ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿಸಿ ವಂಚನೆ ಆರೋಪ: ಪ್ರಕರಣ ದಾಖಲು
ಮಂಗಳೂರು, ನ.18: ಅಧಿಕ ಲಾಭಾಂಶದ ಆಸೆಯೊಡ್ಡಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿಸಿ ಅಪರಿಚಿತರು ತನಗೆ 21 ಲಕ್ಷ ರೂ.ಗೂ ಅಧಿಕ ಹಣ ವಂಚನೆ ಮಾಡಿರುವ ಬಗ್ಗೆ ವ್ಯಕ್ತಿಯೊಬ್ಬರು ನೀಡಿದ ದೂರಿನಂತೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತರು ತನ್ನನ್ನು ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರ್ಪಡೆಗೊಳಿಸಿ ಹೆಚ್ಚಿನ ಲಾಭ ಬರುವ ಹೂಡಿಕೆಯ ಬಗ್ಗೆ ಮಾಹಿತಿ ನೀಡಿದ್ದರು. ಅದನ್ನು ನಂಬಿದ ತಾನು ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದೆ. ತನಗೆ ಕಳುಹಿಸಲಾಗಿದ್ದ ಆ್ಯಪ್‌ನಲ್ಲಿ ಹೂಡಿಕೆಯ ವ್ಯವಹಾರ, ಲಾಭಾಂಶದ ವಿವರಗಳು ಗೋಚರಿಸುತ್ತಿತ್ತು. ಅದನ್ನು ನಂಬಿದ ತಾನು ಹಂತ ಹಂತವಾಗಿ ತನ್ನ ಮತ್ತು ಮಗಳ ಹಾಗೂ ಅಳಿಯನ ಖಾತೆಯಿಂದ 21 ಲ.ರೂ.ಗಳಿಗೂ ಅಧಿಕ ಹಣವನ್ನು ಹೂಡಿಕೆ ಮಾಡಿದ್ದೆ. ನ.7ರಂದು ಹೂಡಿಕೆ ಮಾಡಿದ ಮೊತ್ತ ಹಾಗೂ ಲಾಭಾಂಶವನ್ನು ನಗದೀಕರಿಸಲು ಯತ್ನಿಸಿದಾಗ ಇನ್ನಷ್ಟು ಹೂಡಿಕೆ ಮಾಡಿದರೆ ಮಾತ್ರ ಹಣ ಪಡೆಯಲು ಸಾಧ್ಯವಿದೆ ಎಂದು ಸೂಚಿಸಿದರು. ಆವಾಗ ತನಗೆ ಇದೊಂದು ವಂಚನೆಯ ಜಾಲವೆಂಬುದು ಗೊತ್ತಾಯಿತು ಎಂದು ವಂಚನೆಗೊಳಗಾದ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.