ಕರ್ನಾಟಕ ಮುಸ್ಲಿಂ ಬಾಂಧವ್ಯ ವೇದಿಕೆಯಿಂದ ಮೋಹನ್ ಭಾಗವತ್ ರಿಗೆ ಮನವಿ ಪತ್ರ

Update: 2024-01-25 07:07 GMT

ಮಂಗಳೂರು, ಜ. 25: ಸರ್ವ ಸಮುದಾಯದೊಂದಿಗೆ ಸಹಬಾಳ್ವೆ ಮತ್ತು ಸೌಹಾರ್ದ ಬಯಸುವ ಮುಸ್ಲಿಂ ಸಮುದಾಯದ  ಸದಾಶಯಕ್ಕೆ ಪೂರಕವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಶಿಕ್ಷಣದಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ಸಂಸ್ಕಾರಭರಿತ ಭಾಷೆ ಮತ್ತು ಸಮುದಾಯದ ಬಗ್ಗೆ ಗೌರವ ಭಾವನೆಗೆ ಪ್ರೇರಕವಾದ ನೀತಿಗಳನ್ನು ರೂಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ಮುಸ್ಲಿಂ ಬಾಂಧವ್ಯ ವೇದಿಕೆ ಆರೆಸ್ಸೆಸ್ ನ ಸರ ಸಂಘ ಚಾಲಕ ಮೋಹನ್ ಭಾಗವತ್ ಅವರಿಗೆ ಪತ್ರ ವ್ಯವಹಾರಕ್ಕೆ ಮುಂದಾಗಿದೆ.

ಸುದ್ದಿಗೋಷ್ಠಿಯಲ್ಲಿ ಗುರುವಾರ ಪತ್ರದ ಬಗ್ಗೆ ಮಾಹಿತಿ ನೀಡಿದ ವೇದಿಕೆಯ ಅಧ್ಯಕ್ಷ ಅನೀಶ್ ಪಾಷಾ, ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಶಿಕ್ಷಣ ಪಡೆದ ಬಹಳಷ್ಟು ಮಂದಿ ಮುಸ್ಲಿಮರ ವಿರುದ್ಧ ನಿರಂತರವಾಗಿ ಅವಹೇಳನಕಾರಿಯಾಗಿ ಅಗೌರವದ ಭಾಷೆಯಲ್ಲಿ ಮಾತನಾಡುವುದು ಬಹಳ ಹಿಂದಿನಿಂದಲೂ ಗಮನಿಸುತ್ತಿದ್ದೇವೆ. ಸಮುದಾಯದ ಬಗ್ಗೆ ಈ ರೀತಿಯ ದ್ವೇಷ ಮನೋಭಾವ ಯಾಕಾಗಿ ಎಂದು ತಿಳಿಯುವ ನಿಟ್ಟಿನಲ್ಲಿ ಸಂಘದ ಸಹ ಸಂಚಾಲಕರ ಜೊತೆ ಮಾತುಕತೆ ನಡೆಸಿದ್ದೇವೆ. ತಪ್ಪು ಕಲ್ಪನೆ ನಿವಾರಿಸುವ ನಿಟ್ಟಿನಲ್ಲಿ ಆರೆಸ್ಸೆಸ್ ನ ಪ್ರಮುಖರ ಜೊತೆ ಚರ್ಚೆಗೆ ಆಗ್ರಹಿಸಲಾಗಿದೆ. ಆದರೆ ಪೂರಕ ಸ್ಪಂದನೆ ದೊರಕದ ಕಾರಣ ಇದೀಗ ಪತ್ರದ ಮೂಲಕ ನಮ್ಮ ಅನಿಸಿಕೆ ತಿಳಿಸಲು ಮುಂದಾಗಿದ್ದೇವೆ ಎಂದರು.

