ಉಳ್ಳಾಲ| ವಿವಿಧ ಕಾಮಗಾರಿಗಳು ಶೀಘ್ರ ಪೂರ್ಣಗೊಳಿಸಿ: ಅಧಿಕಾರಿಗಳಿಗೆ ಸ್ಪೀಕರ್ ಯುಟಿ ಖಾದರ್ ಸೂಚನೆ

Update: 2025-03-27 20:27 IST
ಉಳ್ಳಾಲ| ವಿವಿಧ ಕಾಮಗಾರಿಗಳು ಶೀಘ್ರ ಪೂರ್ಣಗೊಳಿಸಿ: ಅಧಿಕಾರಿಗಳಿಗೆ ಸ್ಪೀಕರ್ ಯುಟಿ ಖಾದರ್ ಸೂಚನೆ
  • whatsapp icon

ಉಳ್ಳಾಲ: ದರ್ಗಾ ಉರೂಸ್ ಹಾಗೂ ಭಗವತಿ ಕ್ಷೇತ್ರದಲ್ಲಿ ಭರಣಿ ಮಹೋತ್ಸವ ಕಾರ್ಯಕ್ರಮ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಅನುದಾನ ಬಿಡುಗಡೆ ಆಗಿರುವ ರಸ್ತೆಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಹೊಂಡಗಳು ತುಂಬಿರುವ ರಸ್ತೆ ಗಳ ಶೀಘ್ರ ದುರಸ್ತಿ ಮಾಡುವಂತೆ ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಸ್ಪೀಕರ್ ಯುಟಿ ಖಾದರ್ ಸೂಚನೆ ನೀಡಿದರು.

ಅವರು ಉಳ್ಳಾಲ ನಗರ ಸಭೆಯಲ್ಲಿ ಉರೂಸ್ ಪ್ರಯುಕ್ತ ನಡೆದ ಪ್ರಗತಿ ಪರಿಶೀಲನಾ ಸಭೆ ಹಾಗೂ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಬ್ಬಕ್ಕ ಸರ್ಕಲ್ ನಿಂದ ಕೋಟೆಪುರ ರಸ್ತೆ ಅಗಲೀಕರಣಕ್ಕೆ 6.5 ರೂ. ಕೋಟಿ ಬಿಡುಗಡೆ ಆಗಿದ್ದು,ಈ ಕಾಮಗಾರಿ ಉರೂಸ್ ಗೆ ಮುಂಚೆ ಆಗಬೇಕು. ಈ ಪ್ರದೇಶದಲ್ಲಿರುವ ಅಂಗಡಿಗಳನ್ನು ತೆರವು ಮಾಡಬೇಕಾಗುವ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರಿಗೆ ಶೀಘ್ರ ನೋಟೀಸ್ ನೀಡಬೇಕು. ತೊಕ್ಕೊಟ್ಟು ಒಳಪೇಟೆ ರಸ್ತೆ ದುರಸ್ತಿ, ಅಂಬೇಡ್ಕರ್ ಭವನಕ್ಕೆ ಕಾಂಕ್ರಿಟೀಕರಣ,ಶೀಟ್ ವ್ಯವಸ್ಥೆ, ಡಾಮರೀಕರಣ ಎದ್ದು ಹೋಗಿರುವ ರಸ್ತೆಗಳಿಗೆ ಮರುಡಾಮರೀಕಣ ಮಾಡಬೇಕು. 4.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಅಬ್ಬಕ್ಕ ಸರ್ಕಲ್ ನಿಂದ ಬೀಚ್ ರಸ್ತೆ ಕಾಮಗಾರಿ ಉರೂಸ್ ಮುಗಿದ ಬಳಿಕ ಆರಂಭಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು

ಉಳ್ಳಾಲ ಬೈಲ್ ಸೇತುವೆ ಸಹಿತ ಎರಡು ಸೇತುವೆ ನಿರ್ಮಾಣಕ್ಕೆ 30 ಕೋಟಿ ರೂ. ಅನುದಾನ ಮೀಸಲಿಡಲಾಗುವುದು. ಪಂಡಿತ್ ಹೌಸ್ ರಸ್ತೆ ಅಗಲೀಕರಣ ಮಾದರಿಯಲ್ಲಿ ಉಳ್ಳಾಲ ಬೈಲ್ ರಸ್ತೆ ಅಗಲೀಕರಣ ಆಗಬೇಕು ಎಂದರು.

