ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ವಿರುದ್ಧ ಸರಕಾರಕ್ಕೆ ದೂರು: ಜತೀಂದ್ರ ಶೆಟ್ಟಿ

Update: 2023-12-05 16:47 GMT

ಜತೀಂದ್ರ ಶೆಟ್ಟಿ

ಉಪ್ಪಿನಂಗಡಿ: ಓರ್ವ ಜನಪ್ರತಿನಿಧಿಯಾಗಿ ಸುಳ್ಳು ಮಾಹಿತಿ ನೀಡಿ ಸರಕಾರಿ ಸವಲತ್ತುಗಳನ್ನು ಪಡೆಯುವ ಮೂಲಕ ಅಧಿಕಾರ ದುರುಪಯೋಗ ನಡೆಸಿದ್ದಾರೆಂದು 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆಯ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೆ. ಇದಕ್ಕೆ ಸಂಬಂಧಿಸಿ ಚುನಾವಣಾ ಆಯೋಗದಿಂದ ಬಂದ ಹಿಂಬರಹದಲ್ಲಿನ ಸಲಹೆಯನ್ನಾಧರಿಸಿ ಪಂಚಾಯತ್ ರಾಜ್ ಅಧಿನಿಯಮದ ಅನುಸಾರ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಲಿಖಿತ ದೂರು ಸಲ್ಲಿಸಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಅಲಿಮಾರ ಜತೀಂದ್ರ ಶೆಟ್ಟಿ ತಿಳಿಸಿದ್ದಾರೆ.

ಈ ಸಂಬಂಧ ಉಪ್ಪಿನಂಗಡಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ ನೆಕ್ಕಿಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿರುವ ಸುಜಾತ ರೈ ಅವರು ಚುನಾವಣಾ ಸಮಯದಲ್ಲಿ ಸಲ್ಲಿಸಲಾದ ಪ್ರಮಾಣಪತ್ರದಲ್ಲಿ ಸುಳ್ಳು ಮಾಹಿತಿ ನಿಡಿದ್ದಾರೆಂದು ದಾಖಲೆ ಸಹಿತ ತಾನು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿ, ಅವರ ಸದಸ್ಯತ್ವ ರದ್ಧತಿಗಾಗಿ ಮನವಿ ಮಾಡಿದ್ದೆ. ಆದರೆ ರಾಜ್ಯ ಚುನಾವಣಾ ಆಯೋಗವು ಸದಸ್ಯತ್ವ ರದ್ಧತಿ ವಿಚಾರ ತನ್ನ ವ್ಯಾಪ್ತಿಗೆ ಬರುವುದಿಲ್ಲವೆಂದು ತಿಳಿಸಿದ್ದು, ಸಕ್ಷಮ ನ್ಯಾಯಾಲಯ ಅಥವಾ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43ರ ಅಡಿ ಸರಕಾರಕ್ಕೆ ಮನವಿ ಸಲ್ಲಿಸಬಹುದೆಂದು ತಿಳಿಸಿರುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿರುವುದಾಗಿ ಅವರು ದಾಖಲೆ ಸಹಿತ ವಿವರಿಸಿದರು.

ತಾನು ಮನೆ ನಿರ್ಮಿಸುವೆನೆಂದು ಸರಕಾರಿ ಅನುದಾನ ಪಡೆದು, ತನ್ನ ಗಂಡನ ಹೆಸರಿನಲ್ಲಿ ಬೇರೊಂದು ಸರ್ವೆ ನಂಬ್ರದಲ್ಲಿ ಮನೆ ನಿರ್ಮಿಸುವ ಮೂಲಕ ಅಧಿಕಾರ ದುರುಪಯೋಗ ನಡೆಸಿದ್ದಾರೆಂದು ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ನಡೆದ ತನಿಖೆಯಲ್ಲಿ ಆರೋಪಿ ಪಂಚಾಯತ್ ಅಧ್ಯಕ್ಷೆಯು ತಾನು ತಪ್ಪೆಸಗಿರುವುದನ್ನು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ದಂಡ ಸಹಿತ ಸರಕಾರಿ ಅನುದಾನವನ್ನು ಸರಕಾರಕ್ಕೆ ಮರು ಪಾವತಿಸಲು ಸೂಚಿಸಲಾಗಿತ್ತು. ಒಟ್ಟು 2,20,428 ರೂ. ಮೊತ್ತವನ್ನು ಸರಕಾರಕ್ಕೆ ಹಿಂದಿರುಗಿಸಲು ನೋಟೀಸು ನೀಡಲಾಗಿದೆಯಾದರೂ, ಆರೋಪಿಯು ದಂಡ ಪಾವತಿಸದೇ ಇರುವುದರಿಂದ ಮುಂದಿನ ಕ್ರಮವಾಗಿ ಆರೋಪಿಯ ಪಹಣಿ ಪತ್ರದ ಹನ್ನೊಂದನೇ ಕಾಲಂ ನಲ್ಲಿ ಸರಕಾರಕ್ಕೆ ಪಾವತಿಸಬೇಕಾದ ಮೊತ್ತವನ್ನು ನಮೂದಿಸಿ ಋಣ ಬಾಕಿ ಇದೆ ಎಂಬ ಉಲ್ಲೇಖವನ್ನು ದಾಖಲಿಸಲಾಗಿದೆ. ಆದರೆ ನೋಟೀಸಿನಲ್ಲಿ ತಿಳಿಸಲಾದ ಮರುಪಾವತಿ ಮೊತ್ತಕ್ಕೂ ಪಹಣಿ ಪತ್ರದಲ್ಲಿ ನಮೂದಿಸಲಾದ ಮರುಪಾವತಿ ಮೊತ್ತವನ್ನು ತಾ.ಪಂ. ಅಧಿಕಾರಿಗಳು ವ್ಯತ್ಯಾಸಗೊಳಿಸಿದ್ದಾರೆ. ಇವರ ಈ ನಡೆಯನ್ನು ತಾನು ಪ್ರಶ್ನಿಸುವುದಾಗಿ ತಿಳಿಸಿದರು.

ತಾನು ತಪ್ಪೆಸಗಿರುವುದನ್ನು ಒಪ್ಪಿಕೊಂಡ ಕಾರಣ ಅಪರಾಧವೆಸಗಿರುವುದು ದೃಢಪಟ್ಟ ಕಾರಣಕ್ಕೆ ಆರೋಪಿತೆಯು ಪಂಚಾಯತ್ ಅಧ್ಯಕ್ಷೆಯಾಗಿ ಮುಂದುವರಿಯಲು ನೈತಿಕ ಹಕ್ಕಿಲ್ಲವೆಂದ ಅವರು, ಈ ಬಗ್ಗೆ ಹೋರಾಟ ಮುಂದುವರೆಯುವುದು ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News