ದ.ಕ. ಜಿಲ್ಲೆಯಲ್ಲಿ ಗಿರಿಶಿಖರಗಳ ಚಾರಣ ನಿಷೇಧ ಹಿಂಪಡೆದ ಡಿಸಿ ಮುಲ್ಲೈ ಮುಗಿಲನ್
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸಂಬಂಧ ಗಿರಿಶಿಖರಗಳ ಚಾರಣ ನಿಷೇಧವನ್ನು ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ನಿಬಂಧನೆಗೊಳಪಟ್ಟು ತಕ್ಷಣದಿಂದ ಹಿಂಪಡೆಯುವುದಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಮುಂಗಾರು ಅವಧಿಯಲ್ಲಿ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾದ ಹಿನ್ನೆಲೆಯಲ್ಲಿ ಭೂಕುಸಿತ, ಗುಡ್ಡ ಕುಸಿತ, ಸಿಡಿಲು ಬಡಿತ, ಮರ ಬೀಳುವ ದುರ್ಘಟನೆಗಳು ನಡೆಯುವ ಕಾರಣ ಸಾರ್ಜಜನಿಕರ ಹಿತಾಸಕ್ತಿಯನ್ನು ಗಮನಿಸಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಗಿರಿತಾಣ, ಶಿಖರಗಳ ಚಾರಣ ಮತ್ತು ಹೋಂ ಸ್ಟೇ, ರೆಸಾರ್ಟ್, ಅರಣ್ಯ ಇಲಾಖೆ ವತಿಯಿಂದ ಕೈಗೊಳ್ಳುವ ಟ್ರೆಕ್ಕಿಂಗ್, ಸಾಹಸ ಚಟುವಟಿಕೆಗಳನ್ನು ನಿಷೇಧಿಸಲಾಗಿತ್ತು.
ಕಾರ್ಕಳದ ಕುದುರೆಮುಖ ವನ್ಯಜೀವಿ ಉಪ ಅರಣ್ಯ ಸಂರಕ್ಷಣಾಧಿಕಾರಿ ತಮ್ಮ ಪತ್ರದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಬೆಳ್ತಂಗಡಿ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಇರುವ ನೇತ್ರಾವತಿ ಪೀಕ್ ಚಾರಣವನ್ನು ನಿಷೇಧಿಸಿದ ಆದೇಶ ಹಿಂಪಡೆಯುವಂತೆ ಕೋರಿದ್ದಾರೆ. ಈ ಬಗ್ಗೆ ಪರಿಶೀಲಿಸಿ, ಜಿಲ್ಲೆಯ ಗಿರಿತಾಣ, ಶಿಖರಗಳ ಚಾರಣ, ಹೋಮ್ ಸ್ಟೇ, ರೆಸಾರ್ಟ್, ಅರಣ್ಯ ಇಲಾಖೆಯಿಂದ ಕೈಗೊಳ್ಳುವ ಟ್ರೆಕ್ಕಿಂಗ್, ಸಾಹಸ ಚಟುವಟಿಕೆಗಳ ನಿಷೇಧವನ್ನು ಹಿಂಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.