ಅನಧಿಕೃತ ಬೀದಿಬದಿ ವ್ಯಾಪಾರ ವಿರುದ್ಧ ಕಾರ್ಯಾಚರಣೆ ನಿಂತಿಲ್ಲ: ಮೇಯರ್ ಮನೋಜ್ ಕುಮಾರ್
ಮಂಗಳೂರು: ನಗರದಲ್ಲಿ ಅನಧಿಕೃತ ಬೀದಿ ಬದಿ ವ್ಯಾಪಾರ ವಿರುದ್ಧದ ಕಾರ್ಯಾಚರಣೆ ನಿಂತಿಲ್ಲ. ಅದು ಮುಂದುವರಿಯ ಲಿದ್ದು, ಅಧಿಕಾರಿಗಳಿಗೆ ಸೂಚನೆ ನೀಡಿ ಕಾರ್ಯಾಚರಣೆ ಮುಂದುವರಿಸಲಾಗುವುದು. ಬೀದಿ ಬದಿ ವ್ಯಾಪಾರಿ ವಲಯ ದೊಳಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಎಂದು ಮೇಯರ್ ಮನೋಜ್ ಕುಮಾರ್ ತಿಳಿಸಿದ್ದಾರೆ.
ನೂತನ ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಂಗಳವಾರ ಪ್ರಥಮ ಫೋನ್ ಇನ್ ಕಾರ್ಯಕ್ರಮದ ವೇಳೆ ಸಾರ್ವಜನಿಕರೊಬ್ಬರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು.
ಕಂಕನಾಡಿಯ ಆಲ್ವಿನ್ ಡಿಸೋಜ ಎಂಬವರು, ಫುಟ್‌ಪಾತ್‌ನಲ್ಲಿ ಅತಿಕ್ರಮಣ ಮಾಡಿ ವ್ಯಾಪಾರ ನಡೆಸುವುದನ್ನು ನಗರ ದಲ್ಲಿ ಸಂಪೂರ್ಣವಾಗಿ ತೆರವು ಮಾಡಿ ಉತ್ತಮ ಕೆಲಸ ಆಗಿತ್ತು. ಆದರೆ, ಈಗ ಮತ್ತೆ ಬೀದಿಬದಿ ವ್ಯಾಪಾರ ಆರಂಭವಾಗಿದೆ. ಅಧಿಕಾರಿಗಳು ಇದನ್ನು ಯಾಕೆ ನಿರಂತರವಾಗಿ ನಿಗಾ ವಹಿಸುವ ಕೆಲಸ ಮಾಡುವುದಿಲ್ಲ? ಎಂದು ಪ್ರಶ್ನಿಸಿದಾಗ ಅವರು ಈ ಪ್ರತಿಕ್ರಿಯೆ ನೀಡಿದರು.
ಏಕಬಳಕೆಯ ಪ್ಲಾಸ್ಟಿಕ್ ನಿಷೇಧವನ್ನು ಮಂಗಳೂರಿನಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ನಗರದೊಳಗೆ ಇರುವ ಪ್ಲಾಸ್ಟಿಕ್ ಉತ್ಪಾದನಾ ಕೇಂದ್ರಗಳಿಗೆ ತೆರಳಿ ಕ್ರಮ ಕೈಗೊಳ್ಳುವ ಜತೆಗೆ, ನಗರಕ್ಕೆ ವಿವಿಧ ಕಡೆಗಳಿಂದ ಪೂರೈಕೆಯಾಗುವ ಪ್ಲಾಸ್ಟಿಕ್‌ಗಳ ಬಗ್ಗೆಯೂ ಪಾಲಿಕೆಯಿಂದ ಕಟ್ಟೆಚ್ಚರ ವಹಿಸಲಾಗುವುದು. ಏಕಬಳಕೆ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ನಗರದ ಅಂಗಡಿ, ಹೊಟೇಲ್, ಕ್ಯಾಟರಿಂಗ್, ಸಾರ್ವಜನಿಕರಿಗೆ ಅರಿವು-ಜಾಗೃತಿ ಮೂಡಿಸುವ ಕಾರ್ಯವನ್ನು ಪಾಲಿಕೆ ವತಿಯಿಂದ ಹಂತಹಂತವಾಗಿ ಕೈಗೊಳ್ಳಲಾಗುವುದು ಎಂದು ಮೇಯರ್, ಜಯಪ್ರಕಾಶ್ ಎಕ್ಕೂರು ಅವರ ಕರೆಗೆ ಪ್ರತಿಕ್ರಿಯಿಸಿದರು.
