ಚಾರ್ಮಾಡಿ: ಚಾರಣ ತೆರಳಿ ನಾಪತ್ತೆಯಾಗಿದ್ದ ಬೆಂಗಳೂರಿನ ಯುವಕ ಪತ್ತೆ

Update: 2024-02-26 05:58 GMT

ಬೆಳ್ತಂಗಡಿ, ಫೆ.26: ಬೆಂಗಳೂರಿನಿಂದ ಚಾರಣಕ್ಕೆಂದು ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಮೀಸಲು ಅರಣ್ಯಕ್ಕೆ ಬಂದಿದ್ದ ಚಾರಣಿಗರ ಪೈಕಿ ನಾಪತ್ತೆಯಾಗಿದ್ದ ಯುವಕನೋರ್ವನನ್ನು ಪೊಲೀಸರು ತಡರಾತ್ರಿ ವೇಳೆ ಪತ್ತೆ ಹಚ್ಚಿದ್ದಾರೆ.

ಬೆಂಗಳೂರಿನಿಂದ ಚಾರಣಕ್ಕೆಂದು ಬಂದಿದ್ದ 10 ಮಂದಿಯ ತಂಡದಲ್ಲಿದ್ದ ಧನುಷ್ ಎಂಬವರು ನಾಪತ್ತೆಯಾದ ಯುವಕ, ಅರಣ್ಯದಲ್ಲಿ ಚಾರಣಕ್ಕೆ ಅವಕಾಶ ನಿರಾಕರಿಸಲಾಗಿದ್ದರೂ ಪೊಲೀಸ್ ಅಧಿಕಾರಿಯೊಬ್ಬರ ಶಿಫಾರಸಿನ ಮೂಲಕ ಇವರು ಚಾರಣಕ್ಕೆ ಅವಕಾಶ ಪಡೆದುಕೊಂಡಿದ್ದರು ಎಂದು ತಿಳಿದು ಬಂದಿದೆ.

ರವಿವಾರ ಬೆಳಗ್ಗೆ ಇವರು ಚಾರಣಕ್ಕೆ ಹೊರಟಿದ್ದು ಸಂಜೆಯ ವೇಳೆ ಗುಂಪಿನಿಂದ ಧನುಷ್ ಸೇರಿದಂತೆ ಇಬ್ಬರು ಆಕಸ್ಮಿಕವಾಗಿ ತಪ್ಪಿದ್ದರು. ಬಳಿಕ ಒಬ್ಬ ಮರಳಿ ಗುಂಪನ್ನು ಸೇರಿಕೊಂಡನೆನ್ನಲಾಗಿದೆ. ಬಳಿಕ ಚಾರಣ ತಂಡದವು ಧನುಷ್ ತಪ್ಪಿಸಿಕೊಂಡಿರುವ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಬಾಳೂರು ಪೊಲೀಸರು ಹಾಗೂ ಬೆಳ್ತಂಗಡಿ ಪೊಲೀಸರು ಹುಡುಕಾಟ ಆರಂಭಿಸಿದ್ದರು .

ದಟ್ಟ ಅರಣ್ಯದ ನಡುವೆ ಧನುಷ್ ಅವರ ಮೊಬೈಲ್ ನೆಟ್ ವರ್ಕ್ ಪತ್ತೆಯಾಗಿ ಅದನ್ನು ಕೇಂದ್ರೀಕರಿಸಿ ಹುಡುಕಾಟ ನಡೆಸಿದಾಗ ಮದ್ಯರಾತ್ರಿ ಯುವಕ ಪತ್ತೆಯಾಗಿದ್ದಾನೆ.

ಅತ್ಯಂತ ಅಪಾಯಕಾರಿಯಾಗಿರುವ ಈ ಅರಣ್ಯ ಪ್ರದೇಶದಲ್ಲಿ ಚಾರಣಕ್ಕೆ ಅವಕಾಶ ನಿಷೇಧಿಸಲಾಗಿದೆ ಹಾಗೂ ಹಲವಾರು ನಿಬಂಧನೆಗಳನ್ನು ವಿಧಿಸಲಾಗಿದೆ. ಆದರೆ ಇದೆಲ್ಲವನ್ನೂ ಗಾಳಿಗೆ ತೂರಿ ಹೊರಗಿನಿಂದ ಬರುವ ಯುವಕರು ಇಲ್ಲಿ ಚಾರಣಕ್ಕೆ ತೆರಳುತ್ತಿದ್ದು, ಅಪಾಯದಲ್ಲಿ ಸಿಲುಕಿದ್ದಾರ. ಕೆಲವೇ ತಿಂಗಳುಗಳ ಹಿಂದೆ ಚಾರಣಕ್ಕೆ ಬಂದ ಯುವಕನೋರ್ವ ನಾಪತ್ತೆಯಾದ ಸಂದರ್ಭದಲ್ಲಿ ಹುಡುಕಾಟ ನಡೆಸಿದ ತಂಡವೇ ಕಾಡಾನೆಯ ಮುಂದೆ ಸಿಲುಕಿದ ಘಟನೆ ಸಂಭವಿಸಿತ್ತು.

ಪೊಲೀಸರ, ಅರಣ್ಯ ಇಲಾಖೆಯ ಹಾಗೂ ಸ್ಥಳೀಯರ ಪ್ರಯತ್ನದಿಂದ ನಾಪತ್ತೆಯಾಗಿದ್ದ ಯುವಕ ಸುರಕ್ಷಿತನಾಗಿ ಹೊರಬಂದಿದ್ದು, ಪ್ರಕರಣ ಸುಖಾಂತ್ಯಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News