ಹಿಂದುತ್ವದ ಹೆಸರಿನಲ್ಲಿ ಬಿಜೆಪಿಯಿಂದ ಜನತೆಗೆ ಮೋಸ: ಶಾಸಕ ಅಶೋಕ್ ರೈ

Update: 2023-10-17 12:49 GMT

ಪುತ್ತೂರು: ಚುನಾವಣೆಯಲ್ಲಿ ಹಿಂದುತ್ವದ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಜನರನ್ನು ಮೋಸ ಮಾಡಿ ಗೆಲ್ಲುವ ಬಿಜೆಪಿ, ಗೆದ್ದ ಬಳಿಕ ಜನರನ್ನು ಸಂಪೂರ್ಣವಾಗಿ ಮರೆತುಬಿಡುತ್ತಾರೆ. ಇಷ್ಟು ವರ್ಷ ಆಡಳಿತ ನಡೆಸಿದ ಬಿಜೆಪಿಯವರು ಬಡವರಿಗೆ ಪ್ರಯೋಜನವಾಗುವ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ಬಲ್ನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಗ್ರಾಮಸ್ಥರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾನು ಈ ಹಿಂದೆ ಬಿಜೆಪಿಯಲ್ಲೇ ಇದ್ದೆ, ಬಿಜೆಪಿಯರಿಗೆ ಬಡವರ ಕಷ್ಟ ಬೇಕಾಗಿಲ್ಲ ಅವರಿಗೆ ಚುನಾವಣೆಯಲ್ಲಿ ಗೆಲ್ಲಬೇಕು ಅಷ್ಟೆ ಆದರೆ ಅವರಲ್ಲಿ ಅಭಿವೃದ್ಧಿ ಅಜೆಂಡಾ ಇಲ್ಲ ಹಿಂದುತ್ವದ ಹೆಸರಿನಲ್ಲಿ ಜನತೆಗೆ ಮೋಸ ಮಾಡುವುದೇ ಅವರ ಕಾಯಕವಾಗಿದೆ. ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು. ಕಳೆದ ಐದು ವರ್ಷ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ನಿಮಗೆ ಏನು ಕೊಟ್ಟಿದೆ ಎಂಬುದನ್ನು ಚಿಂತಿಸಿ , ಕೇಂದ್ರದಲ್ಲಿರುವ ಬಿಜೆಪಿ ಬೆಲೆ ಏರಿಕೆ ಮಾಡಿ ಜನರನ್ನು ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಹಾಗೆ ಮಾಡಿರುವುದು ಅವರ ಸಾಧನೆಯಾಗಿದೆ ಎಂದು ಹೇಳಿದರು.

ಉಚಿತ ಅಕ್ಕಿ, ಉಚಿತ ಬಸ್, ಉಚಿತ ಕರೆಂಟ್, ತಿಂಗಳಿಗೆ ಖಾತೆಗೆ ಎರಡು ಸಾವಿರ, ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್, ಸ್ಟ್ರೈಫಂಡ್ ಎಲ್ಲವನ್ನೂ ನೀಡುತ್ತಿದೆ ಆದರೂ ಕೆಲವರು ಕಾಂಗ್ರೆಸ್ಸನ್ನು ದೂರುತ್ತಿದ್ದಾರೆ, ಕಾಂಗ್ರೆಸ್ ಜನತೆಗೆ ಇನ್ನೇನನ್ನು ಕೊಡಬೇಕು. ಕೊಡಬೇಕಾದ ಎಲ್ಲವನ್ನೂ ಕೊಟ್ಟಿದೆ, ಬಡವರು ಸ್ವಾಭಿಮಾನದಿಂದ ಬದುಕುವ ಹಾಗೆ ಮಾಡಿದೆ. ದೇಶದ ಇತಿಹಾಸದಲ್ಲಿ ಇಷ್ಟೊಂದು ಕೊಡುಗೆಯನ್ನು ನೀಡಿದ ಯಾವುದಾದರೂ ಸರಕಾರ ಇದೆಯಾ ಎಂದು ಪ್ರಶ್ನಿಸಿದ ಶಾಸಕರು ಪ್ರತೀಯೊಬ್ಬರು ಅರ್ಥ ಮಾಡಿಕೊಳ್ಳಬೇಕಿದೆ. ದೇಶದಲ್ಲಿ ಬಡವ ನೆಮ್ಮದಿಯ ಜೀವನ ನಡೆಸಬೇಕಾದರೆ ಕಾಂಗ್ರೆಸ್ ಅಧಿಕಾರದಲ್ಲಿರಬೇಕು. ಧರ್ಮದ ಹೆಸರಿನಲ್ಲಿ ದಂಗೆ ಎಬ್ಬಿಸುವ ಬಿಜೆಪಿಯಿಂದ ಅಭಿವೃದ್ಧಿ ಎಂದಿಗೂ ಸಾಧ್ಯವಿಲ್ಲ ಎಂದು ಹೇಳಿದರು.

