ಮಾದಕ ದ್ರವ್ಯ ಸೇವನೆ, ಮಾರಾಟ ಎಲ್ಲವೂ ಶಿಕ್ಷಾರ್ಹ ಅಪರಾಧಳ: ಡಿವೈಎಸ್‍ಪಿ ಡಾ. ಗಾನ ಪಿ ಕುಮಾರ್

Update: 2023-10-30 16:00 GMT

ಪುತ್ತೂರು: ಮಾದಕ ದ್ರವ್ಯಗಳ ಸೇವನೆ ಮತ್ತು ಮಾರಾಟ ಎಲ್ಲವೂ ಶಿಕ್ಷಾರ್ಹ ಅಪರಾಧಗಳಾಗಿವೆ. ಮಾದಕ ವ್ಯಸನಿಗೆ ಸಮಾಜದಲ್ಲಿ ಬೆಲೆಯಿರುವುದಿಲ್ಲ. ವ್ಯಸನಿಗಳ ಶರೀರ ಮತ್ತು ಮನಸ್ಸುಗಳ ಮೇಲೆ ಸ್ವಾಧೀನವಿರುವುದಿಲ್ಲ. ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಸಮಾಜಕ್ಕೆ ಅರಿವು ಮೂಡಿಸಬೇಕು. ಎಲ್ಲರೂ ವ್ಯಸನಮುಕ್ತ ಭಾರತಕ್ಕಾಗಿ ಪಣ ತೊಡಬೇಕು. ಮಾದಕ ವಸ್ತುಗಳ ಸಾಗಾಟ, ಮಾರಾಟ ಗಮನಕ್ಕೆ ಬಂದಾಗ ಧೈರ್ಯವಾಗಿ ಕಾಲೇಜು ಮುಖ್ಯಸ್ಥರಿಗೆ ಅಥವಾ ಪೊಲೀಸರಿಗೆ ಮಾಹಿತಿ ತಿಳಿಸುವ ಕೆಲಸ ಮಾಡಬೇಕು ಎಂದು ಪುತ್ತೂರು ಉಪವಿಭಾಗದ ಡಿವೈಎಸ್‍ಪಿ ಡಾ. ಗಾನ ಪಿ ಕುಮಾರ್ ಹೇಳಿದರು.

ಅವರು ಪುತ್ತೂರಿನ ಕ್ಯಾಥೊಲಿಕ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಸೋಮವಾರ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಕಾಲ್ನಡಿಗೆ ಜಾಥಾದ ಸಭಾ ಕಾರ್ಯಕ್ರಮ ದಲ್ಲಿ ಮಾತನಾಡಿದರು.

ಮಾದಕ ದ್ರವ್ಯದ ಕುರಿತು ಯುವಜನತೆಗೆ ಅದರಲ್ಲೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಅರಿವು ಅಗತ್ಯವಾಗಿದೆ. ಮಾದಕ ವ್ಯಸನವು ನಮ್ಮ ಸಮಾಜವನ್ನು ಕಾಡುವ ಅತಿ ದೊಡ್ಡ ಸಮಸ್ಯೆಯಾಗಿದ್ದು, ಕೊಕೇನ್, ಗಾಂಜಾ, ಹೆರಾಯಿನ್ ಮಾತ್ರ ಮಾದಕ ದ್ರವ್ಯ ವಲ್ಲ. ಅದರೊಂದಿಗೆ ನಾವು ಸೇವಿಸುವ ಔಷಧಿ ಮಾತ್ರೆಗಳಲ್ಲಿಯೂ ಪರೋಕ್ಷವಾಗಿ ಈ ಅಂಶ ಸೇರಿಕೊಂಡಿರುತ್ತದೆ. ವೈದ್ಯರು ಸೂಚಿಸುವ ಪ್ರಮಾಣಕ್ಕಿಂತ ಹೆಚ್ಚಿನ ಸೇವನೆಯೂ ದೇಹದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರ ಬಹುದು. ಈ ನಿಟ್ಟಿನಲ್ಲಿ ಜಾಗೃತಿ ಅಗತ್ಯವಿದೆ ಎಂದರು.