ಪ್ಲಾಸ್ಟಿಕ್ ಫ್ಯಾಕ್ಟರಿಗಳ ಬಗ್ಗೆ ನಿಗಾ ವಹಿಸಿ ಪರಿಶೀಲನೆ ಜತೆಗೆ, ಹಂತ ಹಂತವಾಗಿ ಇದನ್ನು ಮಟ್ಟಹಾಕಲು ಆದ್ಯತೆಯ ಮೇರೆಗೆ ಅರಿವು ಮೂಡಿಸುವ ಕಾರ್ಯ ನ.21ರಂದು ಪಾಲಿಕೆಯಲ್ಲಿ ನಡೆಯಲಿದೆ ಎಂದರು.
ಸ್ಟೇಟ್‌ಬ್ಯಾಂಕ್‌ನಲ್ಲಿ ಹಲವು ವರ್ಷದಿಂದ ತಳ್ಳುಗಾಡಿ ವ್ಯಾಪಾರ ನಡೆಸುತ್ತಿರುವ ತಮಗೆ ಐಡಿ ಕಾರ್ಡ್ ಸಿಕ್ಕಿಲ್ಲ ಎಂದು ಹೇಮಲತಾ ಎಂಬವರು ದೂರಿದಾಗ, ಕಚೇರಿಗೆ ಬಂದು ಮಾಹಿತಿ ನೀಡಿದರೆ, ಪಾಲಿಕೆಗೆ ಅಧಿಕಾರಿಗಳ ಮೂಲಕ ಸಮಸ್ಯೆ ಬಗೆಹರಿಸುವುದಾಗಿ ಮೇಯರ್ ಭರವಸೆ ನೀಡಿದರು.
ಹಂಪನಕಟ್ಟದಲ್ಲಿರುವ 41ನೇ ಅಡ್ಡ ರಸ್ತೆ (ಐಡಿಯಲ್ ಐಸ್‌ಕ್ರೀಂ ಮುಂಭಾಗ) ಸಂಪೂರ್ಣ ಹಾಳಾಗಿದ್ದು 15 ವರ್ಷಗಳಿಂದ ಈ ರಸ್ತೆ ಅಭಿವೃದ್ದಿಯೇ ಆಗಿಲ್ಲ. ಕೇವಲ 50 ಮೀ. ಉದ್ದದ ರಸ್ತೆ ಅಭಿವೃದ್ದಿ ಯಾಕೆ ಆಗುತ್ತಿಲ್ಲ? ಎಂದು ಮಾರ್ಕೆಟ್ ರಸ್ತೆಯ ಮಹಮ್ಮದ್ ರಫೀಕ್ ಪ್ರಶ್ನಿಸಿದಾಗ, ಯುಜಿಡಿ ಕಾಮಗಾರಿ ಬಳಿಕ ಡಾಮರು ವ್ಯವಸ್ಥೆ ಮಾಡಲಾಗುವುದಾಗಿ ಮೇಯರ್ ತಿಳಿಸಿದರು.
ಗುಜ್ಜರಕೆರೆ ಡ್ರೈನೇಜ್ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ತೀರ್ಥಕೆರೆ ನಿರ್ಮಾಣವೂ ನಡೆದಿಲ್ಲ ಎಂದು ನೇಮು ಕೊಟ್ಟಾರಿ ಎಂಬವರು ಅಸಮಾಧಾನ ವ್ಯಕ್ತಪಡಿಸಿದಾಗ, ಪಾಲಿಕೆಯಿಂದ ಅಲ್ಲಿನ ನೀರು ತಪಾಸಣೆ ನಡೆಸಿ ಕ್ರಮ ವಹಿಸುವುದಾಗಿ ತಿಳಿಸಿದರು.
ಬಂಗ್ರಕೂಳೂರು ಸೇತುವೆಗೆ ಹಾನಿ ಆಗಿರುವುದಾಗಿ ನಿಶಾನ್ ಡಿಸೋಜ ಎಂಬವರು ತಿಳಿಸಿದಾಗ, ಡ್ರೆಜ್ಜಿಂಗ್ ನಡೆಸಲು ದೊಡ್ಡ ಮೊತ್ತದ ಅನುದಾನ ಅಗತ್ಯವಿದ್ದು, ಜಿಲ್ಲಾಧಿಕಾರಿ ಜರ್ತೆ ಚರ್ಚಿಸುವುದಾಗಿ ಮೇಯರ್ ಹೇಳಿದರು.
