ಡಿ.24ರಂದು ಕೋಟೆಕಾರ್ ನಲ್ಲಿ ಸ್ಥಾಪಿತ ಮೆಸ್ಕಾಂ ನೂತನ ಉಪ ಕೇಂದ್ರ ಪರೀಕ್ಷಾರ್ಥ ಚಾಲನೆ: ಸದಾಶಿವ ಉಳ್ಳಾಲ್

Update: 2024-12-23 09:34 GMT

ಉಳ್ಳಾಲ: ಕೋಟೆಕಾರ್ ನಲ್ಲಿ ಮೆಸ್ಕಾಂ ವತಿಯಿಂದ ಒಂಭತ್ತು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ 33 ಕೆವಿ, 8 ಯ.ವಿ.ಎ ಸಾಮರ್ಥ್ಯದ ಉಪ ಕೇಂದ್ರದ ಪರೀಕ್ಷಾರ್ಥ ಚಾಲನೆ ಡಿ.24ರಂದು ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ತಿಳಿಸಿದ್ದಾರೆ.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಸದ್ಯ ಕಿನ್ಯ, ತಲಪಾಡಿ ಮತ್ತು ಮಾಡೂರು ಪ್ರದೇಶಗಳಿಗೆ 110 ಕೆವಿ ಕೊಣಾಜೆ ಉಪ ಕೇಂದ್ರದಿಂದ ಮತ್ತು ಕೋಟೆಕಾರ್, ಸೋಮೇಶ್ವರ ಪ್ರದೇಶಗಳಿಗೆ 33 ಕೆ ವಿ ವಿದ್ಯುತ್ ತೊಕೊಟ್ಟು ಉಪಕೇಂದ್ರದಿಂದ ವಿದ್ಯುತ್ ಸರಬರಾಜು ವ್ಯವಸ್ಥೆ ಮಾಡಲಾಗಿದೆ.

ವಿದ್ಯುತ್ ಮಾರ್ಗಗಳ ಓವರ್ ಲೋಡ್ ನಿಂದ ಕೆಲವು ಸಂದರ್ಭಗಳಲ್ಲಿ ವಿದ್ಯುತ್ ಕಡಿತ ಉಂಟಾಗುತ್ತಿದ್ದು, ಕೋಟೆಕಾರ್ ನಲ್ಲಿ ನೂತನವಾಗಿ ನಿರ್ಮಾಣವಾದ ಉಪ ಕೇಂದ್ರ ಚಾಲನೆಗೊಂಡ ಬಳಿಕ ಹಾಲಿ ಇರುವ ವಿದ್ಯುತ್ ಉಪ ಕೇಂದ್ರಗಳ ವಿದ್ಯುತ್ ಹೊರೆ ಕಡಿಮೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕಿನ್ಯ, ತಲಪಾಡಿ, ಕೋಟೆಕಾರ್ ಪ್ರದೇಶಗಳಿಗೆ ಉತ್ತಮ ರೀತಿಯಲ್ಲಿ ವಿದ್ಯುತ್ ಸರಬರಾಜಾಗಲಿದೆ. ಉಳ್ಳಾಲ ತಾಲೂಕಿನಲ್ಲೂ ಉತ್ತಮ ರೀತಿಯಲ್ಲಿ ವಿದ್ಯುತ್ ಸರಬರಾಜು ಸಾಧ್ಯವಾಗಲಿತ್ತದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ ಮಾತನಾಡಿ, ಈಗಾಗಲೇ ಮೆಸ್ಕಾಂ ಕೊಣಾಜೆ ಉಪ ವಿಭಾಗ ಆರಂಭಗೊಂಡಿದ್ದು, ಇದೀಗ ನೂತನ ಸೋಮೆಶ್ವರ ಶಾಖಾ ಕಚೇರಿ ಕೊಲ್ಯ ಕುಲಾಲ ಭವನದ ಬಳಿ ಪ್ರಾರಂಭಗೊಂಡಿದೆ. ಡಿ.24ರಂದು ನಾಟೆಕಲ್ ನಲ್ಲಿ ನೂತನ ಕಿನ್ಯ ಶಾಖಾ ಕಚೇರಿ ಪ್ರಾರಂಭಗೊಳ್ಳಲಿದೆ. ಮಂಜನಾಡಿ ಮತ್ತು ಕಿನ್ಯ ಗ್ರಾಮಗಳು ಈ ಶಾಖಾ ಕಚೇರಿಯ ವ್ಯಾಪ್ತಿಗೆ ಒಳಪಡಲಿದೆ. ಈ ಪ್ರದೇಶದ ಜನರಿಗೆ ವಿದ್ಯುತ್ ಸಂಬಂಧಿತ ಸೇವೆಗಳು ಲಭ್ಯವಾಗಲಿವೆ ಎಂದು ಹೇಳಿದರು.

ಉಳ್ಳಾಲ ನಗರಸಭೆ ವಿದ್ಯುತ್ ಅಂಡರ್ ಗ್ರೌಂಡ್ ಕೇಬಲ್ ಅಳವಡಿಕೆಗೆ ಸರಕಾರದಿಂದ 200 ಕೋಟಿ ರೂ. ಬಿಡುಗಡೆ ಆಗಿದೆ. ಮುಗೇರ್ ನಿಂದ ಚೆಂಬುಗುಡ್ಡೆಯವರೆಗೆ ಅಂಡರ್ ಗ್ರೌಂಡ್ ಕೇಬಲ್ ಕಾಮಗಾರಿ ಚಾಲ್ತಿಯಲ್ಲಿದೆ. ಜೊತೆಗೆ ಶಾಸಕರ ಅನುದಾನದಲ್ಲಿ ನದಿಯಲ್ಲಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಅಶ್ರಫ್ ಕೆ.ಸಿ.ರೋಡ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮನ್ಸೂರ್ ಮಂಚಿಲ, ಸದಸ್ಯ ಪಿಯೂಸ್ ಡಿಸೋಜ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News