ಜಾತ್ರೆ ವ್ಯಾಪಾರಿಗಳಿಗೆ ಬದುಕುವ ʼಗ್ಯಾರಂಟಿʼ ಕೊಡಿ: ಬಿ.ಕೆ ಇಮ್ತಿಯಾಝ್

Update: 2023-10-13 14:07 GMT

ಮಂಗಳೂರು, ಅ.13: ದೇಶದ ಸಂವಿಧಾನ ಎಲ್ಲರಿಗೂ ಬದುಕುವ ಹಕ್ಕನ್ನು ನೀಡಿದೆ. ಆದರೆ ಮಂಗಳೂರಿನಲ್ಲಿ ಜಾತ್ರೆ ವ್ಯಾಪಾರವನ್ನೇ ನಂಬಿಕೊಂಡು ಬದುಕುವ ಜಾತ್ರೆ ವ್ಯಾಪಾರಿಗಳಿಗೆ ವ್ಯಾಪಾರದ ಹಕ್ಕನ್ನು ನಿರಾಕರಿಸಲಾಗಿದೆ. ಬಿಜೆಪಿ ಸರಕಾರದ ಕಾಲಕ್ಕಿಂತಲೂ ಕಟುವಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾಜ್ಯದ ಕಾಂಗ್ರೆಸ್ ಸರಕಾರ ಅನೇಕ ಗ್ಯಾರೆಂಟಿ ಗಳನ್ನು ಕೊಟ್ಟಿದೆ. ಹಾಗೇ ಜಾತ್ರೆ ವ್ಯಾಪಾರಿಗಳಿಗೆ ಬದುಕುವ ಗ್ಯಾರೆಂಟಿ ಕೊಡಿ ಎಂದು ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ, ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಆಗ್ರಹಿಸಿದರು.

ನಿರ್ದಿಷ್ಟ ಸಮುದಾಯದ ಜಾತ್ರೆ ವ್ಯಾಪಾರಿಗಳಿಗೆ ಶ್ರೀ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಉತ್ಸವದ ಜಾತ್ರೆಯಲ್ಲಿ ಅವಕಾಶ ನಿರಾಕರಣೆಯ ವಿರುದ್ಧ ನಗರದ ಪುರಭವನದ ಬಳಿ ಶುಕ್ರವಾರ ನಡೆದ ಬೀದಿಬದಿ, ಜಾತ್ರೆ ವ್ಯಾಪಾರಿಗಳಿಗೆ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಹಿಂದೂ ಧಾರ್ಮಿಕ ಕಾಯ್ದೆಯನ್ನು ಗೌರವಿಸುತ್ತೇವೆ. ಅದೇ ವೇಳೆ ಕರ್ನಾಟಕ ಮುನ್ಸಿಪಲ್ ಕಾಯ್ದೆ ಮತ್ತು ಬೀದಿಬದಿ ವ್ಯಾಪಾರದ ಕಾಯ್ದೆಯ ಉಲ್ಲಂಘನೆ ಮಾಡುವುದನ್ನು ವಿರೋಧಿಸುತ್ತೇವೆ. ಧರ್ಮದ ಹೆಸರಲ್ಲಿ ದ್ವೇಷ ಹರಡಲು ಬಿಡುವುದಿಲ್ಲ ಎಂದು ಬಿ.ಕೆ. ಇಮ್ತಿಯಾಝ್ ಹೇಳಿದರು.

ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿಯ ಗೌರವಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಮಾತನಾಡುತ್ತಾ ದಸರಾ ಎಲ್ಲರೂ ಸೇರಿ ಮಾಡುವ ನಾಡ ಹಬ್ಬವಾಗಿದೆ. ಧರ್ಮದ ಹೆಸರಲ್ಲಿ ಬಡವರ ಹೊಟ್ಟೆಗೆ ಹೊಡೆಯುವುದು ಅಧರ್ಮ. ಸಂಘ ಪರಿವಾರ ಪ್ರಾಯೋಜಿತ ಕೆಲವು ಹಿತಾಸಕ್ತಿಗಳು ಬಡವರ ಮಧ್ಯೆ ದ್ವೇಷ ಹರಡುತ್ತಿದೆ. ಶ್ರೀಮಂತರ ಜೊತೆ ನೇರ ವ್ಯವ ಹಾರ ಮಾಡುತ್ತಿದೆ. ಸಂಘ ಪರಿವಾರದ ಕಿಡಿಗೇಡಿ ಕೃತ್ಯಗಳನ್ನು ಕಾಂಗ್ರೆಸ್ ಸರಕಾರ ಮೂಕಪ್ರೇಕ್ಷಕರತೆ ನೋಡುತ್ತಿದೆ. ಮುಸ್ಲಿಮರಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದೆನ್ನಲು ಹಿಂದೂ ಸನಾತನ ಜಾತ್ರೆ ವ್ಯಾಪಾರಿ ಸಂಘಕ್ಕೆ ಸಂವಿಧಾನಿಕ ಹಕ್ಕು ಏನಿದೆ ಎಂದು ಪ್ರಶ್ನಿಸಿದ ಅವರು ಮುಸ್ಲಿಂ ವ್ಯಾಪಾರಿಗಳಿಗೂ ಜಾತ್ರೆ ವ್ಯಾಪಾರ ನಡೆಸಲು ಹಕ್ಕಿದೆ ಎಂದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ. ಯಾದವ ಶೆಟ್ಟಿ, ಸಾಮರಸ್ಯ ಸಂಘಟನೆಯ ಮಂಜುಳಾ ನಾಯಕ್, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಮುಹಮ್ಮದ್ ಮುಸ್ತಫ, ಹರೀಶ್ ಪೂಜಾರಿ ಬೋಂದೆಲ್, ಪ್ರವೀಣ್ ಕುಮಾರ್ ಕದ್ರಿ, ಶಿವಪ್ಪ, ಮನೋಜ್ ವಾಮಂಜೂರು, ಯೋಗೀಶ್ ಜಪ್ಪಿನಮೊಗರು, ನವೀನ್ ಕೊಂಚಾಡಿ, ಆಸೀಫ್ ಬಾವ ಉರುಮನೆ, ರಫೀಕ್ ಹರೇಕಳ, ಅಸುಂತ ಡಿಸೋಜ, ರಹ್ಮಾನ್ ಅಡ್ಯಾರ್, ರಿಯಾಝ್ ಎಲ್ಯಾರ್ ಪದವು ಮುಂತಾದವರು ಪಾಲ್ಗೊಂಡಿದ್ದರು.