ಕಾನೂನು ಸುವ್ಯವಸ್ಥೆ: ವಾಹನ ಸಂಚಾರ, ಪಾರ್ಕಿಂಗ್ ಸಮಸ್ಯೆ ಕೆಲವು ಇವೆ. ಕಾನೂನು ಉಲ್ಲಂಘಿಸಿದ 24 ಬೈಕ್ ವಶದಲ್ಲಿವೆ. ಕೆಲವು ದ್ವಿಚಕ್ರ ವಾಹನ ದವರು ಸಿಕ್ಕ ಜಾಗದಲ್ಲಿ ಪಾರ್ಕಿಂಗ್ ಮಾಡಿ ಕೀ ಬಿಟ್ಟು ಹೋಗುತ್ತಾರೆ. ಕೆಲವರು ಕೀಯನ್ನು ಶಾಪ್ ನಲ್ಲಿ ಕೊಟ್ಟು ಹೋಗುತ್ತಾರೆ. ಇದು ದುರುಪಯೋಗ ಆಗುತ್ತದೆ.ಪಾರ್ಕಿಂಗ್ ಇರುವ ಜಾಗದಲ್ಲಿ ವಾಹನ ಪಾರ್ಕ್ ಮಾಡಿದರೆ ಸಮಸ್ಯೆ ಬರುವುದಿಲ್ಲ ಎಂದು ಎಸಿಪಿ ಧನ್ಯ ಅವರು ಸಂಚಾರ ಸಮಸ್ಯೆಗಳ ಬಗ್ಗೆ ಸ್ಪೀಕರ್ ಯುಟಿ ಖಾದರ್ ಅವರ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಯುಟಿ ಖಾದರ್ ಅವರು ಸುರಕ್ಷಿತ ದೃಷ್ಟಿಯಿಂದ ಏನೆಲ್ಲಾ ಆಗಬೇಕು, ಆ ಬಗೆ ವರದಿ ನೀಡಬೇಕು. ಉಳ್ಳಾಲ ಉರೂಸ್ ಸಂದರ್ಭದಲ್ಲಿ ಸಿಗ್ನಲ್, ಸಿಸಿ ಕ್ಯಾಮರಾ ಎಷ್ಟು ಆಗಬೇಕು, ಬಂದೋಬಸ್ತ್ ಗೆ ಏನು ಆಗಬೇಕು ಎಂಬ ಬಗೆ ವರದಿ ನೀಡಬೇಕು. ಸಿಸಿಟಿವಿ ಇಲ್ಲದ ಜಾಗದಲ್ಲಿ ಸಿಸಿಕ್ಯಾಮರಾ ಅಳವಡಿಕೆ ಜೊತೆಗೆ ಸಿಗ್ನಲ್ ವ್ಯವಸ್ಥೆ ಇರಬೇಕು. ಜನರ ಸಂಚಾರಕ್ಕೆ ತೊಂದರೆ ಆಗದಂತೆ ಬಂದೋಬಸ್ತ್ ಇರಬೇಕು. ಭಗವತಿ ಕ್ಷೇತ್ರದಲ್ಲಿ ಭರಣಿ ಮಹೋತ್ಸವ ಹೊರೆ ಕಾಣಿಕೆ ನಡೆಯುವ ದಿನ ಬ್ಲಾಕ್ ಆಗುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಕ್ರಮ ವಹಿಸಬೇಕು. ಎಲ್ಲಾ ಅಪರಾಧ ಗಳಿಗೆ ಒಂದೇ ಕಾನೂನಡಿ ತನಿಖೆ ಬೇಡ. ರೌಡಿಗಳ ತನಿಖೆ ಬೇರೆ ಆಗಲಿ. ಕೌಟುಂಬಿಕ ಇನ್ನಿತರ ಸಣ್ಣ ಪುಟ್ಟ ಪ್ರಕರಣಗಳ ತನಿಖೆ ಬೇರೆ ಮಾಡಿ ಎಂದು ಸ್ಪೀಕರ್ ಯುಟಿ ಖಾದರ್ ಎಸಿಪಿ ಧನ್ಯ ಅವರಿಗೆ ಸೂಚನೆ ನೀಡಿದರು.

ಮೆಸ್ಕಾಂ: ಉರೂಸ್ ಹಿನ್ನೆಲೆಯಲ್ಲಿ ವಿದ್ಯುತ್ ಪೂರೈಕೆ ಹಾಗೂ ಸಂಪರ್ಕ ಕಾಮಗಾರಿ ಶೀಘ್ರ ಮುಗಿಸಬೇಕು ಎಂದು ಸ್ಪೀಕರ್ ಯುಟಿ ಖಾದರ್ ಮೆಸ್ಕಾಂ ಸಹಾಯಕ ಅಭಿಯಂತರ ದಯಾನಂದ ಅವರಿಗೆ ಸೂಚನೆ ನೀಡಿದರು.

