ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸ್ವಾತಂತ್ರ್ಯೋತ್ಸವ
ಪುತ್ತೂರು; ಪ್ರಸ್ತುತ ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯವು ಪೂರ್ವಜರ ತ್ಯಾಗ ಬಲಿದಾನ ಪರಿಶ್ರಮದ ಬಳುವಳಿಯಾಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧೀಜಿ ಸೇರಿದಂತೆ ಮಹನೀಯರನ್ನು ಸ್ಮರಿಸುವುದರ ಜತೆಗೆ ಅವರ ಆಕಾಂಕ್ಷೆಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಪುತ್ತೂರು ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಹೇಳಿದರು.
ಅವರು ಮಂಗಳವಾರ ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಇಲ್ಲಿನ ಮಿನಿವಿಧಾನಸೌಧದ ಮುಂಭಾಗದಲ್ಲಿರುವ ಮಂಗಲ್ ಪಾಂಡೆ ಚೌಕದಲ್ಲಿ ನಡೆದ ತಾಲೂಕು ಮಟ್ಟದ ಸ್ವಾತಂತ್ರ್ಯೊತ್ಸವ ದಿನಾಚರಣೆಯಲ್ಲಿ ರಾಷ್ಟ್ರೀಯ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ಸಂದೇಶ ನೀಡಿದರು.
77 ನೇ ಸ್ವಾತಂತ್ರ್ಯದ ಹೊಸ್ತಿಲಲ್ಲಿರುವ ಭಾರತ ಸಾಕಷ್ಟು ಬೆಳವಣಿಗೆಗಳನ್ನು ಕಂಡಿದ್ದು, ಬಾಹ್ಯಾಕಾಶ, ತಂತ್ರಜ್ಞಾನ ಹೊಂದಿರುವ ಕೆವೇ ದೇಶಗಳಲ್ಲಿ ನಮ್ಮ ದೇಶವೂ ಒಂದಾಗಿದೆ. ಆರ್ಥಿಕತೆ, ಅಭಿವೃದ್ಧಿ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ಉತ್ತುಂಗಕ್ಕೇರಿದೆ ಎಂದ ಅವರು ದೇಶ ನಮಗೇನು ಕೊಟ್ಟಿದೆ ಎನ್ನುವ ಬದಲು ದೇಶಕ್ಕಾಗಿ ನಾವೇನು ಮಾಡಿದ್ದೇವೆ ಎಂಬ ಮನೋಭಾವ ನಮ್ಮದಾಗಬೇಕು ಎಂದರು. ತ್ರಿವರ್ಣಧ್ವಜ ಆರೋಹಣ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ, ಡಿವೈಎಸ್ಪಿ ಗಾನಾ ಪಿ ಕುಮಾರ್, ತಹಶೀಲ್ದಾರ್ ಶಿವಶಂಕರ್, ಕ್ಷೇತ್ರಶಿಕ್ಷಣಾಧಿಕಾರಿ ಲೊಕೇಶ್ ಎಸ್.ಆರ್, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರು ಇದ್ದರು.
ಬಳಿಕ ಪುರಭವನದಲ್ಲಿ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರು ಮಾತನಾಡಿ, ಹಿರಿಯರ ತ್ಯಾಗ ಬಲಿದಾನಗಳಿಂದಾಗಿ ಇಂದು ನಾವು ನಮ್ಮ ಭಾರತ ಎಂಬ ಗೌರವದಿಂದ ಮಾತನಾಡುವಂತಾಗಿದೆ. ನಮ್ಮ ರಾಷ್ಟ್ರಧ್ವಜ ನಮ್ಮ ಹೆಮ್ಮೆಯಾಗಿದೆ. ಇದಕ್ಕೆ ಚ್ಯುತಿ ಬಾರದಂತೆ ಕಾಪಾಡುವ ಕೆಲಸ ನಮ್ಮಿಂದಾಗಬೇಕು. ಯಾವತ್ತೂ ನಮ್ಮ ಧ್ವಜ ಬಾನೆತ್ತರದಲ್ಲಿ ಹಾರಾಡುವಂತೆ ನೋಡಿಕೊಳ್ಳಬೇಕಾದ ಅಗತ್ಯತೆ ನಮ್ಮದ್ದಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಿವೈಎಸ್ಪಿ ಡಾ. ಗಾನಾ ಪಿ ಕುಮಾರ್ ಅವರು ಮಾತನಾಡಿ, ಭಾರತೀಯರ ಹೊಂದಾಣಿಕೆಯ ಕೊರತೆಯಿಂದ ಬ್ರಿಟೀಷ್ ಅಧಿಪತ್ಯ ಕಾರಣವಾಗಿದೆ. ಈಗಲೂ ನಮ್ಮನ್ನು ಒಡೆಯುವ ಕಿಡಿಗೇಡಿ ಕೃತ್ಯ ನಿರಂತರವಾಗಿ ನಡೆಯುತ್ತಿದ್ದು, ದೇಶದ ಆಂತರಿಕ ಭದ್ರತೆಗೆ ಆತಂಕ ಒಡ್ಡುವ ಕೃತ್ಯಗಳನ್ನು ಹತ್ತಿಕ್ಕುವ ಕೆಲಸಕ್ಕೆ ಮುಂದಾಗುವ ಮನೋಭಾವ ಬೆಳೆಸಬೇಕಾಗಿದೆ. ಸ್ವಪ್ರತಿಷ್ಟೆ ಗಳನ್ನು ದೂರವಿಟ್ಟು ದೇಶದ ರಕ್ಷಣೆಗೆ ಪಣತೊಡಬೇಕಾಗಿದೆ ಎಂದ ಅವರು ದಕ ಜಿಲ್ಲೆಯನ್ನು ಡ್ರಗ್ಸ್ ಮುಕ್ತ ಜಿಲ್ಲೆಯನ್ನಾಗಿಸುವ ಅಭಿಯಾನ ಆರಂಭಿಸಲಾಗಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಎಸೆಸೆಲ್ಸಿಯಲ್ಲಿ ರಾಜ್ಯಮಟ್ಟದಲ್ಲಿ ಸಾಧನೆಗೈದ ಹಿಮಾನಿ, ಶ್ರೀಶ ನಿಡ್ವಣ್ಣಾಯ, ತೇಜಸ್, ಪಿಯುಸಿಯಲ್ಲಿ ಸಾಧನೆ ಮಾಡಿದ ಮಧುಶ್ರೀ, ದೀಪ್ತಿಲಕ್ಷ್ಮಿ, ಆಶ್ರಯ, ಆದಿತ್ಯ ನಾರಾಯಣ ಅವರನ್ನು ಪುರಸ್ಕರಿಸಲಾಯಿತು. ನಿವೃತ್ತ ಸೈನಿಕರಾದ ವಾಯುಸೇನೆಯ ಸುರೇಶ್ ಶೆಣೈ ಮತ್ತು ಭೂಸೇನೆಯ ಜಯಂತ ಬೇಕಲ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೆ ಮೊದಲು ಉಪವಿಭಾಗಾಧಿಕಾರಿ ಗಿರೀಶ್ ನಂದನ್, ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ತಹಶೀಲ್ದಾರ್ À್ವಶಿವಶಂಕರ್ ಅವರು ಅಮರ್ ಜವಾನ್ ಜ್ಯೋತಿ ಸ್ವಾರಕದಲ್ಲಿ ಹುತಾತ್ಮ ಸೈನಿಕರಿಗೆ ಪುಷ್ಪ ನಮನ ಸಲ್ಲಿಸಿದರು.
ವೇದಿಕೆಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಶೀಲ್ದಾರ್ ಶಿವಶಂಕರ್, ನಗರಸಭಾ ಪೌರಾಯುಕ್ತ ಮಧು ಎಸ್ ಮನೋಹರ್ ಇದ್ದರು. ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.
ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಸ್ವಾತಂತ್ರ್ಯೋತ್ಸದ ಧ್ವಜಾರೋಹಣ ನೆರವೇರಿಸಿದರು.
ರಾಮಕೃಷ್ಣ ಪ್ರೌಢಶಾಲಾ ವಿದ್ಯಾರ್ಥಿಗಳು ರಾಷ್ಟ್ರಗೀತೆ ಮತ್ತು ಸುಧಾನ ಪ್ರೌಢಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ನಗರಠಾಣಾ ಎಸೈ ಶ್ರೀಕಾಂತ್ ರಾಥೋಡ್ ನೇತೃತ್ವದಲ್ಲಿ ಪೊಲೀಸ್ ಇಲಾಖೆ, ಗೃಹರಕ್ಷಕ ದಳ, ಅಗ್ನಿಶಾಮಕ ದಳ, ಕೊಂಬೆಟ್ಟು ಸರ್ಕಾರಿ ಪಪೂ ಕಾಲೇಜ್, ಸಂತ ವಿಕ್ಟರ್ಸ್ ಬಾಲಿಕಾ ಪ್ರೌಢಶಾಲೆ, ಸಂತ ಫಿಲೋಮಿನಾ ಪ್ರೌಢ ಶಾಲೆ, ರಾಮಕೃಷ್ಣ ಪ್ರೌಢಶಾಲೆಯ ಎನ್‍ಸಿಸಿ ಸ್ಕೌಟ್ಸ್, ಗೈಡ್ಸ್ ವಿಭಾಗಗಳಿಂದ ಗೌರವರಕ್ಷೆ ಮತ್ತು ಪಥ ಸಂಚಲನ ನಡೆಯಿತು. ಬಳಿಕ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ ನಡೆಯಿತು.