ಸ್ವಾತಂತ್ರ್ಯಕ್ಕಾಗಿನ ಹೋರಾಟದ ಕಿಚ್ಚು ಅವಿಸ್ಮರಣೀಯ: ಮೇಯರ್

Update: 2024-08-09 07:09 GMT

ಮಂಗಳೂರು, ಆ.9: ಬ್ರಿಟಿಷರು ದೇಶ ಬಿಟ್ಟು ತೊಲಗುವಂತೆ ನಡೆದ ಸ್ವಾತಂತ್ರ್ಯ ಪೂರ್ವದ, ಸ್ವಾತಂತ್ರಕ್ಕಾಗಿನ ಅಂದಿನ ಭಾರತೀಯ ಹೋರಾಟದ ಕಿಚ್ಚು ಅವಿಸ್ಮರಣೀಯ. ಅದನ್ನು ನೆನಪು ಮಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಮೇಯರ್ ಸುಧೀರ್ ಶೆಟ್ಟಿ ಹೇಳಿದ್ದಾರೆ.

ನಗರದ ಬಾವುಟಗುಡ್ಡೆಯ ಟಾಗೋರ್ ಪಾರ್ಕ್ ನಲ್ಲಿ ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕ್ವಿಟ್ ಇಂಡಿಯಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ನಮ್ಮ ಪೂರ್ವಜರು ಹೃದಯ ಶ್ರೀಮಂತರಾಗಿದ್ದ ಕಾರಣ ಪೋರ್ಚುಗೀಸರು, ಡಚ್ಚರು, ಮೊಗಲರು, ಬ್ರಿಟಿಷರು ವ್ಯಾಪಾರಕ್ಕಾಗಿ ದೇಶಕ್ಕೆ ಬಂದು ಆತಿಥ್ಯ ಸ್ವೀಕರಿಸಿ ರಾಜರ ಮೇಲೆ ದಂಡೆತ್ತಿ ದೇಶವನ್ನೇ ಸ್ವಾಧೀನಪಡಿಸಿ ಇಲ್ಲಿ ಸಂಪತ್ತನ್ನು ಕೊಳ್ಳೆ ಹೊಡೆದರು. ಅಂತಹ ಬ್ರಿಟಿಷರ ವಿರುದ್ಧದ ಹೋರಾಟ ಝಾನ್ಸಿ ರಾಣಿ ಲಕ್ಷ್ಮೀ ಭಾಯಿಯವರಿಂದ ಆರಂಭಗೊಂಡು ಮಹಾತ್ಮ ಗಾಂಧಿ ನೇತೃತ್ವದ ಅಹಿಂಸಾ ಚಳವಳಿವರೆಗೆ ನಡೆದಿದ್ದು, ಅವರೆಲ್ಲರ ಹೋರಾಟವನ್ನು ನೆನಪಿಸುವ ಕಾರ್ಯ ಇಂತಹ ಕಾರ್ಯಕ್ರಮಗಳ ಮೂಲಕ ಆಗುತ್ತಿರುವುದು ಶ್ಲಾಘನೀಯ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್. ಧರ್ಮ, ಗಾಂಧಿ ಮತ್ತು ಗಾಂಧಿಯ ವಿಚಾರಧಾರಣೆ ಕೇಳಲು ಇಂದು ಯುವಕರೇ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಚರಿತ್ರೆಯ ಎಲ್ಲಾ ಘಟ್ಟಗಳು, ಸ್ವಾತಂತ್ರಯ ಹೋರಾಟದ ನೆನಪುಗಳು ನಮ್ಮ ರಕ್ತದ ಜತೆ ಸೇರಿಕೊಂಡಿವೆ. ಅಂದು ಅಹಿಂಸೆಯ ಮೂಲಕ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧೀಜಿಯವರ ಧ್ಯೇಯ ಬ್ರಿಟಿಷರನ್ನು ಭಾರತ ಬಿಟ್ಟು ತೊಲಗಿ ಎಂಬುದು ಮಾತ್ರವಾಗಿರಲಿಲ್ಲ. ನಮ್ಮಲ್ಲಿ ಬೇರೂರಿರುವ ಅಸಮಾನತೆ, ಧರ್ಮ ಮತ್ತು ಜಾತಿಯ ಕುರಿತಾದ ಅತಿಯಾದ ಮೋಹ, ಮೌಢ್ಯಗಳಿಂದ ಕಲುಷಿತಗೊಂಡಿದ್ದ ಸಮಾಜವನ್ನು ಸುಧಾರಿಸುವ ಭವಿಷ್ಯದ ಚಿಂತನೆಯೂ ಇತ್ತು. ಧರ್ಮದ ಮೇಲಿನ ವ್ಯಾಮೋಹ ಹಿಂಸೆಗೆ ಪ್ರೇರಣೆ ನೀಡುತ್ತದೆ ಎಂಬ ಎಚ್ಚರಿಕೆಯನ್ನು ಹೊಂದಿದ್ದ ಅವರು ಅಹಿಂಸೆಯ ಮೂಲಕವೇ ಹೋರಾಟವನ್ನು ತನ್ನದಾಗಿಸಿಕೊಂಡಿದ್ದರು. ಗಾಂಧೀಜಿ ನೇತೃತ್ವದ ಅಹಿಂಸಾ ಚಳವಳಿಯ ಮೂಲಕ ದೇಶದಿಂದ ಬ್ರಿಟಿಷರು ತೊಲಗಿದರೂ, ಅವರ ಕರಿನೆರಳು ಮಾತ್ರವಲ್ಲ, ಬಿಳಿ ನೆರಳೂ ನಮ್ಮಲ್ಲಿ ಇನ್ನೂ ಇದೆ. ಸಮಾಜದಲ್ಲಿ ವಿಷ ಬೀಜ ಬಿತ್ತುವ ಮನೋಭಾವ ಇನ್ನೂ ಜೀವಂತವಾಗಿದೆ. ಇದು ಅತ್ಯಂತ ಅಪಾಯಕಾರಿಯಾಗಿದ್ದು, ಆಗ ಗಾಂಧಿಯ ಅಪಾಯದ ಎಚ್ಚರಿಕೆಯನ್ನು ಪರಿಗಣಿಸದ ಪರಿಣಾಮವನ್ನು ನಾವು ಈವತ್ತಿಗೂ ಎದುರಿಸುತ್ತಿದ್ದೇವೆ ಎಂದು ಪ್ರೊ. ಪಿ.ಎಲ್. ಧರ್ಮ ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ಡಾ.ಎ. ಸದಾನಂದ ಶೆಟ್ಟಿ ವಹಿಸಿದ್ದರು.

