ಅ.6-7ರಂದು ‘ಆಳ್ವಾಸ್ ಪ್ರಗತಿ- 2023’: 192 ಕಂಪನಿಗಳು ನೋಂದಣಿ; 13605 ಉದ್ಯೋಗಾವಕಾಶಗಳು!

Update: 2023-10-04 09:32 GMT

ಮಂಗಳೂರು, ಅ.4: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಅ. 6 ಮತ್ತು 7ರಂದು ಮೂಡಬಿದ್ರೆಯ ಆಳ್ವಾಸ್ ವಿದ್ಯಾಗಿರಿ ಆವರಣದಲ್ಲಿ ಹಮ್ಮಿಕೊಂಡಿರುವ ು ‘ಆಳ್ವಾಸ್ ಪ್ರಗತಿ- 2023’ ಉದ್ಯೋಗ ಮೇಳದಲ್ಲಿ ಈಗಾಗಲೇ 192 ಪ್ರಮುಖ ಕಂಪನಿಗಳು ನೋಂದಾಯಿಸಿಕೊಂಡಿದ್ದು, 13,605 ಉದ್ಯೋಗಾವಕಾಶಗಳನ್ನು ಒದಗಿಸಲಿವೆ.

ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಅ. 6ರಂದು ಬೆಳಗ್ಗೆ 9.30ಕ್ಕೆ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಬೆಳ್ತಂಗಡಿ ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜಾ ಮತ್ತು ಡಿ. ವೇದವ್ಯಾಸ ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಯುಎಇ ಮೂಲದ ಬುರ್ಜಿಲ್ ಹೋಲ್ಡಿಂಗ್ಸ್‌ನ ಮಾನವ ಸಂಪನ್ಮೂಲದ ಸಮೂಹ ಮುಖ್ಯಸ್ಥ ಡಾ. ಸಂಜಯ್ ಕುಮಾರ್, ಅಲೆಂಬಿಕ್ ಫಾರ್ಮಾಸ್ಯೂಟಿಕಲ್ಸ್‌ನ ಮಾನವ ಸಂಪನ್ಮೂಲದ ಸಹ ಉಪಾಧ್ಯಕ್ಷ ಅರವಿಂದ ತ್ರಿಪಾಟಿ, ಫ್ಯಾಕ್ಟ್‌ಸೆಟ್ ಸಿಸ್ಟಮ್ ಇಂಡಿಯಾ ಪ್ರೈ. ಲಿ. ಉಪಾಧ್ಯಕ್ಷ ಹಾಗೂ ಭಾರತ ಮತ್ತು ಫಿಲಿಫೈನ್ಸ್ ಟಾಲೆಂಟ್ ಅಕ್ವಸಿಷನ್ ಸಹ ನಿರ್ದೇಶಕರಾದ ಅನುಪ್ಮ ರಂಜನ್ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಡಾ. ಮೋಹನ್ ಅಳ್ವ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ಹೇಳಿದರು.

ಗಲ್ಫ್‌ನ ಎಕ್ಸಪರ್ಟೈಸ್ ಮತ್ತು ಬುರ್ಜಿಲ್ ಹೋಲ್ಡಿಂಗ್ಸ್, ದುಬೈನ ಭವಾನಿ ಗ್ರೂಪ್, ಫ್ಯಾಕ್ಟ್‌ಸೆಟ್ ಸಿಸ್ಟಮ್ಸ್ ಇಂಡಿಯಾ ಪ್ರೈ. ಲಿ. ಕಂಪನಿಗಳು ವಿವಿಧ ಪ್ಯಾಕೇಜ್‌ನಡಿ ಉದ್ಯೋಗವನ್ನು ನೀಡಲಿವೆ. ಸುಮಾರು 25ಕಂಪನಿಗಳು 250ಕ್ಕೂ ಅಧಿಕ ಉದ್ಯೋಗಗಳನ್ನು ಕೋರ್ ಮೆಕ್ಯಾನಿಕಲ್ ಪದವೀಧರರಿಗೆ ನೀಡುತ್ತಿದ್ದು, 15 ಕಂಪನಿಗಳು ಸುಮಾರು 52 ಹುದ್ದೆಗಳನ್ನು ಇಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವೀಧರರಿಗೆ ನೀಡಲಿವೆ. ಹಲವು ಉತ್ಪದನಾ ವಲಯ, ಬ್ಯಾಂಕಿಂಗ್, ಆರೋಗ್ಯ, ಜುವೆಲ್ಲರಿ, ಪ್ರವಾಸೋದ್ಯಮ, ಮಾಧ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ ಕಂಪಿಗಳು ಪದವಿ ಹಾಗೂ ಸ್ನಾತಕೋತ್ತರ ಪದವೀಧರರಿಗೆ ವಿವಿಧ ರೀತಿಯ ಉದ್ಯೋಗಾವಕಾಶಗಳನ್ನು ಒದಗಿಸಲಿವೆ ಎಂದು ಅವರು ವಿವರ ನೀಡಿದರು.

ಹೆಚ್ಚಿನ ವಿವರಗಳಿಗಾಗಿwww.alvaspragati.com ಗೆ ಭೇಟಿ ನೀಡಬಹುದು. ದೂರದ ಊರುಗಳಿಂದ ಬರುವ ಅಭ್ಯರ್ಥಿಗಳಿಗೆ ಅ. 5ರಿಂದ ವಾಸ್ತವ್ಯದ ವ್ಯವಸ್ಥೆ ಕಲ್ಪಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂ. 9008907716, 9663190590 ಸಂಪರ್ಕಿಸಬಹುದು. ಐಟಿಐ, ಪಿಯುಸಿ ಮತ್ತು ಎಸೆಸೆಲ್ಸಿ ಹಾಗೂ ಇದಕ್ಕಿಂತ ಕೆಳ ವಿದ್ಯಾರ್ಹತೆಯ ಅಭ್ಯರ್ಥಿಗಳನ್ನು ಹೊರತುಪಡಿಸಿ ಎಲ್ಲರಿಗೂ ನೋಂದಣಿ ಕಡ್ಡಾಯವಾಗಿದೆ ಎಂದು ವಿವೇಕ್ ಆಳ್ವ ತಿಳಿಸಿದರು.

ಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ತರಬೇತಿ ಮತ್ತು ನಿಯೋಜನೆಯ ಮುಖ್ಯಸ್ಥ ಸುಶಾಂತ್ ಅನಿಲ್ ಲೋಬೋ, ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News