ಹೋಮಿಯೋಪಥಿ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನ ಅಗತ್ಯ: ಯು.ಟಿ. ಖಾದರ್

Update: 2024-06-30 17:27 GMT

ಮಂಗಳೂರು: ‘ಹೋಮಿಯೋಪಥಿ ಪದ್ಧತಿಯನ್ನು ಕಲಿತು ಕೆಲವು ಮಂದಿ ವೈದ್ಯರು ಅಲೋಪಥಿ ಔಷಧಿ ನೀಡುವುದು ಅಲ್ಲಲ್ಲಿ ಕಂಡು ಬರುತ್ತದೆ. ಇದು ಸರಿಯಲ್ಲ. ಇದರಿಂದಾಗಿ ರೋಗಿಗೆ ಅನ್ಯಾಯ ಆಗುವುದರ ಜೊತೆಗೆ ಹೋಮಿಯೊಪಥಿ ವೈದ್ಯ ಪದ್ಧತಿಗೆ ದೊಡ್ಡ ನಷ್ಟ ವಾಗುತ್ತದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಹೇಳಿದ್ದಾರೆ.

ಭಾರತೀಯ ಹೋಮಿಯೊಪಥಿಕ್ ಮೆಡಿಕಲ್ ಸಂಘ (ಐಎಚ್‌ಎಂಎ) ನಗರದ ಅವತಾರ್ ಕನ್ವೆನ್ಷನ್ ಹಾಲ್‌ನಲ್ಲಿ ರವಿವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ಸಮಾವೇಶ ಮತ್ತು ತಾಂತ್ರಿಕ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಹೋಮಿಯೊಪಥಿ ಮತ್ತು ಆಯುರ್ವೇದ ಪದ್ಧತಿ ರೋಗಿಗಳ ಕೊನೆಯ ಆಯ್ಕೆ ಆಗಿದೆ. ಇಂಥ ಮನಸ್ಥಿತಿಯನ್ನು ದೂರ ಮಾಡಲು ತಾವು ಚಿಕಿತ್ಸೆ ನೀಡುವ ಪದ್ಧತಿ ಬಗ್ಗೆ ವಿಶ್ವಾಸ ಮೂಡಿಸುವ ಕಾರ್ಯ ವೈದ್ಯರಿಂದ ನಡೆಯಲಿ ಎಂದು ಸಲಹೆ ನೀಡಿದರು.

ಎಲ್ಲ ವೈದ್ಯ ಪದ್ಧತಿಗೂ ಮಹತ್ವ ಇದೆ. ಹೋಮಿಯೊಪಥಿಗೆ ರೋಗ ಗುಣಪಡಿಸುವ ಶಕ್ತಿ ಇದೆ ಎಂದು ಜನರಲ್ಲಿ ವಿಶ್ವಾಸ ಮೂಡಿಸಬೇಕು’ ಎಂದು ಖಾದರ್ ಹೇಳಿದರು.

ಹೋಮಿಯೊಪಥಿಗೂ ಮಹತ್ವ ಸಿಗುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಾಗಿದೆ. ಜಿಲ್ಲಾ ಮಟ್ಟದಲ್ಲಿ ವೈದ್ಯರ ಕೊರತೆ ಇರುವುದು ಗಮನಕ್ಕೆ ಬಂದಿದೆ. ಇದನ್ನು ಸರಿಪಡಿಸಲು ಸರಕಾರ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದು ಖಾದರ್ ಹೇಳಿದರು.

ಐಎಚ್‌ಎಂಎ ರಾಷ್ಟ್ರೀಯ ಅಧ್ಯಕ್ಷ ಡಾ.ಉವೈಸೆ ಕೆ.ಎಂ, ಕರ್ನಾಟಕ ಆಯುಷ್ ಇಲಾಖೆಯ ಹೋಮಿಯೋಪಥಿ ಉಪನಿರ್ದೇಶಕ ಡಾ.ಅಶ್ವತ್ಥನಾರಾಯಣ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಮೊಹಮ್ಮದ್ ಇಕ್ಬಾಲ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿವೇಕ್ ಆಳ್ವ, ಫಾದರ್ ಮುಲ್ಲರ್ ಸಂಸ್ಥೆಗಳ ಫಾದರ್ ಫಾಸ್ಟಿನ್ ಲೋಬೊ, ಸಂಚಾಲಕ ಡಾ.ಅವಿನಾಶ್ ವಿ.ಎಸ್, ಸಂಘದ ಪ್ರಧಾನ ಕಾರ್ಯದರ್ಶಿ ಧೀರಜ್ ಪ್ರೇಮ್ ಕುಮಾರ್ ಉಪಸ್ಥಿತರಿದ್ದರು.

ಚೆನ್ನೈನ ಡಾ ವೆಂಕಟರಾಮನ್ ಮತ್ತು ಯುರೋಪ್‌ನ ಡಾ.ವಿನೀತ್ ಸಿದ್ದಾರ್ಥ್ ಅವರು ವಿಷಯ ಮಂಡಿಸಿದರು.

ಸಮಾವೇಶದಲ್ಲಿ ದೇಶದ ವಿವಿಧ ರಾಜ್ಯಗಳಿಂದ 640 ಮಂದಿ ವೈದ್ಯರುಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸಂಘದ ನೂತನ ವೆಬ್‌ಸೈಟ್ ಬಿಡುಗಡೆ ಮಾಡಲಾಯಿತು.

ಸಮ್ಮೇಳನದ ಅಧ್ಯಕ್ಷ ಡಾ.ಪ್ರವೀಣ್ ರಾಜ್ ಆಳ್ವ ಸ್ವಾಗತಿಸಿದರು. ಸಮ್ಮೇಳನದ ಸಂಚಾಲಕ ಡಾ.ಪ್ರವೀಣ್ ಕುಮಾರ್ ರೈ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News