ಮೇಲಾಧಿಕಾರಿಗಳ ತಪ್ಪಿನಿಂದ ಕೊಯಿಲ ಶಾಖೆಯ ಉಪ ವಲಯಾರಣ್ಯಾಧಿಕಾರಿ ಮತ್ತೆ ಸಸ್ಪೆಂಡ್: ಆರೋಪ

Update: 2023-08-12 14:02 GMT

ಸಂಜೀವ ಪೂಜಾರಿ ಕಾಣಿಯೂರು

ಪುತ್ತೂರು : 6 ತಿಂಗಳ ಹಿಂದೆ ತನ್ನ ಮೇಲೆ ವೃತಾ ಆರೋಪ ಹೊರಿಸಿ ಕರ್ತವ್ಯದಿಂದ ಅಮಾನತುಗೊಳಿಸಿದ ಪ್ರಕರಣಕ್ಕೆ ಸಂಬಂಧಿ ವಿಚಾರಣೆ ನಡೆಸಿದ ಕರ್ನಾಟಕ ಆಡಳಿತ ನ್ಯಾಯಾಧಿಕರಣದ ನ್ಯಾಯಾಲಯ ನೀಡಿದ ( ಪ್ರಕರಣದ ಡಿಸ್‍ಮಿಸ್) ಆದೇಶ ಪತ್ರವನ್ನು ತಪ್ಪಾಗಿ ಅರ್ಥೈಸಿಕೊಂಡು ಮೇಲಾಧಿಕಾರಿಗಳು ಇದೀಗ ಮತ್ತೆ ನನಗೆ ಅಮಾನತು ಆದೇಶ ಜಾರಿಗೊಳಿಸಿದ್ದಾರೆ ಎಂದು ಪುತ್ತೂರು ಅರಣ್ಯ ವಲಯದ ಕೊಯಿಲ ಶಾಖೆಯ ಉಪ ವಲಯಾರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ಅವರು ಆರೋಪಿಸಿದ್ದಾರೆ.

ತನಗೆ ಅನ್ಯಾಯವಾಗಿದೆ ಎಂದು ಪುತ್ತೂರಿನಲ್ಲಿ ಮಾಧ್ಯಮಗಳ ಮುಂದೆ ಅಲವತ್ತುಕೊಂಡ ಸಂಜೀವ ಪೂಜಾರಿ ಅವರು, ನನ್ನ ಮೇಲೆ ವೃತಾ ಆರೋಪ ಹೊರಿಸಿ ಕಳೆದ ಜನವರಿ 13ರಂದು ಮಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಅಮಾನತು ಆದೇಶ ಹೊರಡಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ನಾನು ಕರ್ನಾಟಕ ಆಡಳಿತ ನ್ಯಾಯಾಧಿಕರಣದ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದೆ. ಪ್ರಕರಣದ ಕುರಿತು ತನಿಖೆ ನಡೆಸಿದ ನ್ಯಾಯಾಲಯ ತನ್ನದ್ದೇನೂ ತಪ್ಪಿಲ್ಲ ಎಂದು ತೀರ್ಪು ನೀಡಿದೆ. ಅಲ್ಲದೆ 6 ತಿಂಗಳೊಳಗೆ ಇವನ ಮೇಲೆ ಏನಾದರೂ ಆಪಾದನೆ ಇರುವುದಾದರೆ ತನಿಖಾಧಿಕಾರಿಯನ್ನು ನೇಮಿಸಿ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ವರದಿ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿತ್ತು. ಆದರೆ ನ್ಯಾಯಾಲಯದ ಈ ತೀರ್ಪು ಬಂದ ಒಂದೂವರೆ ತಿಂಗಳ ಬಳಿಕ ಅಧಿಕಾರಿಗಳು ಮತ್ತೆ ನನಗೆ ಅಮಾನತು ಆದೇಶ ಜಾರಿಗೊಳಿಸಿ ಅನ್ಯಾಯವೆಸಗಿದ್ದಾರೆ ಎಂದು ಸಂಜೀವ ಪೂಜಾರಿ ಕಾಣಿಯೂರು ತಿಳಿಸಿದ್ದಾರೆ.

