ರೈತರ ಕಾರ್ಡ್‌ಗಳ ದುರುಪಯೋಗವಾಗದಂತೆ ಎಚ್ಚರ ವಹಿಸಲು ಕ್ಯಾಂಪ್ಕೋ ಮನವಿ
ಮಂಗಳೂರು: ಬರ್ಮಾದ ಅಡಿಕೆಯನ್ನು ಕರ್ನಾಟಕದಲ್ಲಿ ಸ್ಥಳೀಯ ಅಡಿಕೆಯೊಂದಿಗೆ ಬೆರೆಸಿ ಮಾರಾಟ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಬರ್ಮಾದ ಅಡಿಕೆ ಬೆಳೆಗಾರರೊಂದಿಗೆ ಒಳ್ಳೆಯ ಸಂಬಂಧ ಇರುವ ಕೆಲವು ವ್ಯಾಪಾರಿಗಳು ಅಲ್ಲಿಂದ ಕಳಪೆ ಗುಣಮಟ್ಟದ ಅಡಿಕೆಯನ್ನು ಆಮದುಮಾಡಿಕೊಂಡು ಸ್ಥಳೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಕಾಂಪ್ಕೊ ಪತ್ತೆ ಹಚ್ಚಿದೆ.
ಕ್ಯಾಂಪ್ಕೊದ ಸದಸ್ಯತ್ವದ ಚೀಟಿಯನ್ನು ಉಪಯೋಗಿಸಿಕೊಂಡು ರೈತರ ಸೋಗಿನಲ್ಲಿ ಕ್ಯಾಂಪ್ಕೊ ಶಾಖೆಗಳಿಗೆ ಬಂದು ಅಡಿಕೆ ಮಾರಾಟ ಮಾಡುತ್ತಿರುವುದು ಕ್ಯಾಂಪ್ಕೊದ ಗಮನಕ್ಕೆ ಬಂದಿದೆ ಎಂದು ಆಡಳಿತ ನಿರ್ದೇಶಕರು ಹೇಳಿದ್ದಾರೆ.
ಇತ್ತೀಚೆಗೆ ವ್ಯಾಪಾರಿಯೊಬ್ಬ ರೈತರ ಕಾರ್ಡನ್ನು ದುರುಪಯೋಗಪಡಿಸಿಕೊಂಡು ಬರ್ಮಾ (ಮ್ಯಾನ್ಮಾರ್) ಮೂಲದ ಕಳಪೆ ಗುಣಮಟ್ಟದ ಅಡಿಕೆಯನ್ನು ಇಲ್ಲಿನ ಸ್ಥಳೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಿ ಕ್ಯಾಂಪ್ಕೊ ಪುತ್ತೂರು ಶಾಖಾ ಕೇಂದ್ರದಲ್ಲಿ ಮಾರಾಟ ಮಾಡಲು ವಿಫಲ ಯತ್ನ ನಡೆಸಿರುವ ವುದನ್ನು ಕ್ಯಾಂಪ್ಕೊದ ಅಧಿಕಾರಿಗಳು ಪತ್ತೆ ಹಚ್ಚಿರುವುದಾಗಿ ಕ್ಯಾಂಪ್ಕೊ ಸಂಸ್ಥೆಯ ಆಡಳಿತ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅಧಿಕಾರಿಗಳ ಚಾಕಚಕ್ಯತೆಯಿಂದಾಗಿ ವ್ಯಾಪಾರಿಯ ಕಪಟತನ ಬಯಲಾಯಿತು. ಇಂತಹ ಮೋಸದ ವ್ಯಾಪಾರದಲ್ಲಿ ಅಡಿಕೆ ಬೆಲೆಗಾರರು ಯಾರೂ ಕೂಡ ಭಾಗಿಯಾಗಬಾರದು. ಅದಕ್ಕಾಗಿ ತಮ್ಮ ಕಾರ್ಡನ್ನು ಯಾರೂ ಕೂಡ ದುರುಪಯೋಗ ಪಡಿಸಲು ಅನುವು ಮಾಡಿಕೊಡಬಾರದು ಎಂದು ಆಡಳಿತ ನಿರ್ದೇಶಕರು ಎಚ್ಚರಿಸಿದ್ದಾರೆ.
ಅಡಿಕೆ ಬೆಲೆಗಾರರು ಎಚ್ಚರ ವಹಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸ್ಥಳೀಯ ಅಡಿಕೆಯ ದರ ಸ್ಥಿರತೆಯ ಮೇಲೆ ಮಾರಣಾಂತಿಕ ಹೊಡೆತ ಬೀಳಬಹುದು. ಒಮ್ಮೆ ಇಲ್ಲಿನ ಸ್ಥಳೀಯ ಅಡಿಕೆಯಲ್ಲಿ ಈ ತರಹದ ಅಡಿಕೆ ಬೆರಕೆಗೊಂಡಿರುವುದು ಉತ್ತರ ಭಾರತದ ಗ್ರಾಹಕರ ಗಮನಕ್ಕೆ ಬಂದಲ್ಲಿ, ಅವರು ಇಲ್ಲಿನ ಅಡಿಕೆಯ ಖರೀದಿಯನ್ನೇ ನಿಲ್ಲಿಸುವ ಸಂಭವವಿದೆ ಎಂದು ಕ್ಯಾಂಪ್ಕೊದ ಆಡಳಿತ ನಿರ್ದೇಶಕರು ಆತಂಕ ವ್ಯಕ್ತಪಡಿಸಿದ್ದಾರೆ.