ಸರಕಾರಿ ಗೋಶಾಲೆ ಆರಂಭಿಸಲು ದ.ಕ. ಜಿಲ್ಲಾಧಿಕಾರಿ ಸೂಚನೆ

Update: 2023-10-12 14:17 GMT

File Photo

ಮಂಗಳೂರು, ಅ.12: ಕಡಬ ತಾಲೂಕಿನ ರಾಮಕುಂಜ ಗ್ರಾಮದಲ್ಲಿ ಸರಕಾರಿ ಗೋಶಾಲೆಯನ್ನು ಶೀಘ್ರ ಪ್ರಾರಂಭಿಸಬೇಕು ಎಂದು ದ.ಕ. ಪ್ರಭಾರ ಜಿಲ್ಲಾಧಿಕಾರಿ ಡಾ.ಆನಂದ್ ಕೆ. ಸೂಚಿಸಿದರು.

ದ.ಕ. ಜಿಲ್ಲಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಪ್ರಾಣಿ ದಯಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಕುಮಾರಾಧಾರ ಸರಕಾರಿ ಗೋಶಾಲೆಯು ಈ ವಷ೯ ಪ್ರಾರಂಭವಾಗಿದ್ದು, ಸದ್ಯ 98 ಜಾನುವಾರುಗಳನ್ನು ಸಾಕಣೆ ಮಾಡಲಾಗುತ್ತಿದೆ. ಮೆನ್ನಬೆಟ್ಟು ಗ್ರಾಮದ 19.80 ಎಕರೆ ಗೋಮಾಳ ಪ್ರದೇಶವನ್ನು ಗೋಶಾಲೆಗೆ ಕಾಯ್ದೆರಿಸಲು ಅಗತ್ಯ ಕ್ರಮ ವಹಿಸಬೇಕು ಎಂದ ಡಿಸಿ ಪ್ರಾಣಿಗಳ ರಕ್ಷಣೆ ಮತ್ತು ಪುನರ್ವಸತಿ ಕಲ್ಪಿಸುವುದು ಆಸ್ಪತ್ರೆಯ ಮುಖ್ಯ ಉದ್ದೇಶವಾಗಿದೆ. ಪ್ರಾಣಿ ಕಲ್ಯಾಣ ಕಾರ್ಯಕರ್ತರನ್ನು ಗುರುತಿಸಿ ತಾಲೂಕು ಪ್ರಾಣಿ ಮಿತ್ರ ತಂಡ ರಚನೆ ಮಾಡಲು ತಾಲೂಕು ಮುಖ್ಯ ಪಶು ವೈದ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಪ್ರಾಣಿ ಕಲ್ಯಾಣ ಕಾಯ್ದೆ ಮತ್ತು ನಿಯಮಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಬೇಕು. ಕಾನೂನು ಬಾಹಿರ ಕಸಾಯಿ ಖಾನೆಗಳನ್ನು ನಡೆಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಾಗ ಅದರ ಬಗ್ಗೆ ಕ್ರಮಕೈಗೊಳ್ಳಬೇಕು. ಪೆಟ್ ಶಾಪ್ ನಡೆಸುತ್ತಿರುವವರು ಕಡ್ಡಾಯವಾಗಿ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಬೇಕು. ಆಂಟಿ ಕ್ರುಯಾಲಿಟಿ ಇನ್‌ಸ್ಪೆಕ್ಟರ್ ನೇಮಕ ಮಾಡಲು ಮಾರ್ಗಸೂಚಿ ನೀಡಿದರು.

ರೈತರು ಬೆಳೆಗಳನ್ನು ರಕ್ಷಿಸಿಕೊಳ್ಳಲು ಹೈ ಟೆನ್ಷನ್ ವಿದ್ಯುತ್ ಬೇಲಿಗಳ ಬಗ್ಗೆ ತಪಾಸಣೆ ನಡೆಸಿ ಅಗತ್ಯ ಕ್ರಮ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಸಂತೋಷ್ ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಥೋನಿ ಎಸ್. ಮರಿಯಪ್ಪ, ಜಿಲ್ಲಾ ಕಾನೂನು ಪ್ರಾಣಿ ಕಲ್ಯಾಣ ಸಲಹೆಗಾರ ಸುಮಾ ಆರ್. ನಾಯಕ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News