ಮಂಗಳೂರು: ಲಿವರ್ ದಾನ ಮಾಡಿದ ಉಪನ್ಯಾಸಕಿ ಮೃತ್ಯು

Update: 2024-09-16 16:07 GMT

ಮಂಗಳೂರು: ಸಂಬಂಧಿ ಮಹಿಳೆಯೊಬ್ಬರಿಗೆ ಲಿವರ್ ದಾನ ಮಾಡಿ ಅವರ ಜೀವ ಉಳಿಸಿದ್ದ ನಗರದ ಉಪನ್ಯಾಸಕಿ ಅರ್ಚನಾ ಕಾಮತ್ (33) ಎಂಬವರು ರವಿವಾರ ಮೃತಪಟ್ಟಿರುವುದಾಗಿ ವರದಿಯಾಗಿದೆ.

ತನ್ನ ಪತಿಯ ಸಂಬಂಧಿ ಮಹಿಳೆಯು ಅನಾರೋಗ್ಯದಲ್ಲಿದ್ದು, ಅವರಿಗೆ ಲಿವರ್‌ನ ಅಗತ್ಯವಿತ್ತು ಎನ್ನಲಾಗಿದೆ. ಹಲವರನ್ನು ತಪಾಸಣೆಗೆ ಒಳಪಡಿಸಿದ್ದರೂ ಕೂಡ ರಕ್ತದ ಗುಂಪು ಹೊಂದಾಣಿಕೆಯಾಗಿರಲಿಲ್ಲ. ಆದರೆ ಉಪನ್ಯಾಸಕಿ ಅರ್ಚನಾರ ರಕ್ತದ ಗುಂಪು ಹೊಂದಾಣಿಕೆಯಾಗಿತ್ತು. ಹಾಗಾಗಿ ಅರ್ಚನಾ ಲಿವರ್ ಭಾಗದ ದಾನಕ್ಕೆ ಒಪ್ಪಿದ್ದರು. ಅದರಂತೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಅರ್ಚನಾರ ಲಿವರ್‌ನ ಭಾಗಶಃ ಭಾಗ ತೆಗೆದು ಸಂಬಂಧಿ ಮಹಿಳೆಗೆ ಜೋಡಿಸುವ ಶಸ್ತಚಿಕಿತ್ಸೆ ನಡೆದಿತ್ತು. ಅಲ್ಲದೆ ಆರೋಗ್ಯದಿಂದಿದ್ದ ಅರ್ಚನಾ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು.

ನಾಲ್ಕು ದಿನಗಳ ಹಿಂದೆ ಅರ್ಚನಾ ಏಕಾಏಕಿ ಅಸ್ವಸ್ಥಗೊಂಡಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ ರವಿವಾರ ಅರ್ಚನಾ ಮೃತಪಟ್ಟಿದ್ದಾರೆ. ಲಿವರ್ ಜೋಡಿಸಲ್ಪಟ್ಟ ಮಹಿಳೆ ಆರೋಗ್ಯವಾಗಿದ್ದಾರೆಂದು ತಿಳಿದುಬಂದಿದೆ.

ನಗರದ ಕೆನರಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ಅರ್ಚನಾ ಬಳಿಕ ಮಣೇಲ್ ಶ್ರೀನಿವಾಸ ನಾಯಕ್ ಎಂಬಿಎ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದರು. ಅರ್ಚನಾ ಪತಿ ಸಿಎ ಚೇತನ್ ಕಾಮತ್ ಮತ್ತು ನಾಲ್ಕು ವರ್ಷ ಪ್ರಾಯದ ಪುತ್ರನನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News