ವೇದಿಕೆಯ ಪ್ರಧಾನ ಕಾರ್ಯದರ್ಶಿ ಮುಸ್ತಾಕ್ ಹೆನ್ನಾಬೈಲ್ ಮಾತನಾಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಹಲವಾರು ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ ಮತ್ತು ಅಲ್ಲಿಂದಲೇ ಶಿಕ್ಷಣವನ್ನು ಪಡೆದ ಮಾಜಿ ಪ್ರಾಂತ್ಯ ಕಾರ್ಯವಾಹ ಕಲ್ಲಡ್ಕ ಪ್ರಭಾಕರ್ ಭಟ್ ಎಂಬವರು  ಇತ್ತೀಚೆಗೆ ಮುಸ್ಲಿಂ ಮಹಿಳೆಯರ ಬಗ್ಗೆ ಬಳಸಿದ ಅವಹೇಳನಕಾರಿ ಭಾಷೆಯನ್ನು ಇಡೀ ದೇಶ ನೋಡಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಪಡೆದ ಶಿಕ್ಷಣದಿಂದ ಪ್ರೇರಿತರಾಗಿ ಇವರಾಡಿದ ಸಂಸ್ಕಾರಹೀನ ಮಾತುಗಳು ಸಮಸ್ತ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು. ತಮ್ಮ ಸಂಘದ ತರಬೇತಿ ಶಿಬಿರಗಳಲ್ಲಿ ಶಿಕ್ಷಣ ಪಡೆದ ವ್ಯಕ್ತಿ ಹೆಣ್ಣನ್ನು ಗೌರವದ ಭಾಷೆಯಿಂದ ಸಂಬೋಧಿಸದೆ, ವೇಶ್ಯೆಯಂತೆ ಬಿಂಬಿಸುವುದು ಅಸಂಬದ್ಧ, ಅನುಚಿತ ಮತ್ತು ಆಘಾತಕಾರಿ.

ಇವರು ಮಾತ್ರ ಅಲ್ಲ,  ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಶಿಕ್ಷಣ ಪಡೆದ ಬಹಳಷ್ಟು ಮಂದಿ ಮುಸ್ಲಿಮರ ವಿರುದ್ಧ ನಿರಂತರ ಹೀಗೆ ಅಪ್ರಬುದ್ಧತೆಯಿಂದ ಕೂಡಿ, ಅವಹೇಳನಕಾರಿಯಾಗಿ ಅಗೌರವದ ಭಾಷೆಯಲ್ಲಿ ಮಾತನಾಡುವುದು ಬಹಳ ಹಿಂದಿನಿಂದಲೂ ಗಮನಿಸುತ್ತಿದ್ದೇವೆ. ತಮ್ಮಸಂಘ ಪೋಷಿಸಿ ಬೆಳೆಸಿದ ಹಲವಾರು ರಾಜಕಾರಣಿಗಳು, ಪತ್ರಕರ್ತರು, ಯೂಟ್ಯೂಬ್ ಚಾನೆಲುಗಳ ನಿರೂಪಕರು ಸೇರಿದಂತೆ ಪ್ರಮುಖ ಮಾಧ್ಯಮಗಳು ಮುಸ್ಲಿಮರ ಧಾರ್ಮಿಕತೆಯ ಬಗ್ಗೆ ಸೂಕ್ತ ಜ್ಞಾನವಿಲ್ಲದೆ ಅಪಪ್ರಚಾರ ಮಾಡುತ್ತಿರುವುದೂ ನಿರಂತರವಾಗಿದೆ ಎಂದರು.