ವೇದಿಕೆಯಲ್ಲಿ ಪ್ರತಿಷ್ಟಾನದ ಉಪಾಧ್ಯಕ್ಷ ಬಿ.ಪ್ರಭಾಕರ ಶ್ರೀಯಾನ್, ಹಾಜಿ ಇಬ್ರಾಹೀಂ ಕೋಡಿಜಾಲ್, ಸಹ ಕೋಶಾಧಿಕಾರಿ ಪ್ರೇಮ್ ಚಂದ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಡಾ.ಇಸ್ಮಾಯಿಲ್ ಎನ್. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜತೆ ಕಾರ್ಯದರ್ಶಿ ಕಲ್ಲೂರು ನಾಗೇಶ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕ್ವಿಟ್ ಇಂಡಿಯಾ ಕುರಿತು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ಥಾಪಿಸಲಾಗಿದ್ದ ಗಾಂಧಿ ಅಧ್ಯಯನ ಕೇಂದ್ರ ತೆರವಾಗಿದ್ದು, ಅದನ್ನು ಮರು ಸ್ಥಾಪಿಸುವ ಸಲುವಾಗಿ ಯುಜಿಸಿಗೆ ಪತ್ರ ಬರೆಯಲಾಗಿದೆ. ಯುಜಿಸಿ ಮನವಿ ಮಾನ್ಯ ಮಾಡುವ ಭರವಸೆ ಇದೆ.

-ಪ್ರೊ.ಪಿ.ಎಲ್.ಧರ್ಮ, ಕುಲಪತಿ, ಮಂಗಳೂರು ವಿವಿ

--------------------------------------------------

‘ಟಾಗೋರ್ ಪಾರ್ಕ್ನಲ್ಲಿ ಸ್ಮಾರ್ಟ್ ಸಿಟಿ ಅನುದಾನದಲ್ಲಿ ಬೃಹತ್ ಧ್ವಜಸ್ತಂಭ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಶೀಘ್ರವೇ ಶಂಕುಸ್ಥಾಪನೆ ನೆರವೇಲಿದೆ.’

-ಸುಧೀರ್ ಶೆಟ್ಟಿ ಕಣ್ಣೂರು, ಮೇಯರ್, ಮನಪಾ

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News