ಬಿಜೆಪಿ ಗೆದ್ದರೆ ಸಂವಿಧಾನಕ್ಕೆ ಅಪಾಯ: ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ

Update: 2024-04-18 05:50 GMT

ಸುರತ್ಕಲ್: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಸಂವಿಧಾನಕ್ಕೆ ಅಪಾಯವಿದೆ. ಜಾತ್ಯತೀತ ತತ್ವ ಸಿದ್ಧಾಂತದಲ್ಲಿ ನಂಬಿಕೆಯಿರುವ ಸಮಾನ ಮನಸ್ಕರು ಒಗ್ಗಟ್ಟಾಗಿ ಬಿಜೆಪಿಯನ್ನು ಸೋಲಿಸುವ ಮೂಲಕ ಈ ದೇಶದ ಸಂವಿಧಾನವನ್ನು ಕಾಪಾಡಬೇಕಾಗಿದೆ ಎಂದು ಮಾಜಿ ಶಾಸಕ ಕೆ.ವಿಜಯ ಕುಮಾರ್ ಶೆಟ್ಟಿ ಹೇಳಿದ್ದಾರೆ.

ಭಾರತದ ಸಂವಿಧಾನ ದೇಶದ ಜನತೆ ಒಗ್ಗಟ್ಟಿನಲ್ಲಿ ಸೌಹಾರ್ದದಿಂದ ಇರುವಂತೆ ಮಾಡಿದೆ. ಇದೀಗ ಸಂವಿಧಾನ ಬದಲಾವಣೆಯ ಹೇಳಿಕೆ ನೀಡುತ್ತಾ ಬರುತ್ತಿರುವ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿರುಸುದು ಒಳಿತು ಎಂದಿದ್ದಾರೆ.

ಒಂದು ದೇಶ ಒಂದು ಚುನಾವಣೆ, ಪೌರತ್ವ ತಿದ್ದುಪಡಿ ಮುಂತಾದ ದೇಶದ ಐಕ್ಯತೆಗೆ ದಕ್ಕೆ ತರುವಂತಹ ವಿಚಾರಗಳಿಗೆ ಹೆಚ್ಚಿನ ಒತ್ತು ಕೊಟ್ಟು ಪ್ರಣಾಳಿಕೆಯನ್ನು ಸಿದ್ಧಪಡಿಸಿರುವ ಬಿಜೆಪಿ ದೇಶದ ಒಗ್ಗಟ್ಟು, ಸೌಹಾರ್ದಕ್ಕೆ ಭಂಗ ತರುತ್ತಿದೆ ಎಂಬುದನ್ನು ದೇಶದ ಜನರು ಅರ್ಥಮಾಡಿಕೊಳ್ಳಬೇಕು.

ಈ ಹಿಂದೆ ಮಂಗಳೂರಿಗೆ ಭೇಟಿ ನೀಡಿದಾಗಲೆಲ್ಲಾ ಸುಳ್ಳು ಭಾಷಣ ಮಾಡಿ ಜನರನ್ನು ವಂಚಿಸುತ್ತಿದ್ದ ಮೋದಿಯವರು ಈ ಬಾರಿ ಸಾರ್ವಜನಿಕ ಸಭೆ ನಡೆಸದೆ ತಪ್ಪಿಸಿಕೊಂಡಿದ್ದಾರೆ.

ರೋಡ್ ಶೋ ನಡೆಸಿ ಜನರ ಗಮನವನ್ನು ಬೇರೆಡೆಗೆ ಹರಿಸಲು ಪ್ರಯತ್ನವಾಗಿದೆ. ಹೊರ ಜಿಲ್ಲೆಗಳಿಂದ ಜನರನ್ನು ಸೇರಿಸಿ ತಮ್ಮ ಮುಖವುಳಿಸಲು ಯತ್ನಿಸಿದ್ದಾರೆ ಇದು ನಾಚಿಕೆಕೇಡು ಎಂದು ಅವರು ಟೀಕಿಸಿದ್ದಾರೆ.

ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮೂಲಕ ಹಿಂದೂ- ಮುಸ್ಲಿಮರ ಮಧ್ಯೆ ಗಲಭೆ ಸೃಷ್ಟಿಸಿ, ಜನರನ್ನು ವಿಭಜಿಸಿ ಮತ ಪಡೆಯುವ ಇವರ ಕಪಟ ನಾಟಕ ಈಗ ಜನಸಾಮಾನ್ಯರಿಗೆ ಅರ್ಥವಾಗಿದೆ. ಚುನಾವಣೆಯ ದೃಷ್ಟಿಯಿಂದ ಇನ್ನೂ ಪೂರ್ಣಗೊಳ್ಳದ ರಾಮಮಂದಿರವನ್ನು ಉದ್ಘಾಟಿಸಿ ಓಟ್ ಬ್ಯಾಂಕ್ ರಾಜಕಾರಣ ಮಾಡಿದ್ದಾರೆ.

ಬಿಜೆಪಿಯ ಈ ರೀತಿಯ ಕಪಟ ನಾಟಕಗಳಿಂದ ಜನ ಬೇಸತ್ತಿದ್ದಾರೆ. ಆದುದರಿಂದ ಈ ಸಲ ಕೇಂದ್ರದಲ್ಲಿ ಕಾಂಗ್ರೆಸ್ ಮೈತ್ರಿಕೂಟ ಅಧಿಕಾರ ತರಲು ಮತದಾರರು ಮುಂದಾಗಿದ್ದಾರೆ. ಕರ್ನಾಟಕದಲ್ಲೂ ಕಾಂಗ್ರೆಸ್ ಹೆಚ್ವಿನ ಅಭ್ಯರ್ಥಿಗಳು ಸಂಸದರಾಗಿ ಆಯ್ಕೆಯಾಗಲಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News