ಮುಸ್ಲಿಮರ ಪ್ರಾರ್ಥನಾ ಗೃಹಗಳನ್ನು ಕೆಡಹುವ, ಅತಿಹೆಚ್ಚು ಬೆದರಿಕೆಗಳನ್ನು ಭಾರತದಲ್ಲಿ ನೀಡುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ  ಶಿಕ್ಷಣ ಪಡೆದವರೇ ಆಗಿದ್ದಾರೆ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಸಾಮಾಜಿಕ ನ್ಯಾಯದ ತತ್ವದಡಿಯಲ್ಲಿ ಅರ್ಹತೆ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಮುಸ್ಲಿಮರಿಗೆ ಸಿಗಬೇಕಾದ ರಾಜಕೀಯ-ಸಾಮಾಜಿಕ ಸ್ಥಾನಮಾನಗಳು ಕನಿಷ್ಠ ಪ್ರಮಾಣದಲ್ಲೂ ದಕ್ಕಿಲ್ಲ ಎಂಬುದು ತಮಗೆ ತಿಳಿದಿದೆ. ತಮ್ಮ ಸಂಘಟನೆಯ ವ್ಯಕ್ತಿ-ಸಂಸ್ಥೆಗಳು ಮಾಡುವ ವ್ಯವಸ್ಥಿತ ಅಪಪ್ರಚಾರಗಳು ಮತ್ತು ಪರೋಕ್ಷ ರಾಜಕೀಯ ಹಸ್ತಕ್ಷೇಪಗಳಿಂದಾಗಿ ಮುಸ್ಲಿಂ ಸಮುದಾಯಕ್ಕೆ ಸಿಗಬೇಕಾದ ಸ್ಥಾನಮಾನಗಳು ಸಿಗದೆ ಅನ್ಯಾಯವಾಗುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಕೇವಲ ಲೋಕಸಭೆ, ವಿಧಾನಸಭೆಯಂತಹ ಶಾಸನ ಸಭೆಗಳು ಮಾತ್ರವಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆ ಸಮಪಾಲಿನ ಪ್ರಾತಿನಿಧ್ಯಕ್ಕೆ ಕಲ್ಪಿಸಿದ ಆದರ್ಶ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಕೂಡ ಮುಸ್ಲಿಮರ ಪ್ರಾತಿನಿಧ್ಯ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲು ಮುಸ್ಲಿಮರ ವಿರುದ್ಧ ತಮ್ಮ ಸಂಘದ ನಿರಂತರ ನಡೆಸುವ ವ್ಯವಸ್ಥಿತ ಅಪಪ್ರಚಾರವೇ ಪ್ರಮುಖ ಕಾರಣವಾಗಿದೆ ಎಂಬ ಎಲ್ಲಾ ವಿಷಯಗಳನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ವಿವರಿಸಿದರು.

ಶತಮಾನಗಳ ಕಾಲ ಜೊತೆಯಾಗಿ ಬದುಕಬೇಕಾದ ಸಮುದಾಯಗಳು ಮತ್ತು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವ ಅನಿವಾರ್ಯತೆ ಇರುವ ವ್ಯವಸ್ಥೆಯಲ್ಲಿ, ಭವಿಷ್ಯದ ದಿನಗಳಲ್ಲಿ ಇಂಥ ಇತಿಹಾಸವು ಸಮುದಾಯಗಳ ನಡುವೆ ವೈಮನಸ್ಸು- ಸಂಘರ್ಷಗಳನ್ನು ಇನ್ನಷ್ಟು ಉಂಟು ಮಾಡುತ್ತವೆ ಎನ್ನುವುದು ಸಾಮಾನ್ಯ ಜ್ಞಾನಕ್ಕೆ ನಿಲುಕುವ ವಿಚಾರ. ಹೀಗಿದ್ದರೂ ಕೂಡ, ತಮ್ಮ ಸಂಘಟನೆಯ ಬಹಳಷ್ಟು ನಾಯಕರು ಸಮುದಾಯ ಸಂಬಂಧಗಳ ವಿಚಾರದಲ್ಲಿ ಸಂವೇದನಾರಹಿತರಾಗಿ ವರ್ತಿಸುತ್ತಿರುವುದು ದುರದೃಷ್ಟಕರ. ಬರೀ ಭಾರತದಲ್ಲಿ ಮಾತ್ರವಲ್ಲ, ಬಹುಶಃ ಇಡೀ ಜಗತ್ತಿನಲ್ಲಿ ಜೊತೆಯಾಗಿ ಬದುಕುವ ಸಮುದಾಯವೊಂದರ ಕುರಿತು ಇಷ್ಟು ಅಸಹನೆ ಮತ್ತು ಅಸಹಿಷ್ಣುತೆ ಹೊಂದಿರುವ ತಮ್ಮ ಸಂಘಟನೆಯಂತಿರುವ ಮತ್ತೊಂದು ಸಂಘವಾಗಲಿ, ಸಂಸ್ಥೆಯಾಗಲಿ ಪ್ರಸ್ತುತ ಜಗತ್ತಿನಲ್ಲಿ ಇಲ್ಲ. ತಮ್ಮ ಸಂಘಟನೆಯಲ್ಲಿ ಪದಾಧಿಕಾರತ್ವವನ್ನು ಹೊಂದಿದ ಬಹಳಷ್ಟು ನಾಯಕರು, ಇತರ ಸಮುದಾಯಗಳಂತೆ ಮುಸ್ಲಿಮರಲ್ಲೂ ಇರುವ ವೈಯುಕ್ತಿಕ ಅಪರಾಧಗಳನ್ನು ಮತ್ತು ಸ್ಥಳೀಯ ವಿಚಾರಗಳ ಮೇಲಿನ ಸಾಮಾನ್ಯ ಸೀಮಿತ ಗುಂಪು ಸಂಘರ್ಷಗಳನ್ನು ಸಾಮೂಹಿಕವಾಗಿ ಇಡೀ ಸಮುದಾಯಕ್ಕೆ ಅಂಟಿಸಿ, ಮುಸ್ಲಿಂ ಸಮುದಾಯವನ್ನು ಅಪರಾಧಿಗಳನ್ನಾಗಿ  ಚಿತ್ರಿಸಲು ನಿರಂತರ ಪ್ರಯತ್ನ ಪಡುತ್ತಿದ್ದಾರೆ. ಇದರ ಹಿಂದೆ ಮುಸ್ಲಿಂ ಸಮುದಾಯವನ್ನು ತುಳಿಯುವುದು ಮಾತ್ರವಲ್ಲ, ಇತರ ನಮುದಾಯಗಳ ಮುಂದೆ ಮುಸ್ಲಿಮರನ್ನು ವಿಕೃತವಾಗಿ  ಚಿತ್ರಿಸಿ ಅವರಲ್ಲಿ ಅಭದ್ರತೆಯ ಭಾವ ಮೂಡಿಸುವುದರ ಮೂಲಕ ರಾಜಕೀಯ ಅಧಿಕಾರ  ಪಡೆಯಬೇಕೆಂಬ ತಮ್ಮ ಹಂಬಲ ಸ್ಪಷ್ಟವಾಗಿ ಹೊರಜಗತ್ತಿಗೆ ಗೋಚರವಾಗುತ್ತಿದೆ.

