ಬಿಜೆಪಿಯನ್ನು ಸೋಲಿಸಿ ಜಾತ್ಯಾತೀತ ಅಭ್ಯರ್ಥಿಯನ್ನು ಗೆಲ್ಲಿಸಲು ಡಿವೈಎಫ್ಐ ಕರೆ
ಮಂಗಳೂರು: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಆಡಳಿತವು ಕಳೆದ ಎರಡು ಅವಧಿಯಿಂದ ಭಾರತ ದೇಶವನ್ನು ಎಲ್ಲಾ ಕ್ಷೇತ್ರಗಳಲ್ಲಿಯೂ ಹಿಂದಕ್ಕೆ ತಳ್ಳಿದೆ. ಕಾರ್ಪೊರೇಟ್ ಶ್ರೀಮಂತರ ಪರವಾದ ಆರ್ಥಿಕತೆ ಮತ್ತು ಮತೀಯ ದ್ವೇಷದ ರಾಜಕಾರಣವು ದೇಶದ ಭವಿಷ್ಯವನ್ನೇ ಹಾಳುಗೆಡವಿದೆ. ರೈತ, ಕಾರ್ಮಿಕ ವರ್ಗದ ಬದುಕು ಶೋಚನೀಯ ಹಂತಕ್ಕೆ ತಲುಪಿದ್ದು ನಿರುದ್ಯೋಗದ ಪ್ರಮಾಣ ಕಂಡುಕೇಳರಿಯದಷ್ಟು ಏರಿಕೆಯಾಗಿದೆ. ಇನ್ನು ಚುನಾವಣೆಯ ವೇಳೆ ನೀಡಿದ ಭರವಸೆಗಳೆಲ್ಲವನ್ನು ಈವರೆಗೂ ಈಡೇರಿಸದೆ ಕೇವಲ ಮತೀಯ ಉನ್ಮಾದ ಸೃಷ್ಟಿಸಿ ಪ್ರಶ್ನಿಸುವ ವಿರುದ್ಧದ ಧ್ವನಿಗಳನ್ನು ಹತ್ತಿಕ್ಕುವ, ದೇಶದ ಸಂವಿಧಾನದ ಆಶಯಗಳಿಗೆ ಘಾಸಿಗೊಳಿಸುವ ಫ್ಯಾಸಿಸ್ಟ್ ಮಾದರಿಯ ಸರ್ವಾಧಿಕಾರಿ ಧೋರಣೆಗಳನ್ನು ಅನುಸರಿಸಿದ ಜನವಿರೋಧಿ ಬಿಜೆಪಿ ಪಕ್ಷವನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲಿಸಬೇಕೆಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಕರೆ ನೀಡಿದೆ.
ನರೇಂದ್ರ ಮೋದಿ ಸರಕಾರ ವರುಷಕ್ಕೆರಡು ಕೋಟಿ ಉದ್ಯೋಗ ಸೃಷ್ಟಿಸದೆ ಯುವಜನ ವಿರೋಧಿಯಾಗಿ ವರ್ತಿಸಿದೆ. 2012 ರ ಅವಧಿಯಲ್ಲಿ ಪ್ರತೀ ವರುಷ ಕನಿಷ್ಟ 75 ಲಕ್ಷ ಸೃಷ್ಟಿಯಾಗುತ್ತಿದ್ದ ಉದ್ಯೋಗ ಮೋದಿ ಆಡಳಿತದ ಅವಧಿಯಲ್ಲಿ ಸಂಪೂರ್ಣವಾಗಿ ಕುಸಿದಿದೆ. ಕೇಂದ್ರ ಸರಕಾರದ ವಿವಿಧ ಇಲಾಖೆಗಳಡಿ ಖಾಲಿ ಬಿದ್ದಿರುವ 9.64 ಲಕ್ಷ ಉದ್ಯೋಗವನ್ನು ಈವರೆಗೂ ಭರ್ತಿಗೊಳಿಸಲು ಕ್ರಮಗಳಿಲ್ಲ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ವರದಿ ಪ್ರಕಾರ ನಿರುದ್ಯೋಗದ ಪ್ರಮಾಣ 2014 ರಲ್ಲಿ ಶೇ 5.44℅ ಇದ್ದದ್ದು 2023 ಅಕ್ಟೋಬರ್ ತಿಂಗಳಿಗೆ ಶೇ 10.05% ತಲುಪಿದೆ ಅಂದರೆ ಹತ್ತಿರದ ಮಾಯನ್ಮಾರ್, ಬಾಂಗ್ಲಾದಂತಹ ದೇಶಗಿಂತಲೂ ಕೆಳಮಟ್ಟದ ಸ್ಥಾನದಲ್ಲಿದೆ ಎಂದರ್ಥ. ಇಂದು ದೇಶದ ಯುವಜನರು ನಿರುದ್ಯೋದ ಸಮಸ್ಯೆಯ ಕಾರಣಕ್ಕೆ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ ಈ ಬಗ್ಗೆ ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ (NCRB) ವರದಿ ಪ್ರಕಾರ ಪ್ರತೀ ಗಂಟೆಗೆ ಇಬ್ಬರು ನಿರುದ್ಯೋಗಿ ಯುವಕರು ಆತ್ಮಹತ್ಯೆಗೆ ಶರಣಾಗುತ್ತಿರುವುದೆಂದರೆ ನಿರುದ್ಯೋಗದ ಕರಾಳತೆ ಎಷ್ಟಿರಬೇಕೆಂದು ಅರ್ಥ ಮಾಡಿಕೊಳ್ಳಬೇಕಾಗಿದೆ. ಇನ್ನೊಂದೆಡೆ ಸಾರ್ವಜನಿಕ ರಂಗದ ಉದ್ದಿಮೆಗಳನ್ನು ದುರ್ಬಲಗೊಳಿಸಲಾಗುತ್ತಿದೆ , ಖಾಸಗೀ ಒಡೆತನಕ್ಕೆ ವಹಿಸಿಕೊಡಲಾಗುತ್ತಿದೆ.
