ಆ.15ರಂದು ವೆನ್‌ಲಾಕ್‌ನ ನೂತನ ಸರ್ಜಿಕಲ್ ಕಟ್ಟಡ ಉದ್ಘಾಟನೆ

Update: 2024-08-13 12:37 GMT

ಮಂಗಳೂರು: ವೆನ್‌ಲಾಕ್ ಆಸ್ಪತ್ರೆಯಲ್ಲಿ ನೂತನ ಸರ್ಜಿಕಲ್ ಸೂಪರ್ ಸ್ಪೆಷಾಲಿಟಿ ಕಟ್ಟಡದ ಉದ್ಘಾಟನೆ ಆ. 15ರಂದು ಸಂಜೆ 3 ಗಂಟೆಗೆ ನಡೆಯಲಿದೆ.

ಕಟ್ಟಡವನ್ನು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಉಪಸ್ಥಿತಿಯಲ್ಲಿ ನಗರಾಭಿವೃದ್ಧಿ ಸಚಿವ ಸುರೇಶ್ ಬಿ.ಎಸ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸುವರು. ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕಿ ಡಾ. ಜೆಸಿಂತ ಡಿಸೋಜಾ ತಿಳಿಸಿದರು.

ಆಸ್ಪತ್ರೆಯ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಆಸ್ಪತ್ರೆಯು 2020ರಲ್ಲಿ ಶಿಲಾನ್ಯಾಸಗೊಂಡಿದ್ದು, 56 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ ಎಂದರು.

ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಕಟ್ಟಡಕ್ಕೆ ಆಧುನಿಕ ವೈದ್ಯಕೀಯ ತಂತ್ರಜ್ಞಾನಕ್ಕೆ ಅನುಗುಣವಾಗಿ ಸಚಿವ ದಿನೇಶ್ ಗುಂಡೂರಾವ್ ಅವರು ಸ್ಮಾರ್ಟ್‌ಸಿಟಿಯಿಂದ 7 ಕೋಟಿ ರೂ. ವೆಚ್ಚದ ಆಧುನಿಕ ವೈದ್ಯಕೀಯ ಯಂತ್ರೋಪಕರಣಗಳನ್ನು ಒದಗಿಸಿದ್ದಾರೆ. ಸರಕಾರದ ವತಿಯಿಂದ 2 ಕೋಟಿ ರೂ. ಹಾಗೂ ಕೆಎಂಸಿ ವತಿಯಿಂದ 4 ಕೋಟಿ ರೂ. ವೆಚ್ಚದಲ್ಲಿ ವೈದ್ಯಕೀಯ ಉಪಕರಣಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.

ಸರ್ಜಿಕಲ್ ಕಟ್ಟಡವು 1,65,000 ಚದರ ಅಡಿ ವಿಸ್ತೀರ್ಣದಲ್ಲಿ ತಳ ಅಂತಸ್ತು, ನೆಲ ಅಂತಸ್ತು ಸೇರಿ 7 ಅಂತಸ್ತುಗಳನ್ನು ಹೊಂದಿದೆ. 250 ಹಾಸಿಗೆಗಳ ಸೌಲಭ್ಯವಿದ್ದು, 4ನೆ ಅಂತಸ್ತಿನವರೆಗೆ ಕಾಮಗಾರಿ ಪೂರ್ಣಗೊಂಡಿದೆ. ಕಟ್ಟಡದ ತಳ ಅಂತಸ್ತಿನಲ್ಲಿ ಕ್ಯಾಥ್‌ಲ್ಯಾಬ್ ಮತ್ತು ರೇಡಿಯಾಲಜಿ ವಿಭಾಗಗಳಿವೆ. ನೆಲ ಅಂತಸ್ತಿನಲ್ಲಿ 15 ಹಾಸಿಗೆಗಳ ತುರ್ತು ಚಿಕಿತ್ಸಾ ವಿಭಾಗ, 8 ಹಾಸಿಗೆಗಳ ತುರ್ತು ಚಿಕಿತ್ಸಾ ಐಸಿಯು, ಎಂಡೋಸ್ಕೋಪಿ ಮತ್ತು ತುರ್ತು ಶಸ್ತ್ರ ಚಿಕಿತ್ಸಾ ಕೊಠಡಿಳಿವೆ. ಒಂದನೆ ಮಹಡಿಯಲ್ಲಿ 60 ಹಾಸಿಗೆಗಳ ಇಎನ್‌ಟಿ ಮತ್ತು ಯುರಾಲಜಿ ಶಸ್ತ್ರ ಚಿಕಿತ್ಸಾ ವಾರ್ಡ್‌ಗಳು ಮತ್ತು 2ನೆ ಮಹಡಿಯಲ್ಲಿ 70 ಹಾಸಿಗೆಗಳ ನ್ಯೂರೋ ಸರ್ಜರಿ, ಕಾರ್ಡಿಯೋಥೊರಾಸಿಕ್ ಸರ್ಜರಿ ಮತ್ತು ಕಣ್ಣಿನ ಶಸ್ತ್ರ ಚಿಕಿತ್ಸಾ ವಾರ್ಡ್‌ಗಳಿವೆ. ಮೂರನೆ ಮತ್ತು ನಾಲ್ಕನೆ ಅಂತಸ್ತಿನಲ್ಲಿ ಪ್ರತಿ ಅಂತಸ್ತಿನಲ್ಲಿ ತಲಾ 5ರಂತೆ ಒಟ್ಟು 10 ಸುಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿಗಳಿವೆ. ತಲಾ 10 ಹಾಸಿಗೆಗಳ ಶಸ್ತ್ರ ಚಿಕಿತ್ಸಾ ಪೂರ್ವ ಮತ್ತು 15 ಹಾಸಿಗೆಗಳ ಶಸ್ತ್ರ ಚಿಕಿತ್ಸಾ ನಂತರ ವಾರ್ಡ್ ಲಭ್ಯವಿದೆ ಎಂದು ಅವರು ವಿವರಿಸಿದರು.

