ಮಂಗಳೂರು| ಮೈಕಲ್ ಡಿಸೋಜಾ ಮತ್ತು ಕುಟುಂಬದ ‘ಎಜುಕೇರ್ ಎಂಡೋಮೆಂಟ್ ಫಂಡ್’ ಉದ್ಘಾಟನೆ
ಮಂಗಳೂರು, ಸೆ.16: ಅನಿವಾಸಿ ಭಾರತೀಯ ಹಾಗೂ ‘ವಿಶನ್ ಕೊಂಕಣಿ’ ಪ್ರವರ್ತಕ ಮೈಕಲ್ ಡಿಸೋಜಾ ಮತ್ತು ಕುಟುಂಬದವರಿಂದ ಸಿಒಡಿಪಿಯಲ್ಲಿ ಸ್ಥಾಪಿಸಲ್ಪಟ್ಟ ‘ಎಜುಕೇರ್ ಎಂಡೋಮೆಂಟ್ ಫಂಡ್’ ಅನ್ನು ಮಂಗಳೂರು ಬಿಷಪ್ ಅತೀ ವಂ. ಡಾ. ಪೀಟರ್ ಪಾವ್ಲ್ ಸಲ್ದಾನಾ ಉದ್ಘಾಟಿಸಿದರು.
ನಂತೂರಿನ ಸಿಒಡಿಪಿ ಸಭಾಂಗಣದಲ್ಲಿ ಸೋಮವಾರ ದೀಪ ಬೆಳಗಿಸಿ ಸಾಂಕೇತಿಕವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಬಡ್ಡಿ ರಹಿತ ಸಾಲ ರೂಪದ ನೆರವನ್ನು ಹಸ್ತಾಂತರಿಸಿ ಮಾತನಾಡಿದ ಬಿಷಪ್ ವಂ. ಪೀಟರ್ ಪೌವ್ಲ್ ಡಿಸೋಜಾ, 2013ರಿಂದ ಸಮುದಾಯದ ದುರ್ಬಲ ವರ್ಗದ ಸಬಲೀಕರಣಕ್ಕಾಗಿ ಮೈಕಲ್ ಅವರು ನೀಡುತ್ತಿರುವ ಆರ್ಥಿಕ ನೆರವು ಸಮಾಜದಲ್ಲಿ ಭರವಸೆಯನ್ನು ಹುಟ್ಟು ಹಾಕಿದೆ ಎಂದರು.
ನೆರವು ಪಡೆದ ವಿದ್ಯಾರ್ಥಿಗಳು ತಮಗೆ ಉದ್ಯೋಗ ದೊರಕಿದ ಬಳಿಕ ಅದನ್ನು ಮರುಪಾವತಿಸುವ ಮೂಲಕ ಸಮಾಜದ ಇನ್ನಷ್ಟು ವಿದ್ಯಾರ್ಥಿಗಳಿಗೆ ನೆರವು ನೀಡುವ ಈ ಯೋಜನೆ ಪ್ರೇರಣದಾಯಿ. ದೂರದೃಷ್ಟಿ ಇಲ್ಲದ ದೇಶ ನಾಶವಾಗುತ್ತದೆ ಎಂಬ ಮಾತಿನಂತೆ, ಸಮಾಜದಲ್ಲಿಯೂ ಇಂತಹ ದೂರದೃಷ್ಟಿಯ ಯೋಜನೆಗಳು ದುರ್ಬಲ ವರ್ಗವನ್ನು ಮೇಲೆತ್ತುವಲ್ಲಿ ಸಹಕಾರಿ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮೈಕಲ್ ಡಿಸೋಜಾರವರ ಪುತ್ರಿ ನಿಶಾ ಡಿಸೋಜಾ ಮಾತನಾಡಿ, ಸಮುದಾಯದ ದುರ್ಬಲ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡುವ ನಿಟ್ಟಿನಲ್ಲಿ 10 ವರ್ಷಗಳಿಗಾಗಿ ಆರಂಭಿಸಿದ ಯೋಜನೆಯನ್ನು ಮುಂದುವರಿಸುತ್ತಿರುವ ಬಗ್ಗೆ ಖುಷಿ ಇದೆ ಎಂದರು.