ದೇಶಾದ್ಯಂತ ಇರುವ  ಅಪರಾಧಿಕ ಚರಿತ್ರೆ ಮತ್ತು ಚಟುವಟಿಕೆಗಳಲ್ಲಿ ದೇಶದ ಇತರ ಸಮುದಾಯಗಳಲ್ಲಿ ಇರುವಷ್ಟೇ ಪ್ರಕರಣಗಳು ಮುಸ್ಲಿಂ ಸಮುದಾಯದ ಮೇಲೆ ಇವೆ.   ಇತ್ತೀಚಿನ ಸರಕಾರಿ ಅಂಕಿ ಅಂಶಗಳ ಪ್ರಕಾರವೂ, ಜನಸಂಖ್ಯೆಗೆ ಅನುಗುಣವಾಗಿ ಇತರ ಸಮುದಾಯಗಳಿಗೆ ಹೋಲಿಸಿದರೆ ಮುಸ್ಲಿಂ ಸಮುದಾಯದ ಅಪರಾಧ ಪ್ರಕರಣಗಳು ಗಣನೀಯವಾಗಿ ಕಡಿಮೆ ಇದೆ. ಹೀಗಿದ್ದರೂ ಕೂಡ ವೈಯುಕ್ತಿಕ ಮತ್ತು ಕೆಲ ಗುಂಪು ಸಂಘರ್ಷಗಳನ್ನು ಮುಸ್ಲಿಂ ಸಮುದಾಯದ ತಲೆಗೆ ಕಟ್ಟಿ ವಿಕೃತಿ ಮೆರೆಯುವುದು ಅತ್ಯಂತ ಹೇಯ ಕೃತ್ಯವಾಗಿದೆ. ಇದರ ಅರಿವಿದ್ದೂ ಕೂಡ, ತಮ್ಮ ಸಂಘಟನೆ, ಪದಾಧಿಕಾರಿಗಳು ಮತ್ತು ಸದಸ್ಯರು ಈ ವಿಚಾರದಲ್ಲಿ ಮುಸ್ಲಿಂ ಸಮುದಾಯವನ್ನು ಅಪರಾಧಿ  ಸಮುದಾಯವೆಂದು ಕೃತಕವಾಗಿ ಬಿಂಬಿಸಿ, ನಿತ್ಯ ನಿರಂತರ ಬರವಣಿಗೆ, ಭಾಷಣ ಮತ್ತು ಟಿವಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.