ಗೃಹಲಕ್ಷ್ಮಿ ಹಣ ತಾಂತ್ರಿಕ ದೋಷದಿಂದ ಕೆಲವರಿಗೆ ಬಂದಿಲ್ಲ, ಮುಂದಿನ ದಿನಗಳಲ್ಲಿ ಎಲ್ಲರ ಖಾತೆಗೂ ಹಣ ಜಮಾವಣೆ ಯಾಗಲಿದೆ. ಕಾಂಗ್ರೆಸ್ ಕೊಟ್ಟ ಮಾತನ್ನು ಎಂದಿಗೂ ಉಳಿಸುತ್ತದೆ, 15 ಲಕ್ಷ ಕೊಡುವುದಾಗಿ ಹೇಳಿದವರು ಇನ್ನೂ ಆ ಹಣ ಹಾಕಿಲ್ಲ ಈ ಬಗ್ಗೆ ಬಿಜೆಪಿಯವರು ಜನತೆಗೆ ಉತ್ತರವನ್ನು ಕೊಡಬೇಕು ಎಂದು ಹೇಳಿದರು.

ಕ್ಷೇತ್ರದ ಯಾವುದೇ ಒಬ್ಬ ಪ್ರಜೆಗೂ ತೊಂದರೆಯಾದಲ್ಲಿ ನನ್ನ ಕಚೇರಿಗೆ ಬನ್ನಿ. ನಮ್ಮಿಂದಾಗುವ ಎಲ್ಲಾ ಸಹಾಯವನ್ನು ಮಾಡುತ್ತೇವೆ ಎಂದು ಹೇಳಿದರು. ಬಿಜೆಪಿಯವರ ಕುತಂತ್ರಕ್ಕೆ ಯಾರೂ ಬಲಿಯಾಗದಿರಿ. ದೇಶದಲ್ಲಿ ಎಲ್ಲಾ ಧರ್ಮ, ಜಾತಿಯವರು ಒಂದೇ ತಾಯಿ ಮಕ್ಕಳಂತೆ ಬದುಕಿದರೆ ಮಾತ್ರ ಭಾರತ ವಿಶ್ವ ಗುರುವಾಗಲು ಸಾಧ್ಯವಾಗುತ್ತದೆ. ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಬದುಕುವ ವಾತಾವರಣವನ್ನು ಕಾಂಗ್ರೆಸ್ ಸರಕಾರ ಮಾಡಲಿದೆ ಎಂದು ಹೇಳಿದರು.

ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿ. ಬ್ಲಾಕ್ ಮಾಜಿ ಅಧ್ಯಕ್ಷ ಪ್ರವೀಣ್ ಚಂಧ್ರ ಆಳ್ವ ಬ್ಲಾಕ್ ಉಪಾಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಕಾಂಗ್ರೆಸ್ ಮುಖಂಡ ಅಶ್ರಫ್ ಬಸ್ತಿಕಾರ್, ವಿಟ್ಲ ಉಪ್ಪಿನಂಗಡಿ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ, ವಿಟ್ಲ ಬ್ಲಾಕ್ ಕಾರ್ಯದರ್ಶಿ ಮಹಮ್ಮದ್ ಶರೀಫ್ ರೋಯಲ್, ಕಾಲೇಜ್‍ನ ಕಾರ್ಯಾಧ್ಯಕ್ಷ ಪ್ರಕಾಶ್ ಚಂದ್ರ ಆಳ್ವ, ಕೆ ಬಿ ಅಶ್ರಫ್, ಬಲ್ನಾಡು ಮತ್ತಿತರರು ಉಪಸ್ತಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News