ಜಾಗೃತಿ ಕಾಲ್ನಡಿಗೆ ಜಾಥಾಕ್ಕೆ ದರ್ಬೆ ಸಂತ ಫಿಲೋಮಿನಾ ಕಾಲೇಜು ಆವರಣದಲ್ಲಿ ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ಫಾ. ಲಾರೆನ್ಸ್ ಮಸ್ಕರೇನ್ಹಸ್ ಅವರು ಚಾಲನೆ ನೀಡಿದರು. ಜಾಥಾವು ನಗರದ ಮುಖ್ಯ ರಸ್ತೆಯಲ್ಲಿ ಸಾಗಿ ಮಾಯ್ ದೆ ದೇವುಸ್ ಚರ್ಚ್ ವಠಾರದಲ್ಲಿ ಕೊನೆಗೊಂಡಿತು.

ಪುತ್ತೂರಿನ ಕ್ಯಾಥೊಲಿಕ್ ಶಿಕ್ಷಣ ಸಂಸ್ಥೆಗಳಾದ ಸಂತ ಫಿಲೋಮಿನಾ ಕಾಲೇಜು, ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜು, ಸಂತ ಫಿಲೋಮಿನಾ ಪ್ರೌಢಶಾಲೆ, ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲೆ, ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ, ಬೆಥನಿ ಪ್ರೌಢಶಾಲೆ, ಬೆಥನಿ ಆಂಗ್ಲ ಮಾಧ್ಯಮ ಶಾಲೆ, ಸಂತ ವಿಕ್ಟರನ ಬಾಲಿಕಾ ಪ್ರೌಢಶಾಲೆ, ಸಂತ ವಿಕ್ಟರನ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಮತ್ತು ಮಾಯ್ ದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಗಳ ಸುಮಾರು 8000ಕ್ಕೂ ಅಧಿಕ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿವರ್ಗ ನಡಿಗೆಯಲ್ಲಿ ಪಾಲ್ಗೊಂಡಿದ್ದರು.

ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ಫಾ. ಲಾರೆನ್ಸ್ ಮಸ್ಕರೇನ್ಹಸ್ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ರಾಮಾಂಜಿ ರಚಿಸಿ ನಿರ್ದೇಶಿಸಿದ 'ಮಾದಕ-ಮಾರಕ' ಎಂಬ ಬೀದಿ ನಾಟಕವನ್ನು ಸಂತ ಫಿಲೋಮಿನಾ ಕಾಲೇಜಿನ ಪ್ರದರ್ಶನಕಲಾ ಘಟಕದ ವಿದ್ಯಾರ್ಥಿಗಳು ಪ್ರದರ್ಶಿಸಿದರು.

ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿ ಕೋಸ್ಟ, ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಫಾ. ಸ್ಟ್ಯಾನಿ ಪಿಂಟೋ, ಪ್ರಾಂಶುಪಾಲ ಡಾ. ಆಂಟೊನಿ ಪ್ರಕಾಶ್ ಮೊಂತೆರೋ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಫಾ. ಅಶೋಕ್ ರಯಾನ್ ಕ್ರಾಸ್ತಾ, ಪ್ರೌಢಶಾಲೆಯ ಮುಖ್ಯಗುರು ಡಾ. ಮಾಕ್ಸಿಮ್ ಡಿಸೋಜ, ಸಂತ ವಿಕ್ಟರನ ಬಾಲಿಕಾ ಪ್ರೌಢಶಾಲೆಯ ಮುಖ್ಯ ಗುರು ರೋಸಲಿನ್ ಲೋಬೋ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರು ಹ್ಯಾರಿ ಡಿಸೋಜ, ಮಾಯ್ ದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಜಾನೆಟ್ ಡಿಸೋಜ, ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಗುರು ಸಿಸ್ಟರ್ ಲೋರಾ ಪಾಯಸ್, ಲಿಟ್ಲ್‍ಫ್ಲವರ್ ಹಿರಿಪ ಪ್ರಾಥಮಿಕ ಶಾಲೆಯ ಮುಖ್ಯ ಗುರು ಸಿಸ್ಟರ್ ವಿನೀಶಾ, ಬೆಥನಿ ಆಂಗ್ಲಮಾಧ್ಯಮ ಶಾಲೆಯ ಮುಖ್ಯಗುರು ಸಿಸ್ಟರ್ ಸೆಲಿನ್ ಪೆತ್ರಾ, ಬೆಥನಿ ಪ್ರೌಢಶಾಲೆಯ ಮುಖ್ಯಗುರು ಸಿಸ್ಟರ್ ಶಾಂತಿ ಆಗ್ನೆಸ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News