ರೀಟಾ ಕಾಟಿಪಳ್ಳ ಕರೆ ಮಾಡಿ ಕಾಟಿಪಳ್ಳ ೩ನೇ ಬ್ಲಾಕ್‌ನಲ್ಲಿ ಕಳೆದ ಎರಡು ತಿಂಗಳಿನಿಂದ 4 ದಿನಕ್ಕೊಮ್ಮೆ ಕುಡಿಯುವ ನೀರು ಬರುತ್ತಿದ್ದು ತೊಂದರೆಯಾಗಿದೆ ಎಂದಾಗ, ತಾತ್ಕಾಲಿಕವಾಗಿ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಮೇಯರ್ ಸೂಚನೆ ನೀಡಿದರು.
ಉಪಮೇಯರ್ ಭಾನುಮತಿ ಪಿ.ಎಸ್., ಸ್ಥಾಯಿ ಸಮಿತಿ ಅಧ್ಯಕ್ಷರಾದ ಮನೋಹರ ಶೆಟ್ಟಿ ಕದ್ರಿ, ವೀಣಾಮಂಗಳ, ಸುಮಿತ್ರ ಕರಿಯ, ಸರಿತಾ ಶಶಿಧರ್, ಉಪಾಯುಕ್ತರಾದ ಆಡಳಿತ-ರವಿಕುಮಾರ್, ಕಂದಾಯ-ಗಿರೀಶ್ ನಂದನ್, ಅಭಿವೃದ್ದಿ-ಕೆ.ಟಿ.ಚಂದ್ರಶೇಖರ್ ಉಪಸ್ಥಿತರಿದ್ದರು.
ಹೊಂಡ ಗುಂಡಿ ರಸ್ತೆ; ಶೀಘ್ರ ತೇಪೆ ಕಾಮಗಾರಿ
ಮಂಗಳೂರಿನ ವಿವಿಧ ಕಡೆಗಳಲ್ಲಿ ರಸ್ತೆಗಳಲ್ಲಿ ಹೊಂಡವಾಗಿದ್ದು, ಹೊಂಡ ಮುಚ್ಚುವ ಕಾರ್ಯ ಆಗಬೇಕು ಎಂಬ ದೂರಿಗೆ, ತಲಾ 10 ವಾರ್ಡ್‌ಗಳಂತೆ ಪ್ಯಾಕೇಜ್ ಆಧಾರದಲ್ಲಿ ಟೆಂಡರ್ ನಡೆಸಿ ತೇಪೆ ಕಾಮಗಾರಿ ನಡೆಸಲಾಗುವುದು. ಮುಂದಿನ ತಿಂಗಳಿನಿಂದ ಮರು ಡಾಮರೀಕರಣ ಕಾಮಗಾರಿ ಆರಂಭಿಸಲಾಗುವುದು ಎಂದು ಮೇಯರ್ ತಿಳಿಸಿದರು.
ಕಂಕನಾಡಿ-ಬೆಂದೂರ್‌ವೆಲ್ ರಸ್ತೆ ಹೊಂಡ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್, ಪಂಪ್‌ವೆಲ್‌ನಿಂದ ಬೆಂದೂರ್‌ವೆಲ್ ಸರ್ಕಲ್‌ವರೆಗೆ 4 ಕೋ.ರೂ. ವೆಚ್ಚದಲ್ಲಿ ಕಾಂಕ್ರಿಟ್ ಕಾಮಗಾರಿಗೆ ಈಗಾಗಲೇ ನಿರ್ಧರಿಸಲಾಗಿದೆ. ಇದಕ್ಕೂ ಮುನ್ನ ಇಲ್ಲಿರುವ ನೀರಿನ ಮುಖ್ಯ ಕೊಳವೆಯನ್ನು ರಸ್ತೆಯ ಬದಿಗೆ ಸ್ಥಳಾಂತರಿಸಿ ಆ ಬಳಿಕ ರಸ್ತೆ ಕೆಲಸ ನಡೆಸಬೇಕಾಗಿದೆ ಎಂದರು.