‘ಲೋನ್ ಆ್ಯಪ್’ ಸಾಲ ಪಡೆದ ಯುವತಿಗೆ ಬೆದರಿಕೆ ಆರೋಪ: ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲು

Update: 2023-08-24 15:59 GMT

ಮಂಗಳೂರು, ಆ.24: ಲೋನ್ ಆ್ಯಪ್ ಮೂಲಕ ಸಾಲ ಪಡೆದ ಯುವತಿಯಿಂದ ಹೆಚ್ಚಿನ ಹಣಕ್ಕೆ ಬೇಡಿಕೆ ಸಲ್ಲಿಸಿ ನಗ್ನ ಚಿತ್ರ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾನು ಎ.15ರಂದು ಗೂಗಲ್ ಪ್ಲೇ ಸ್ಟೋರ್‌ನಿಂದ ‘ಕ್ವಿಕ್ ಮನಿ’ ಎಂಬ ಲೋನ್ ಆ್ಯಪ್ ಡೌನ್‌ಲೋಡ್ ಮಾಡಿ 10,000 ರೂ. ಸಾಲಕ್ಕೆ ಅರ್ಜಿ ಹಾಕಿದ್ದೆ. ತಕ್ಷಣ ತನ್ನ ಖಾತೆಗೆ 7,500 ರೂ. ಜಮೆಯಾಗಿತ್ತು. ಕೆಲವು ದಿನಗಳ ಬಳಿಕ ಸಾಲ ಮರುಪಾವತಿ ಮಾಡಿದ್ದೆ. ಬಳಿಕ ಹಲವು ವಾಟ್ಸ್‌ಆ್ಯಪ್ ಸಂಖ್ಯೆಗಳಿಂದ ಕರೆ ಮಾಡಿದ ಅಪರಿಚಿತರು ಪುನಃ ಸಾಲ ಪಡೆಯಬೇಕು ಎಂದು ಒತ್ತಾಯಿಸಿದರಲ್ಲದೆ ತನ್ನ ಖಾತೆಗೆ 14,000 ರೂ. ಜಮೆ ಮಾಡಿದ್ದರು. ಅದನ್ನು ಕೂಡ ತಾನು ಮರುಪಾವತಿ ಮಾಡಿದ್ದೆ. ಆ ಬಳಿಕವೂ ತನಗೆ ಕರೆ ಮಾಡಿದ ಅಪರಿಚಿತರು ಹೆಚ್ಚಿನ ಹಣ ಪಾವತಿ ಮಾಡುವಂತೆ ಒತ್ತಾಯಿಸಿದರಲ್ಲದೆ ತನ್ನ ಖಾತೆಯಿಂದ 51,000 ರೂ. ವರ್ಗಾಯಿಸಿಕೊಂಡರು. ಅಲ್ಲದೆ ಮತ್ತಷ್ಟು ಹಣ ನೀಡುವಂತೆ ಒತ್ತಾಯಿಸಿದರು. ಒಂದು ವೇಳೆ ಹಣ ನೀಡದಿದ್ದರೆ ನಿನ್ನ ಫೋಟೊವನ್ನು ಹುಡುಗನೊಂದಿಗೆ ನಗ್ನವಾಗಿ ಇರುವಂತೆ ಎಡಿಟ್ ಮಾಡಿ ನಿನ್ನ ಸ್ನೇಹಿತರು, ಸಂಬಂಧಿಕರಿಗೆ ಕಳುಹಿಸುವುದಾಗಿ, ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಸೆನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News