ಅ.3ರಿಂದ ಶ್ರೀಕ್ಷೇತ್ರ ಕುದ್ರೋಳಿಯಲ್ಲಿ ದಸರಾ ನವರಾತ್ರಿ ಮಹೋತ್ಸವ
ಮಂಗಳೂರು: ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅ. 3ರಿಂದ 14ರವರೆಗೆ ಕುದ್ರೋಳಿ ಕ್ಷೇತ್ರದ ನವೀಕರಣದ ರೂವಾರಿ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ನೇತೃತ್ವದಲ್ಲಿ ಮಂಗಳೂರು ದಸರಾ ನವರಾತ್ರಿ ಮಹೋತ್ಸವ ನಡೆಯಲಿದೆ ಎಂದು ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಎಚ್ ಎಸ್ ಸಾಯಿರಾಮ್ ತಿಳಿಸಿದ್ದಾರೆ.
ಅವರು ಶ್ರೀ ಗೋಕರ್ಣನಾಥ ಕ್ಷೇತ್ರದ ಸಭಾಂಗಣದಲ್ಲಿ ಹಮ್ಮಿಕೊಂಡ ನವರಾತ್ರಿ ಮಹೋತ್ಸವದ ತಯಾರಿ ಸಭೆಯ ಅಧ್ಯಕ್ಷ ತೆ ವಹಿಸಿ ಮಾತನಾಡುತ್ತಿದ್ದರು.
ಖಜಾಂಜಿ ಪದ್ಮರಾಜ್ ಆರ್ ನವರಾತ್ರಿ ಉತ್ಸವ ಹಾಗೂ ಮಂಗಳೂರು ದಸರಾ ಕಾರ್ಯಕ್ರಮ ಗಳ ಬಗ್ಗೆ ಮಾಹಿತಿ ನೀಡಿದರು. ಅ.3ರಂದು ಶಾರದಾ ದೇವಿ ಹಾಗೂ ನವದುರ್ಗೆಯರ ಪ್ರತಿಷ್ಠಾಪನೆ 13ರಂದು ಸಂಜೆ 4ಗಂಟೆಗೆ ಮಂಗಳೂರು ದಸರಾ ಮೆರವಣಿಗೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ನವರಾತ್ರಿ ಉತ್ಸವದ ಸಂದರ್ಭದಲ್ಲಿ ಸ್ವಚ್ಛತೆ ಹಾಗೂ ವಾಹನ ದಟ್ಟಣೆಯ ಬಗ್ಗೆ ಹಾಗೂ ಡಿ.ಜೆಯನ್ನು ಕಡಿತಗೊಳಿಸುವ ಬಗ್ಗೆ ಮತ್ತು ಸೌಹಾರ್ದತೆಗೆ ಹಾನಿಯಾಗದಂತೆ ಟ್ಯಾಬ್ಲೊ ಮೆರವಣಿಗೆ ಹಮ್ಮಿಕೊಳ್ಳಲು ಗಮನ ಹರಿಸುವಂತೆ ಸಭೆಯಲ್ಲಿ ಸಲಹೆ ನೀಡಿದರು. ಈ ಬಗ್ಗೆ ಗಮನಹರಿಸುವುದಾಗಿ ಅಧ್ಯಕ್ಷ ಸಾಯಿರಾಮ್ ಭರವಸೆ ನೀಡಿದರು.
ಸಭೆಯಲ್ಲಿ ಕ್ಷೇತ್ರಾಡಳಿತ ಮಂಡಳಿಯ ಉಪಾಧ್ಯಕ್ಷ ಊರ್ಮಿಳ ರಮೇಶ್, ಕಾರ್ಯದರ್ಶಿ ಬಿ.ಮಾಧವ ಸುವರ್ಣ, ಖಜಾಂಜಿ ಪದ್ಮರಾಜ್ ಆರ್,ಆಡಳಿತ ಮಂಡಳಿಯ ಸದಸ್ಯರಾದ ರವಿಶಂಕರ್ ಮಿಜಾರ್,ಎಂ ಶೇಖರ ಪೂಜಾರಿ, ಸಂತೋಷ್ ಕುಮಾರ್, ಜಗದೀಪ್ ಡಿ ಸುವರ್ಣ, ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವೇಂದ್ರ ಪೂಜಾರಿ, ಸಹ ಅಧ್ಯಕ್ಷ ಡಾ.ಅನಸೂಯ ಬಿ.ಟಿ.ಸಾಲ್ಯಾನ್ , ಉಪಾಧ್ಯಕ್ಷ ಡಾ.ಬಿ.ಜೆ. ಸುವರ್ಣ ಸದಸ್ಯರಾದ ಚಿತ್ತ ರಂಜನ್ ಗರೋಡಿ , ಕೃತೀನ್ ಡಿ ಅಮೀನ್ , ಎಚ್.ಎಸ್. ಜಯರಾಜ್,ಹರಿಕೃಷ್ಣ ಬಂಟ್ವಾಳ್, ರಾಧಾಕೃಷ್ಣ,ಶೈಲೇಂದ್ರ ವೈ ಸುವರ್ಣ ,ಜತೀನ್ ಅತ್ತಾವರ, ರಮಾನಾಥ ಕಾರಂದೂರು, ಚಂದನ್ ದಾಸ್, ಪಿ.ಕೆ.ಗೌರವಿ ರಾಜಶೇಖರ್ ಜಯ ಕುಮಾರ್, ಲೀಲಾಕ್ಷ ಕರ್ಕೇರಾ, ಕಿಶೋರ್ ಡೊಂಗರ ಕೇರಿ, ಬಿ.ವಾಸುದೇವ ಕೋಟ್ಯಾನ್ ಮೊದಲಾದ ವರು ಉಪಸ್ಥಿತರಿದ್ದರು.