ಯುವಜನರ ಆಸಕ್ತಿಯ ಕ್ರೀಡಾ ಕ್ಷೇತ್ರ ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ. ಭಾರತದಲ್ಲಿ ಕ್ರೀಡಾಪಟುಗಳಿಗೆ ಬಲವಾದ ಅಡಿಪಾಯದ ಕೊರತೆ, ಮೂಲಭೂತ ಸೌಕರ್ಯಗಳ ಕೊರತೆ ಒಂದೆಡೆಯಾದರೆ, ಕ್ರೀಡಾ ಪ್ರಾಧಿಕಾರಗಳೆಲ್ಲವೂ ಸಂಪೂರ್ಣ ಆಡಳಿತ ಪಕ್ಷದ ರಾಜಕಾರಣಿಗಳ ಹಿಡಿತದಲ್ಲಿದೆ. ಭಾರತೀಯ ಯುವ ಮಹಿಳಾ ಕುಸ್ತಿಪಟುಗಳಿಗೆ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬಿಜೆಪಿ ಸಂಸದನಿಂದಲೇ ಲೈಂಗಿಕ ದೌರ್ಜನ್ಯಗಳಿಗೆ ಮೋದಿ ಭಾರತದಲ್ಲಿ ಕ್ರಮಗಳೇ ಇಲ್ಲ. ಇನ್ನು ಕ್ರಿಕೇಟ್ ಕೇವಲ ಅಧಿಕಾರಸ್ಥರ, ಪ್ರಭಾವಿಶಾಲಿಗಳ ಆಟವಾಗಿ ಸಂಪೂರ್ಣ ವ್ಯಾಪರೀಕರಣಗೊಂಡಿದೆ. ಬಿಸಿಸಿಐ ಮುಖ್ಯಸ್ಥ ಅಮಿತ್ ಶಾ ಮಗ ಜೈಶಾ ಲೋಕಸಭಾ ಚುನಾವಣೆ ವೇಳೆಯೇ IPL ಕ್ರಿಕೇಟ್ ಪಂದ್ಯಾಟದ ಆಯೋಜನೆ ಕೇವಲ ವ್ಯಾಪಾರ ಮಾತ್ರವಲ್ಲದೆ ದೇಶದ ಯುವಜನರ ಗಮನವನ್ನು ಧಿಕ್ಕು ತಪ್ಪಿಸುವ ಹುನ್ನಾರದ ಭಾಗವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪರಿಸ್ಥಿಯೂ ಇವೆಲ್ಲದರಿಂದ ಹೊರತಾಗಿಲ್ಲ . ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗವಕಾಶದ ಕೊರತೆ, ಆರ್ಥಿಕ ಹಿಂಜರಿತಗಳಿಂದ ಜಿಲ್ಲೆಯಲ್ಲಿಯೂ ನಿರುದ್ಯೋಗದ ಸಮಸ್ಯೆ ವ್ಯಾಪಕವಾಗಿದೆ. ಕಳೆದ 33 ವರುಷಗಳಿಂದ ಬಿಜೆಪಿ ಸತತ ಗೆದ್ದು ಬರುತ್ತಿದ್ದೆಯಾದರೂ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವ ಉದ್ಯಮಗಳನ್ನು, ಕೈಗಾರಿಕೆಗಳನ್ನು ಸ್ಥಾಪಿಸುವ ಯಾವೊಂದು ಪ್ರಯತ್ನಗಳೂ ಆಗಿಲ್ಲ. ಉದ್ಯೋಗವನ್ನೇ ಸೃಷ್ಟಿಸದೆ ಪರಿಸರಕ್ಕೆ ಮಾರಕವಾದ ಎಮ್.ಆರ್.ಪಿ.