ಹೊರಗುತ್ತಿಗೆ ನೌಕರರಿಗೆ ಸೌಲಭ್ಯ ಸಿಗದಿದ್ದರೆ ಅಧಿಕಾರಿಗಳೇ ಜವಾಬ್ದಾರರು: ಮುಹಮ್ಮದ್ ಮೊಹ್ಸಿನ್

Update: 2023-11-20 16:20 GMT

ಮಂಗಳೂರು : ಸರಕಾರಿ ಕಚೇರಿಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಪಿ.ಎಫ್ ಮತ್ತು ಇ.ಎಸ್.ಐ. ಸೌಲಭ್ಯ ಗಳನ್ನು ಏಜನ್ಸಿಗಳು ನೀಡದಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಅಂತಹ ಪ್ರಕರಣಗಳಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡುವಂತೆ ಕಾರ್ಮಿಕ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೊಹ್ಸಿನ್ ಸೂಚಿಸಿದ್ದಾರೆ.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕಾರ್ಮಿಕ ಇಲಾಖಾ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದರು.

ಸರಕಾರಿ ಕಚೇರಿಗಳಲ್ಲಿ ಬಹಳಷ್ಟು ಸಿಬ್ಬಂಧಿಗಳನ್ನು ಹೊರಗುತ್ತಿಗೆ ಏಜನ್ಸಿ ಮೂಲಕ ನೇಮಕ ಮಾಡಲಾಗುತ್ತಿದೆ. ಆದರೆ, ಏಜನ್ಸಿಗಳು ಕನಿಷ್ಠ ವೇತನ ಕಾಯ್ದೆ ಪ್ರಕಾರ ಸಂಬಳ ಪಾವತಿಸದಿರುವ ಬಗ್ಗೆ ಪ್ರಕರಣಗಳು ದಾಖಲಾಗುತ್ತಿವೆ. ಸಿಬ್ಬಂದಿಗೆ ಪಿ.ಎಫ್ ಮತ್ತು ಇಎಸ್‌ಐ ಮೊತ್ತವನ್ನು ಹೊರಗುತ್ತಿಗೆ ಏಜೆನ್ಸಿಯು ಸಿಬ್ಬಂದಿಯ ವೇತನದಿಂದ ಕಟಾಯಿಸುತ್ತಿವೆ. ಆದರೆ ಏಜನ್ಸಿಗಳು ಈ ಮೊತ್ತವನ್ನು ಸರಿಯಾಗಿ ಪಾವತಿಸದಿರುವ ಸಾಕಷ್ಟು ಪ್ರಕರಣಗಳು ವರದಿಯಾಗಿವೆ. ಇದರಿಂದ ಹೊರಗುತ್ತಿಗೆ ನೌಕರರು ಕಾರ್ಮಿಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ಹೇಳಿದರು.

ಸರಕಾರಿ ಕಚೇರಿ ಅಧಿಕಾರಿಗಳು, ಹೊರಗುತ್ತಿಗೆ ಏಜನ್ಸಿಗಳ ಬಿಲ್ ಪಾವತಿಸುವಾಗ, ಹಿಂದಿನ ತಿಂಗಳಲ್ಲಿ ಸಿಬ್ಬಂದಿಯ ಪಿಎಫ್, ಇಎಸ್‌ಐ ಪಾವತಿಸಿರುವ ಬಗ್ಗೆ ದಾಖಲೆ ಕಡ್ಡಾಯ ಪರಿಶೀಲಿಸಿದ ಬಳಿಕ ಬಿಲ್ ಪಾವತಿಸಬೇಕು. ಈ ಬಗ್ಗೆ ಎಲ್ಲ ಇಲಾಖಾ ಕಚೇರಿಗಳಿಗೆ ಮಾಹಿತಿ ನೀಡುವಂತೆ ಕಾರ್ಯದರ್ಶಿಗಳು ಸೂಚಿಸಿದರು.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭಾರತಿ ಡಿ., ಅಪರ ಕಾರ್ಮಿಕ ಆಯುಕ್ತ ಮಂಜುನಾಥ್, ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖೆ ಅಪರ ನಿರ್ದೇಶಕ ನಂಜಪ್ಪ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News