ಅಮಾನತು ಆದೇಶದ ಕುರಿತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಪ್ರಶ್ನಿಸಿದಾಗ ಅವರು, ನ್ಯಾಯಾಲಯ ಆದೇಶ ಪ್ರತಿಯ ಕೆಳಗಡೆ `ಡಿಸ್‍ಮಿಸ್' ಎಂದಿದೆ. ಅದನ್ನು ನೋಡಿ ಸಸ್ಪೆಂಡ್ ಆದೇಶ ಜಾರಿ ಮಾಡಲಾಗಿದೆ ಎಂದು ಹೇಳಿದ್ದಾರೆ. ನ್ಯಾಯಾಲಯ ಆದೇಶವನ್ನು ಓದಿ ಅರ್ಥೈಸಿಕೊಳ್ಳಲು ಯೋಗ್ಯತೆ ಇಲ್ಲದ ಅಧಿಕಾರಿಯೊಬ್ಬ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾದರೆ ಅವರಿಂದ ಯಾವ ಮಟ್ಟದ ನ್ಯಾಯವನ್ನು ನಿರೀಕ್ಷೆ ಮಾಡಬಹುದು ಎಂದು ಸಂಜೀವ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಎಂ.ಬಿ, ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್ ಅವರನ್ನು ಭೇಟಿಯಾಗಿ ವಿಚಾರಿಸಿದಾಗ ಅವರು, `ಆದೇಶ ಪತ್ರದ ಅಡಿಯಲ್ಲಿ `ಡಿಸ್‍ಮಿಸ್' ಎಂದಿರುವುದರಿಂದ ಅಮಾನತಿಗೆ ಶಿಫಾರಸ್ಸು ಮಾಡಿದ್ದೇವೆ' ಎಂದು ಹೇಳಿದ್ದಾರೆ. ನ್ಯಾಯಾಲಯದ ಆದೇಶ ಪತ್ರವನ್ನು ಓದಿ ತಿಳಿದುಕೊಳ್ಳಲು ಯೋಗ್ಯತೆ ಇಲ್ಲದ ಇಂತಹ ಅಧಿಕಾರಿಗಳನ್ನು ಅಧಿಕಾರ ಚಲಾಯಿಸುವ ಜಾಗದಲ್ಲಿ ಕುಳ್ಳಿರಿಸಿದರೆ ತಿಳುವಳಿಕೆ ಇಲ್ಲದ ಮಂದಿಗೆ, ವಿದ್ಯಾಭ್ಯಾಸ ಇಲ್ಲದ ಜನರಿಗೆ ನ್ಯಾಯ ಸಿಗಲು ಸಾಧ್ಯವೇ ಎಂದು ಸಂಜೀವ ಪೂಜಾರಿ ಪ್ರಶ್ನಿಸಿದ್ದಾರೆ.

ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಈ ಪ್ರಕರಣಕ್ಕೆ ಸಂಬಂಧಿಸಿ ತಪ್ಪು ಎಸಗಿರುವ ಮತ್ತು ದುರುದ್ದೇಶಪೂರ್ವಕವಾಗಿ ನನ್ನ ಅಮಾನತುಗೊಳಿಸಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು. ತಪ್ಪು ಎಸಗಿರುವ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು, ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿವರು ತುರ್ತಾಗಿ ಕ್ರಮಕೈಗೊಳ್ಳಬೇಕು ಎಂದು ಸಂಜೀವ ಪೂಜಾರಿ ಅವರು ಆಗ್ರಹಿಸಿದ್ದಾರೆ.

ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅವರು ಕಳೆದ 7 ತಿಂಗಳ ಹಿಂದೆ ಭಜನಾ ವಿಚಾರಕ್ಕೆ ಸಂಬಂಧಿಸಿ ವಾಟ್ಸಾಪ್ ನಲ್ಲಿ ಬರೆದಿರುವ ಬರಹದ ಹಿನ್ನಲೆಯಲ್ಲಿ ಕಳೆದ ಜನವರಿ 13ರಂದು ಮಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಅಮಾನತು ಆದೇಶ ನೀಡಿದ್ದರು. ಇದರ ವಿರುದ್ಧ ಸಂಜೀವ ಪೂಜಾರಿ ಕರ್ನಾಟಕ ಆಡಳಿತ ನ್ಯಾಯಾಧೀಕರಣ ಮಂಡಳಿಗೆ ದೂರು ನೀಡಿದ್ದರು. ಅಲ್ಲಿ ಅವರಿಗೆ ನ್ಯಾಯವೂ ದೊರಕಿತ್ತು. ನ್ಯಾಯಾಧೀಕರಣ ಮಂಡಳಿ ನೀಡಿದ ತೀರ್ಪಿನಲ್ಲಿ 6 ತಿಂಗಳಲ್ಲಿ ಈತನ ಬಗ್ಗೆ ಯಾವುದೇ ಪ್ರಕರಣ ನಡೆದಿದ್ದಲ್ಲಿ ತನಿಖೆ ನಡೆಸಿ ಮತ್ತೆ ಕೋರ್ಟಿಗೆ ನೀಡುವ ಕ್ರಮ ಕೈಗೊಳ್ಳಬಹುದಾಗಿದೆ ಎಂಬ ಸೂಚನೆಯನ್ನೂ ನೀಡಲಾಗಿತ್ತು. ಇದೀಗ ಕಳೆದ ಜನವರಿ 13ರ ಆದೇಶವನ್ನು ಇಟ್ಟು ಮತ್ತೆ ಸಸ್ಪೆಂಡ್ ಆದೇಶ ಮಾಡಿದ್ದಾರೆ. ಕರ್ನಾಟಕ ಆಡಳಿತ ನ್ಯಾಯಾಧೀಕರಣ ಮಂಡಳಿ ಮಾಡಿರುವ ತೀರ್ಪಿನಲ್ಲಿ ಸ್ಪಷ್ಟವಾಗಿ ಅರ್ಜಿದಾರನು ಏನಾದರೂ ತಪ್ಪು ಮಾಡಿದ್ದರೆ, 180 ದಿನಗಳೊಳಗೆ ತನಿಖಾಧಿಕಾರಿ ನೇಮಕ ಮಾಡಿ ತನಿಖೆ ನಡೆಸಬೇಕು. ಮಾಡದೆ ಇದ್ದ ಪಕ್ಷದಲ್ಲಿ 180 ದಿನಗಳು ಕಳೆದ ಮೇಲೆ ಈ ಪ್ರಕರಣ ಸಂಪೂರ್ಣವಾಗಿ ಡಿಸ್ಮಿಸ್ ಆಗುತ್ತದೆ. ಆನಂತರ ಅರ್ಜಿದಾರನ ಮೇಲೆ ಯಾವುದೇ ಕ್ರಮ ಕೈಗೊಳ್ಳಲು ಅವಕಾಶ ಇಲ್ಲ ಎಂಬುವುದನ್ನು ಸ್ಪಷ್ಟವಾಗಿ ನೀಡಲಾಗಿತ್ತು. ಆದರೆ ಮಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಈ ಆದೇಶವನ್ನು ಓದದೆ ಕೇವಲ ಡಿಸ್ಮಿಸ್ ಎಂಬ ಪದವನ್ನಷ್ಟೇ ಓದಿ ಅರ್ಜಿದಾರನನ್ನು ಮತ್ತೆ ಸಸ್ಪೆಂಡ್ ಮಾಡಿದ್ದಾರೆ ಎಂಬುದು ಸಂಜೀವ ಪೂಜಾರಿ ಅವರ ಆರೋಪವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News