಷರು 1,710 ಮತ್ತು ಮಹಿಳೆಯರು 1,842 ( ಮತದಾರರು ಹಾಗೂ ಉಡುಪಿ ಜಿಲ್ಲೆಯ 158 ಮತಗಟ್ಟೆಯಲ್ಲಿ 2,480 (ಪುರುಷರು 1,195 ಮತ್ತು ಮಹಿಳೆಯರು 1,285) ಮತದಾರರಿರುವರು. ತಾಲೂಕುವಾರು ಬೆಳ್ತಂಗಡಿ ತಾಲೂಕಿನಲ್ಲಿ ಅತ್ಯಧಿಕ 49 ಮತಗಟ್ಟೆಗಳಿವೆ. ಬಂಟ್ವಾಳ ತಾಲೂಕಿನಲ್ಲಿ ಅತ್ಯಧಿಕ 793 ಮತದಾರರಿದ್ದಾರೆ. ಹೆಬ್ರಿ ತಾಲೂಕಿನಲ್ಲಿ ಅತಿ ಕಡಿಮೆ 9 ಮತಗಟ್ಟೆಗಳು ಹಾಗೂ 122 ಮತದಾರರಿದ್ದಾರೆ.

ದ.ಕ. ಜಿಲ್ಲೆಯ ಮಡಪ್ಪಾಡಿ ಗ್ರಾಪಂ ಹಾಗೂ ಕೊಣಾಜೆ ಗ್ರಾಪಂನ ಮತಗಟ್ಟೆಗಳಲ್ಲಿ ಅತೀ ಕಡಿಮೆ ಅಂದರೆ ತಲಾ 5 ಹಾಗೂ ಉಡುಪಿ ಜಿಲ್ಲೆಯ ಹಳ್ಳಿಹೊಳೆ ಮತ್ತು ಎಡಮೊಗೆ ಗ್ರಾಪಂನ ಮತಗಟ್ಟೆಗಳಲ್ಲಿ ತಲಾ 6 ಮತದಾರರಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಮತಗಟ್ಟೆಯಲ್ಲಿ 65 ಹಾಗೂ ಉಡುಪಿ ಜಿಲ್ಲೆಯ ಶಿರೂರು ಗ್ರಾಪಂನಲ್ಲಿ 44 ಅತೀ ಹೆಚ್ಚು ಮತದಾರರಿರುವರು ಎಂದು ಪ್ರಕಟನೆ ತಿಳಿಸಿದೆ.

ಚುನಾವಣೆ ನಡೆಸಲು 392 ಮತಗಟ್ಟೆಗಳಿಗೆ ತಲಾ 470 ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಮೈಕ್ರೋ ಆಬ್ಸರ್ವರ್‌ ಗಳನ್ನು ನೇಮಿಸಲಾಗಿದೆ. ಅ.24ರಂದು ನಗರದ ಸಂತ ಅಲೋಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆಯು ನಡೆಯಲಿದೆ.

ಚುನಾವಣಾ ಕಣದಲ್ಲಿ ಕಿಶೋರ್ ಬಿ.ಆರ್. (ಬಿಜೆಪಿ), ರಾಜು ಪೂಜಾರಿ (ಕಾಂಗ್ರೆಸ್), ಅನ್ವರ್ ಸಾದತ್.ಎಸ್ (ಎಸ್‌ಡಿಪಿಐ), ದಿನಕರ ಉಳ್ಳಾಲ (ಪಕ್ಷೇತರ) ಸ್ಪರ್ಧಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News