ಮರಳು ಸಮಸ್ಯೆಗೆ ಕಾಂಗ್ರೆಸ್ ಕಾರಣ: ಜಗದೀಶ ಶೇಣವ

Update: 2023-11-10 10:17 GMT

ಮಂಗಳೂರು, ನ. 10: ಕರಾವಳಿಯಲ್ಲಿ ಮರಳು ಸಮಸ್ಯೆಗೆ ಕಾಂಗ್ರೆಸ್ ಕಾರಣವಾಗಿದ್ದು, ಮರಳು ಮಾಫಿಯಾ ಕೂಡ ಶಾಮೀಲಾಗಿದೆ ಎಂದು ದ.ಕ.ಜಿಲ್ಲಾ ಬಿಜೆಪಿ ವಕ್ತಾರ ಜಗದೀಶ್ ಶೇಣವ ಆರೋಪಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಕ್ಷಣದಿಂದ ಮರಳು ಸಮಸ್ಯೆ ತಲೆದೋರಿದೆ. ಬಿಜೆಪಿ ಅವಧಿಯಲ್ಲಿ ಮರಳು ಸಮಸ್ಯೆ ಇದ್ದರೂ ಮರಳು ನೀತಿಯನ್ನು ಸಡಿಲಿಕೆ ಮಾಡಿ ಕಟ್ಟಡ ನಿರ್ಮಾಣಕ್ಕೆ ಮರಳು ಪೂರೈಕೆಗೆ ಅವಕಾಶ ಕಲ್ಪಿಸಿತ್ತು. ಆದರೆ ಈಗ ನಿರ್ಮಾಣ ಕಾಮಗಾರಿಗೆ ಮರಳು ಇಲ್ಲದೆ ಜಿಲ್ಲೆಯ ಆರ್ಥಿಕತೆಗೂ ಭಾರಿ ಹೊಡೆತ ಬಿದ್ದಿದೆ ಎಂದು ಆರೋಪಿಸಿದರು.

ಕಾರ್ಮಿಕರು ಉದ್ಯೋಗ ಇಲ್ಲದೆ ಪರಿತಪಿಸುವಂತಾಗಿದೆ. ಈ ಸಮಸ್ಯೆ ವಿರುದ್ಧ ಮರಳು ಸಂಘಟನೆಗಳು, ಕ್ರೆಡೈ ಹಾಗೂ ಗುತ್ತಿಗೆದಾರರು ನಡೆಸುತ್ತಿರುವ ಹೋರಾಟವನ್ನು ಬಿಜೆಪಿ ಬೆಂಬಲಿಸುವುದಾಗಿ ಹೇಳಿದರು.

ಪ್ರಸಕ್ತ ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದ್ದು, ಡಿಕೆಶಿ, ಖರ್ಗೆ, ಸಿದ್ದು ಬಣಗಳ ರಾಜಕೀಯದಲ್ಲೇ ಕಾಲ ಕಳೆಯುತ್ತಿದೆ. ಸರಕಾರದ ಅಸಡ್ಡೆಯಿಂದಾಗಿ ಅಗತ್ಯ ಕಾಮಗಾರಿಗೆ ಮರಳು

ತೆಗೆಯಲೂ ಆಗುತ್ತಿಲ್ಲ, ಒಂದು ವೇಳೆ ತೆಗೆದರೂ ಅದನ್ನು ಸಾಗಿಸಲೂ ಸಾಧ್ಯವಾಗುತ್ತಿಲ್ಲ.

ಇದರಿಂದಾಗಿ ಮರಳು ದರ ದುಪ್ಪಟ್ಟು ಆಗಿದ್ದು, ಸಾಮಾನ್ಯರಿಗೆ ಕಟ್ಟಡ ನಿರ್ಮಾಣ ಅಸಾಧ್ಯಎಂಬಂತಾಗಿದೆ ಎಂದರು.

ಪ್ರಸಕ್ತ ದ.ಕ.ಜಿಲ್ಲೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಅನುದಾನ ಬಿಜೆಪಿ

ಸರಕಾರದ ಅವಧಿಯಲ್ಲಿ ಬಿಡುಗಡೆ ಮಾಡಿರುವುದು. ಈ ವಿಚಾರ ಗೊತ್ತಿಲ್ಲದೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹಾಗೂ ಪಾಲಿಕೆ ವಿಪಕ್ಷ ಸದಸ್ಯ ಎ.ಸಿ.ವಿನಯರಾಜ್ ಅವರು ಬಿಜೆಪಿ ಶಾಸಕರ ವಿರುದ್ಧ ಮಾತನಾಡುತ್ತಿದ್ದಾರೆ. ಬಿಜೆಪಿ ಸರಕಾರದ ಅವಧಿಯಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಕ್ಷೇತ್ರಕ್ಕೆ 3 ಸಾವಿರ ಕೋಟಿ ರು, ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಅವರಿಗೆ 2,500 ಕೋಟಿ ರು., ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ 3 ಸಾವಿರ ಕೋಟಿ ರು. ಮೊತ್ತ ಬಿಡುಗಡೆಯಾಗಿತ್ತು. ಅದೇ ಮೊತ್ತದಲ್ಲಿ ಈಗ ಕಾಮಗಾರಿ ನಡೆಯುತ್ತಿದ್ದು, ಈ ಸತ್ಯ ವಿಚಾರ ಗೊತ್ತಿಲ್ಲದೆ ಕಾಂಗ್ರೆಸಿಗರು ಬಿಜೆಪಿ ಶಾಸಕರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.

ಗೃಹಲಕ್ಷ್ಮಿ ಯೋಜನೆ ಯಶಸ್ವಿಯಾಗಿ ಜಾರಿಯಾಗಿದೆ ಎಂದು ಕಾಂಗ್ರೆಸಿಗರು ಹೇಳುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಇನ್ನೂ ಅನೇಕ ಮಂದಿಗೆ ಯೋಜನೆಯಡಿ ಮೊತ್ತವೇ ಖಾತೆಗೆ ಜಮೆಯಾಗುತ್ತಿಲ್ಲ. ನನ್ನ ಮನೆಯ ಕೆಲಸದಾಕೆಯ ಹಾಗೂ ಕಾರು ಚಾಲಕನ ಪತ್ನಿಯ ಖಾತೆಗೂ ಹಣ ಬಂದಿಲ್ಲ. ನುಡಿದಂತೆ ನಡೆದಿದ್ದೇವೆ ಎಂದು ಸುಳ್ಳು ಹೇಳುವ ವಚನ ಭ್ರಷ್ಟ ಸರಕಾರ ಎಂದು ಜಗದೀಶ್ ಶೇಣವ ಹೇಳಿದರು.

ಬಿಜೆಪಿ ಮುಖಂಡರಾದ ಕಸ್ತೂರಿ ಪಂಜ, ರವಿಶಂಕರ್ ಮಿಜಾರ್, ರಾಧಾಕೃಷ್ಣ, ಭರತ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News