176 ವರ್ಷಗಳಿಂದ ದ.ಕ. ಜಿಲ್ಲೆ ಮಾತ್ರವಲ್ಲದೆ ಸುತ್ತಮುತ್ತಲಿನ 10 ಜಿಲ್ಲೆಗಳು, ನೆರೆಯ ಕೇರಳ ರಾಜ್ಯದ ಜನರಿಗೆ ಆರೋಗ್ಯ ಸೇವೆಯನ್ನು ನೀಡುತ್ತಿರುವ ವೆನ್‌ಲಾಕ್ ಆಸ್ಪತ್ರೆ 1954ರಿಂದ ಕೆಎಂಸಿ ಆಸ್ಪತ್ರೆಯೊಂದಿಗೆ ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪ್ರಸಕ್ತ ವಾರ್ಷಿಕ 3 ಲಕ್ಷ ಹೊರರೋಗಿಗಳು, 30 ಸಾವಿರ ಒಳರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ವಾರ್ಷಿಕ 10000 ಶಸ್ತ್ರ ಚಿಕಿತ್ಸೆಗಳು ನಡೆಯುತ್ತಿವೆ. ಆಸ್ಪತ್ರೆಯು 905 ಹಾಸಿಗೆಗಳ ಸೌಲಭ್ಯವನ್ನು ಹೊಂದಿದೆ. ಇದಲ್ಲದೆ ಆಸ್ಪತ್ರೆಯ ಆವರಣದಲ್ಲಿ ಇನ್‌ಫೋಸಿಸ್ ವತಿಯಿಂದ ಪ್ರಾದೇಶಿಕ ಅತ್ಯಾಧುನಿಕ ಮಕ್ಕಳ ಆಸ್ಪತ್ರೆ 20 ವರ್ಷಗಳ ಹಿಂದೆ ದಾನ ರೂಪದಲ್ಲಿ ನಿರ್ಮಾಣಗೊಂಡಿದೆ. ಯು.ಟಿ.ಖಾದರ್ ಅವರು ಆರೋಗ್ಯ ಸಚಿವರಾಗಿದ್ದಾಗ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಯ ಅಭಿವೃದ್ಧಿ ಕೈಗೆತ್ತಿಕೊಂಡ ಕಾರಣ 40 ಕೋಟಿ ರೂ. ವೆಚ್ಚದಲ್ಲಿ 280 ಹಾಸಿಗೆಗಳ ಹೊಸ ಮೆಡಿಸಿನ್‌ಕಟ್ಟಡವನ್ನು ನಿರ್ಮಿಲಾಯಿತು. ಈ ಕಟ್ಟಡವು ಇದೀಗ ಸರ್ಜಿಕಲ್ ಸೂಪರ್ ಸ್ಪೆಷಾಲಿಟಿ ಕಟ್ಟಡ ನಿರ್ಮಾಣಕ್ಕೆ ಕೇಂದ್ರ ಸರಕಾರದ ವತಿಯಿಂದ ಸ್ಮಾರ್ಟ್ ಸಿಟಿಯ ಅನುದನ ಮಂಜೂರಾಗಲು ಸಹಕಾರಿಯಾಯಿತು ಎಂದು ಡಾ. ಜೆಸಿಂತ ಡಿಸೋಜಾ ತಿಳಿಸಿದರು.

ಗೋಷ್ಟಿಯಲ್ಲಿ ಡಾ. ನವೀನ್, ಡಾ. ಸದಾನಂದ ಪೂಜಾರಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News