ಎಲ್ ನಂತಹ ಕಂಪೆನಿಗಳಲ್ಲಿ ನಡೆದ ಎಲ್ಲಾ ಉದ್ಯೋಗ ನೇಮಕಾತಿಗಳಲ್ಲಿ ಜಿಲ್ಲೆಯ ಯುವಜನರಿಗೆ ಕನಿಷ್ಟ ಸಣ್ಣ ಪಾಲೂ ಸಿಗಲಿಲ್ಲ. ಮೀನುಗಾರಿಕೆ, ಪ್ರವಾಸೋದ್ಯಮ ದಂತಹ ಸಾಂಪ್ರದಾಯಿಕ ಕ್ಷೇತ್ರಗಳಲ್ಲಿಯೂ ಉದ್ಯೋಗ ಸೃಷ್ಟಿಸುವ ಹಲವು ಅವಕಾಶಗಳಿದ್ದರೂ ಬಿಜೆಪಿ ಸಂಸದರ ದೂರದೃಷ್ಟಿಯ ಕೊರತೆ ಜಿಲ್ಲೆಗೆ ಉದ್ಯೋಗ ಸೃಷ್ಟಿಸುವಲ್ಲಿ ಹಿನ್ನಡೆಯಾಗಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರ ಸಂಪೂರ್ಣ ವ್ಯಾಪಾರೀಕರಣಗೊಂಡಿದೆ. ಕೋವಿಡ್ ಕಾಲದಲ್ಲಿ ಚಿಕಿತ್ಸೆ ಹೆಸರಲ್ಲಿ ನಡೆಸಿದ ಲೂಟಿಗಳೆ ಇದಕ್ಕೆಲ್ಲಾ ಜೀವಂತ ಉದಾಹರಣೆಗಳು.
ಬಿಜೆಪಿ ಇಂತಹ ಎಲ್ಲಾ ವೈಫಲ್ಯಗಳನ್ನು ಸರಿಪಡಿಸದೆ ಕೇವಲ ತಮ್ಮ ಮತೀಯ ರಾಜಕಾರಣಕ್ಕೆ ಜಿಲ್ಲೆಯ ಯುವಜನರನ್ನು ಕಾಲಾಳುಗಳಾಗಿ ಬಳಸಿಕೊಳ್ಳುತ್ತಿದೆ ಮತ್ತದನ್ನು ಮುಂದುವರಿಸಲಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯುವಜನ ವಿರೋಧಿ ಬಿಜೆಪಿಯನ್ನು ಸೋಲಿಸುವುದು ದೇಶದ ಸಂವಿಧಾನದ ಉಳಿವು, ಜಿಲ್ಲೆಯ ಅಭಿವೃದ್ಧಿಯ ಮಟ್ಟಿಗೆ ಅನಿವಾರ್ಯವಾಗಿದೆ. ಉದ್ಯೋಗದ ಹಕ್ಕನ್ನು ಸಂವಿಧಾನದ ಹಕ್ಕಾಗಿಸುವ, ನಿರುದ್ಯೋಗ ಭತ್ಯೆ ಸಹಿತ ನವ ಯುವಜನ ನೀತಿಗಳನ್ನು ತಯಾರುಗೊಳಿಸುವ ಒತ್ತಡವನ್ನು ಮುಂದಿನ ಸರಕಾರದ ಆದ್ಯತೆಯಾಗುವಂತೆ ನೋಡಿಕೊಳ್ಳುವುದು ಯುವಜನರ ರಾಜಕೀಯ ಕರ್ತವ್ಯವಾಗಿದೆ.
ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಮತದಾರರು, ಪ್ರಧಾನವಾಗಿ ಯುವಜನರು ಬಿಜೆಪಿಯ ಅಭ್ಯರ್ಥಿ ಬ್ರಿಜೇಶ್ ಚೌಟರನ್ನು ಸೋಲಿಸಿ ಜಾತ್ಯಾತೀತ ಪಕ್ಷ ಇಂಡಿಯಾ ಕೂಟದ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರನ್ನು ಬೆಂಬಲಿಸಬೇಕೆಂದು ಜಿಲ್ಲೆಯ ಯುವಜನರಲ್ಲಿ ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ವಿನಂತಿಸುತ್ತದೆ ಎಂದು ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.