ತಮ್ಮ ಸಂಘಟನೆಯಲ್ಲಿ ಶಿಕ್ಷಣ ಪಡೆದ ವ್ಯಕ್ತಿಗಳು ಆಡುವ ಮಾತು ಮತ್ತು ಧಾರ್ಮಿಕ ಸಾಹಿತ್ಯಗಳ ತಿರುಚುವಿಕೆ ಮುಂತಾದ ಅಸಂಬದ್ಧಗಳಿಂದ ಬರೀ ಮುಸ್ಲಿಮರು ಮಾತ್ರವಲ್ಲ, ಬಹುಸಂಖ್ಯಾತ ಹಿಂದೂ ಸಮಾಜವೂ ಕೂಡ ಅಸಹ್ಯ ಪಡುತ್ತಿದೆ. ದೇಶಾದ್ಯಂತ ಹಲವಾರು ಧಾರ್ಮಿಕ, ರಾಜಕೀಯ, ಸಾಮಾಜಿಕ ಮತ್ತು ಸೇವಾ ಸಂಘಟನೆಗಳಿವೆ. ಆದರೆ ಯಾವ ಸಂಘಟನೆಯೂ ಜೊತೆಯಾಗಿ ಬಾಳುವ ದೇಶದೊಳಗಿನ ಸಮುದಾಯಕ್ಕೆ ಅವಾಚ್ಯ ಶಬ್ದಗಳನ್ನು ಬಳಸಿ, ವಿಕೃತ ಸಾಹಿತ್ಯಗಳನ್ನು ರಚಿಸಿ, ಅಸಂಬದ್ಧ ಭಾಷೆಯಲ್ಲಿ ಇಷ್ಟು ಅಪಮಾನ ಮಾಡುವುದು ನಮ್ಮ ಗಮನಕ್ಕೆ ಬಂದಿಲ್ಲ.

ಜ್ಞಾನ, ವಿಜ್ಞಾನ, ತಂತ್ರಜ್ಞಾನದ ಜೊತೆಗೆ, ದೇಶದ ಸ್ವಾತಂತ್ರ್ಯ ಮತ್ತು ಅದರ ನಂತರದ ಹಲವಾರು ಯುದ್ಧಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ತ್ಯಾಗ ಬಲಿದಾನಗೈದು ಜೊತೆಯಾಗಿ ಬದುಕುವ ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದೊಂದಿಗೆ, ತಮ್ಮ ಸಂಘಟನೆ ವಿಲಕ್ಷಣವಾಗಿ ಮತ್ತು ಅಗೌರವದೊಂದಿಗೆ ವರ್ತಿಸುತ್ತಿರುವುದು ದುರಂತ.

ತಮ್ಮ ಸಂಘಟನೆಯ ಪ್ರಮುಖ ಜವಾಬ್ದಾರಿಯಲ್ಲಿರುವ ಕಲ್ಲಡ್ಕ ಪ್ರಭಾಕರ ಭಟ್, "ತಲಾಖ್" ಎಂಬ ಮುಸ್ಲಿಂ ವಿಚ್ಛೇದನ ಪದ್ಧತಿಯನ್ನು ಮುಂದಿಟ್ಟುಕೊಂಡು ಅದರ ಬಗ್ಗೆ ಸರಿಯಾದ ಅಧ್ಯಯನವಿಲ್ಲದೆ, ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕಾರಣಕ್ಕೆ, ತಲಾಖ್ ಎಂದರೆ ನಿಜವಾಗಿ ಏನು ಎಂಬ ಸಮಗ್ರ ಮಾಹಿತಿ ಇರುವ ವಿವರಣೆಯನ್ನು ಈ ಪತ್ರದೊಂದಿಗೆ ತಮಗೆ ನೀಡುತ್ತಿರುವುದಾಗಿ ಮೋಹನ್ ಭಾಗವತ್ ಅವರನ್ನು ಉಲ್ಲೇಖಿಸಿ ಮುಸ್ತಾಕ್ ಹೇಳಿದರು.