ಕಾರ್ಯಕ್ರಮದಲ್ಲಿ ಮೈಕಲ್ ಡಿಸೋಜಾರವರ ಪತ್ನಿ ಫ್ಲಾವಿಯಾ ಡಿಸೋಜಾ, ವಂ. ವಲೇರಿಯನ್ ಡಿಸೋಜಾ, ಉಪಸ್ಥಿತರಿದ್ದರು.
ಸಿಒಡಿಪಿಯ ನಿರ್ದೇಶಕರಾದ ವಂ. ವಿನ್ಸೆಂಟ್ ಡಿಸೋಜಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಲಹೆಗಾರ ರಿಚರ್ಡ್ ಅಲ್ವಾರಿಸ್ ಕಾರ್ಯಕ್ರಮ ನಿರೂಪಿಸಿದರು. ಸಂಯೋಜಕಿ ರೀನಾ ಡಿಕೋಸ್ತಾ ವಂದಿಸಿದರು.
75 ಲಕ್ಷ ರೂ.ಗಳ ದೇಣಿಗೆ ಚೆಕ್ ಹಸ್ತಾಂತರ
ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನಲ್ಲಿ ಎಂಬಿಬಿಎಸ್, ಇಂಜಿನಿಯರಿಂಗ್ ಸೇರಿದಂತೆ ಪಿಯುಸಿಯಿಂದ ಮೇಲ್ಪಟ್ಟು ಉನ್ನತ ಶಿಕ್ಷಣಕ್ಕಾಗಿ 84 ಮಂದಿಗೆ ಮೈಕಲ್ ಡಿಸೋಜಾ ಮತ್ತು ಕುಟುಂಬದಿಂದ ಆರ್ಥಿಕ ನೆರವು ನೀಡುವ ಸಲುವಾಗಿ 75 ಲಕ್ಷ ರೂ.ಗಳ ದೇಣಿಗೆಯ ಚೆಕನ್ನು ಕಾರ್ಯಕ್ರಮದಲ್ಲಿ ಸಿಒಡಿಪಿಗೆ ಹಸ್ತಾಂತರಿಸಲಾಯಿತು.
ಮೈಕಲ್ ಡಿಸೋಜಾರವರು ಕಳೆದ 12 ವರ್ಷಗಳಿಂದ ಈ ಆರ್ಥಿಕ ನೆರವನ್ನು ನೀಡುತ್ತಿದ್ದು, ಈವರೆಗೆ 3300 ಮಂದಿ ಇದರ ಪ್ರಯೋಜನ ಪಡೆದಿದ್ದಾರೆ. ಪ್ರಸಕ್ತ ಸಾಲಿನಿಂದ ಈ ಯೋಜನೆಯನ್ನು ಸಿಒಡಿಪಿ ಮೂಲಕ ನಿರ್ವಹಣೆ ಮಾಡಲಾಗುತ್ತದೆ.
ನೆರವು ಪಡೆಯುವ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಒಂದೂವರೆ ವರ್ಷದಲ್ಲಿ ನೆರವನ್ನು ಹಿಂತಿರುಗಿಸುವ ವಾಗ್ದಾನದೊಂದಿಗೆ ನೆರವನ್ನು ನೀಡಲಾಗುತ್ತದೆ. ಈ ಮೂಲಕ ಸಮಾಜದ ಇನ್ನಷ್ಟು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣ ನೆರವಾಗುವ ವಿನೂತನ ಯೋಜನೆ ಇದಾಗಿದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಸಿಒಡಿಪಿಯ ನಿರ್ದೇಶಕ ವಂ. ವಿನ್ಸೆಂಟ್ ಡಿಸೋಜಾ ವಿವರಿಸಿದರು.