ಈ ವೇಳೆ ಪ್ರತಿಕ್ರಿಯಿಸಿದ ಮೆಸ್ಕಾಂ ಎಇ ದಯಾನಂದ ಅವರು ನಗರಸಭೆ ಸೂಚಿಸಿದ ಕಾಮಗಾರಿ ಗಳಿಗೆ ಅನುಮೋದನೆ ನೀಡಲಾಗಿದೆ. ಆದರೆ ನಗರಸಭೆ 12 ಲಕ್ಷ ಮೊತ್ತದ ಬಿಲ್ ಬಾಕಿ ಇಟ್ಟಿದೆ. ಇದಕ್ಕೆ ಶೀಘ್ರ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಯುಟಿ ಖಾದರ್, ಗಣತ್ಯಾಜ್ಯ, ಮೆಸ್ಕಾಂ, ನೀರಿನ ಶುಲ್ಕ ಶೀಘ್ರ ಪಾವತಿ ಮಾಡಬೇಕು. ಮೊದಲು ಬಿಲ್ ಪಾವತಿ ಮಾಡಿ.ಕಾಮಗಾರಿ ಆಮೇಲೆ ಮಾಡಿದರೆ ಸಾಕು ಎಂದು ಪೌರಾಯುಕ್ತ ಮತಡಿ ಅವರಿಗೆ ಸೂಚಿಸಿದರು.

ಕುಡಿಯುವ ನೀರಿನ ಮಾಸಿಕ ಶುಲ್ಕ ಸಂಗ್ರಹ ಮಾಡಬೇಕು. ಈ ವಿಚಾರದಲ್ಲಿ ಆಯಾ ವಾರ್ಡ್ ಸದಸ್ಯರು ಸಹಕರಿಸಬೇಕು. ಅಕ್ರಮ ನೀರಿನ ಸಂಪರ್ಕ ವನ್ನು ಶೀಘ್ರ ಸಕ್ರಮ ಮಾಡಬೇಕು ಎಂದು ಹೇಳಿದರು.

ವೈದ್ಯಕೀಯ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈಗ ವೈದ್ಯರ ಕೊರತೆ ಇಲ್ಲ.ಎಲ್ಲಾ ವ್ಯವಸ್ಥೆ ಇದೆ, ವೈದ್ಯರು ಕೂಡ ಇದ್ದಾರೆ. ಯೆನೆಪೋಯ ಆಸ್ಪತ್ರೆ ಕೈಜೋಡಿಸಿರುವುದರಿಂದ ಚಿಕಿತ್ಸೆ ಯಶಸ್ವಿಯಾಗಿ ನಡೆಯುತ್ತಿದೆ. ದಿನಕ್ಕೆ 60 ರೋಗಿಗಳು ಬರುತ್ತಿದ್ದ ಈ ಆಸ್ಪತ್ರೆಯಲ್ಲಿ ಈಗ 200 ಕ್ಕೂ ಅಧಿಕ ರೋಗಿಗಳು ಪ್ರತಿ ದಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾರ್ವಜನಿಕರ ಬೇಡಿಕೆಯಂತೆ ಸ್ಕ್ಯಾನಿಂಗ್ ಉಚಿತ ಮಾಡಲು ಆಗುವುದಿಲ್ಲ. ಇದಕ್ಕೆ ಸಣ್ಣ ಶುಲ್ಕ 100 ರೂ.ಮಾತ್ರ ಇಡಲಾಗಿದೆ.  ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಗದು. ಸದ್ಯದ ಮಟ್ಟಿಗೆ ವ್ಯವಸ್ಥೆ ಇದೆ ಎಂದ ಅವರು ಆಸ್ಪತ್ರೆಯಲ್ಲಿ ಕೊರತೆ ಏನಾದರೂ ಇದ್ದಲ್ಲಿ ವರದಿ ಒಪ್ಪಿಸಬೇಕು ಎಂದು ಸಿಬ್ಬಂದಿ ಗೆ ಸೂಚನೆ ನೀಡಿದರು.