ತಲಾಖ್ ಕುರಿತಾದ ಈ ವಿವರಣೆಯನ್ನು ಓದಿ, ತಮ್ಮ ನಾಯಕತ್ವದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ತಾವು ಸೂಕ್ತವಾಗಿ ಮನವರಿಕೆ ಮಾಡಿಸುವಿರೆಂಬ ವಿಶ್ವಾಸವಿದೆ. ಭವಿಷ್ಯದಲ್ಲಿ ತಮ್ಮ ಸಂಘಟನೆಯಲ್ಲಿ ಪ್ರಮುಖ ಹುದ್ದೆಯಲ್ಲಿರುವವರು ಮತ್ತು ಸದಸ್ಯರು, ಕನಿಷ್ಠ ಮಹಿಳೆಯರ ಕುರಿತು ಆಡುವ ಮಾತುಗಳು ಸಂಸ್ಕಾರ ಮತ್ತು ಸಭ್ಯತೆಯಿಂದ ಕೂಡಿರಬೇಕೆಂಬ ಆಶಯ ಸಮಾಜಕ್ಕಿದೆ. 

ಈ ದೇಶದುದ್ದಕ್ಕೂ ಇರುವ ಎಲ್ಲ ಮುಸ್ಲಿಮರ ಪಾಲಿಗೆ ರಾಜಕೀಯ ನಾಯಕರು ಬಹುತೇಕ ಹಿಂದುಗಳೇ ಆಗಿದ್ದಾರೆ. ಮುಸ್ಲಿಮರು ಹಿಂದುಗಳನ್ನು ಪ್ರೀತಿಸುತ್ತಾರೆ ಮತ್ತು ನ್ಯಾಯಯುತವಾದ ನಾಯಕತ್ವವನ್ನು ಒಪ್ಪಿಕೊಳ್ಳುತ್ತಾರೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ದೃಷ್ಟಾಂತ ಇನ್ನೇನು ಬೇಕು? ಹಾಗೆಯೇ, ದೇಶ ವಿಭಜನೆಯ ಕಾಲದಲ್ಲಿ ಪಾಕಿಸ್ತಾನದಂತಹ ಇಸ್ಲಾಮಿಕ್ ರಾಷ್ಟ್ರಕಣ್ಣೆದುರೇ ಇದ್ದರೂ ಕೂಡ, ಧರ್ಮಾಧಾರಿತ ರಾಷ್ಟ್ರವನ್ನು ಬಯಸದೆ, ಸಹಧರ್ಮೀಯರಾದ ಹಿಂದುಗಳೊಂದಿಗೆ ಸಹಬಾಳ್ವೆ ಆಯ್ದುಕೊಂಡ ಭಾರತೀಯ ಮುಸ್ಲಿಮರನ್ನು ದ್ವೇಷಿಸುವುದಕ್ಕಿಂತ ಪ್ರೀತಿಸಲು ನಿಮಗೆ ಹೆಚ್ಚು ಕಾರಣಗಳಿವೆ ಎಂಬುದನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದ್ದು ಪತ್ರವನ್ನು ಮೋಹನ್ ಭಾಗವತ್ ಅವರಿಗೆ ರವಾನಿಸುತ್ತಿರುವುದಾಗಿ ಮುಸ್ತಾಕ್ ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಮುಸ್ಲಿಂ ಬಾಂಧವ್ಯ ವೇದಿಕೆಯ ಗೌರವಾಧ್ಯಕ್ಷ ಎಸ್.ಬಿ. ದಾರಿಮಿ, ಸಲಹೆಗಾರ ನಝೀರ್ ಬೆಳುವಾಯಿ, ಧರ್ಮಗುರು ಕೋಟ ಜಮೀರ್ ಅಹ್ಮದ್ ರಶಾದಿ, ಅನುಪಮ ಪತ್ರಿಕೆಯ ಸಬೀಹಾ ಫಾತಿಮಾ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News