ಜಾತ್ರೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲು ದ.ಕ.ಜಿಲ್ಲಾಡಳಿತ ಸೂಚನೆ

ಮುಸ್ಲಿಂ ಜಾತ್ರೆ ವ್ಯಾಪಾರಿಗಳಿಗೆ ಅನ್ಯಾಯ ಆಗಿರುವ ಬಗ್ಗೆ ಅಪರ ಜಿಲ್ಲಾಧಿಕಾರಿ ಜಿ.ಸಂತೋಷ್ ಕುಮಾರ್‌ರ ಅಧ್ಯಕ್ಷತೆ ಯಲ್ಲಿ ಪ್ರತಿಭಟನೆಯ ಬಳಿಕ ಸಭೆ ನಡೆಯಿತು.

ಮುಸ್ಲಿಂ ವ್ಯಾಪಾರಿಗಳನ್ನು ಭಯ ಹುಟ್ಟಿಸಿ ವಾಪಸ್ ಕಳುಹಿಸಿರುವ ದೇವಸ್ಥಾನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಅಪರ ಜಿಲ್ಲಾಧಿಕಾರಿ ಭದ್ರತೆ ಕೊಟ್ಟು ಎಲ್ಲರನ್ನು ಒಳಗೊಳ್ಳುವಂತ ಕೆಲಸ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಸೂಚಿಸಿದರು. ದೇವಸ್ಥಾನದ ಜಾಗವನ್ನು ಹೊರತುಪಡಿಸಿದ ಮಂಗಳೂರು ಮಹಾ ನಗರಪಾಲಿಕೆಯ ಜಾಗದಲ್ಲಿ ತುರ್ತು ಟೆಂಡರು ಕರೆದು ಶನಿವಾರ ಬೆಳಗ್ಗೆಯೇ ಬಹಿರಂಗ ಹರಾಜು ಮಾಡಿ ಎಲ್ಲರಿಗೂ ವ್ಯಾಪಾರ ಮಾಡುವಂತಾಗಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆಗೆ ಜಿಲ್ಲಾಡಳಿತ ಆದೇಶ ನೀಡಿತು.

ಸಭೆಯಲ್ಲಿ ಮಹಾನಗರ ಪಾಲಿಕೆಯ ಉಪ ಆಯುಕ್ತ (ಕಂದಾಯ) ರೇಖಾ ಶೆಟ್ಟಿ, ಪೊಲೀಸ್ ಉಪಾಯುಕ್ತ ಮಹೇಶ್ ಕುಮಾರ್, ಮಂಗಳಾದೇವಿ ದೇವಸ್ಥಾನದ ಪ್ರತಿನಿಧಿಗಳು, ಬೀದಿಬದಿ ಮತ್ತು ಜಾತ್ರೆ ವ್ಯಾಪಾರಸ್ಥರ ಸಂಘದ ಪ್ರಮುಖರಾದ ಬಿ.ಕೆ. ಇಮ್ತಿಯಾಝ್, ಸುನಿಲ್ ಕುಮಾರ್ ಬಜಾಲ್, ಹರೀಶ್ ಪೂಜಾರಿ, ಪ್ರವೀಣ್ ಕುಮಾರ್ ಕದ್ರಿ, ರಿಯಾಝ್, ಶಾಫಿ ಬೆಂಗ್ರೆ, ಆಸೀಫ್ ಬಾವ ಉರುಮನೆ ಉಪಸ್ಥಿತರಿದ್ದರು.




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News