ಅಸಮರ್ಪಕ ಕಾಮಗಾರಿ: ಖಾದರ್ ಅಸಮಾಧಾನ

ಉಳ್ಳಾಲ ನಗರ ವ್ಯಾಪ್ತಿಯಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಆಗಲಿಲ್ಲ ಎಂಬ ಆರೋಪದ ಹಿನ್ನಲೆಯಲ್ಲಿ ಅಮೃತ್ 2.0 ಕುಡಿಯುವ ನೀರು ಸರಬರಾಜು ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಅಜೇಯ್ ಸಹಾಯಕ ಅಭಿಯಂತರ ಶ್ರೀಕಾಂತ್ ಅವರನ್ನು ತರಾಟೆ ಗೈದ ಸ್ಪೀಕರ್ ಯುಟಿ ಖಾದರ್ ಅಸಮರ್ಪಕ ಕಾಮಗಾರಿ ಶೀಘ್ರ ಸರಿಪಡಿಸುವಂತೆ ತಾಕೀತು ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಕೌನ್ಸಿಲ್ ಖಲೀಲ್ ಅವರು, ಅಮೃತ್ 2.0 ಕುಡಿಯುವ ನೀರು ಸರಬರಾಜು ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಸಮರ್ಪಕ ಪೈಪ್ ಲೈನ್ ಕಾಮಗಾರಿ ಮಾಡಿಲ್ಲ. ರಸ್ತೆ ಮಧ್ಯೆ ಅಗೆದು ಪೈಪ್ ಹಾಕಿ ಒಂದು ಭಾಗಕ್ಕೆ ಮಾತ್ರ ನೀರು ಸಂಪರ್ಕ ಕೊಟ್ಟಿದ್ದಾರೆ. ಅಗೆದು ಹಾಕಿದ ರಸ್ತೆಯನ್ನು ಮುಚ್ಚುವ ಕೆಲಸ ಮಾಡುವುದಿಲ್ಲ. ಈ ಬಗ್ಗೆ ವಿಚಾರಿಸಲು ಕರೆ ಮಾಡಿದರೆ ಕರೆ ಕೂಡ ಸ್ವೀಕರಿಸುವುದಿಲ್ಲ. ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವುದಿಲ್ಲ ಎಂದು ಆರೋಪಿಸಿದರು. ಇದಕ್ಕೆ ಧ್ವನಿ ಗೂಡಿಸಿದ ಕೌನ್ಸಿಲರ್ ಅಯ್ಯೂಬ್ ಅವರು ನನ್ನ ವಾರ್ಡ್ ನಲ್ಲಿ ರಸ್ತೆ ಮಧ್ಯೆ ಅಗೆದು ಹಾಕಿ ರಸ್ತೆ ಹಾಳು ಮಾಡಿದ್ದಾರೆ. ಕೆಲವು ಕಡೆ ಹಣ ವಸೂಲಿ ಕೂಡ ನಡೆದಿದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಅವ್ಯವಸ್ಥೆ ಬಗ್ಗೆ ಚರ್ಚೆ ನಡೆಯಿತು

ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಪೀಕರ್ ಯುಟಿ ಖಾದರ್ ಅವರು ಈ ವಿಚಾರದ ಬಗ್ಗೆ ಮೇಲಧಿಕಾರಿಗಳ ಗಮನ ಸೆಳೆದು ಶನಿವಾರ ಪ್ರತ್ಯೇಕ ಸಭೆ ನಡೆಸುವ. ಇದಕ್ಕಿಂತ ಮೊದಲು ಕುಡಿಯುವ ನೀರಿನ ಕಾಮಗಾರಿ ಬಗ್ಗೆ ಪರಿಶೀಲನೆ ನಡೆಸಿ. ಸಮಸ್ಯೆ ಕಾಲ ಬುಡಕ್ಕೆ ಬರುವುದಿಲ್ಲ. ಎದ್ದು ಹೋಗಿ ನೋಡಬೇಕು.ಎಡಿಬಿಯ ನಕ್ಷೆ ಪಡೆದು ಎಲ್ಲಿಗೆ ನೀರು ಹೋಗುತ್ತದೆ ಎಂಬುದನ್ನು ಪರಿಶೀಲನೆ ನಡೆಸುವಂತೆ ಅಮೃತ್ 2.0 ಕುಡಿಯುವ ನೀರು ಸರಬರಾಜು ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಅಜೇಯ್ ಸಹಾಯಕ ಅಭಿಯಂತರ ಶ್ರೀಕಾಂತ್ ಅವರಿಗೆ ಚಾಟಿ ಬೀಸಿದ ಅವರು ಸಮಸ್ಯೆ ಈ ರೀತಿ ಮುಂದುವರೆದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಯಿತು. ಸ್ಪೀಕರ್ ಯುಟಿ ಖಾದರ್ ಹಕ್ಕು ಪತ್ರ ವಿತರಣೆ ಮಾಡಿದರು.

ಪೌರಾಯುಕ್ತ ಮತಡಿ, ಅಧ್ಯಕ್ಷ ಶಶಿ ಕಲ, ಉಪಾಧ್ಯಕ್ಷ ಸಪ್ನಾ ಹರೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ತಹಶೀಲ್ದಾರ್ ಪುಟ್ಟರಾಜು ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News