ಗುಣಮಟ್ಟದ ಶಿಕ್ಷಣದಿಂದ ಭಾರತದ ಆರ್ಥಿಕ ಬೆಳವಣಿಗೆ ಸಾಧ್ಯ- ಗಿರೀಶ್ ನಂದನ್
ಪುತ್ತೂರು : ಭಾರತದ ಜನಸಂಖ್ಯೆ ಹೆಚ್ಚಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಯುವ ಜನತೆಯ ಸಬಲೀಕರಣ ನಮ್ಮ ಆಧ್ಯತೆ ಯಾಗಿದೆ. ಯುವಜನತೆ ಗುಣಮಟ್ಟದ ಶಿಕ್ಷಣ ಪಡೆದುಕೊಂಡು ಮುಂದೆ ಸಾಗಿದರೆ ಮಾತ್ರ ಭಾರತ ಆರ್ಥಿಕವಾಗಿ ಬೆಳೆ ಯಲು ಸಾಧ್ಯ. ಶಿಕ್ಷಣಕ್ಕೆ ಉತ್ತೇಜನ ನೀಡುವಲ್ಲಿ ಸೀತಾರಾಮ ರೈ ಅವರ ನೇತೃತ್ವದ ಆದರ್ಶ ವಿವಿಧೋದ್ದೇಶ ಸಂಘದ ಕೊಡುಗೆ ಶ್ಲಾಘನೀಯವಾಗಿದೆ ಎಂದು ಪುತ್ತೂರು ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಅವರು ಹೇಳಿದರು.
ಪುತ್ತೂರಿನ ದರ್ಬೆಯಲ್ಲಿ ಪ್ರಧಾನ ಕಚೇರಿ ಹೊಂದಿ ಕಾರ್ಯಾಚರಿಸುತ್ತಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಶನಿವಾರ ನಗರದ ದರ್ಬೆಯ ಪ್ರಶಾಂತ್ ಮಹಲ್‍ನ ಸನ್ನಿಧಿ ಹಾಲ್‍ನಲ್ಲಿ ನಡೆದ ಸರ್ಕಾರಿ ಶಾಲೆಗಳ ಆರ್ಥಿಕ ವಾಗಿ ಹಿಂದುಳಿದ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ `ವಿದ್ಯಾನಿಧಿ-ಸಹಾಯಧನ ವಿತರಣಾ ಸಮಾರಂಭ' ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಡಿಸ್ಟ್ರಿಕ್ಟ್ 3181ರ ಅಸಿಸ್ಟೆಂಟ್ ಗವರ್ನರ್ ಪುರಂದರ ರೈ ಮಿತ್ರಂಪಾಡಿ ಅವರು, ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಮೂಲಕ ಸೀತಾರಾಮ ರೈ ಅವರು ಸಹಕಾರ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿದ್ದಾರೆ. ಅವರ ಸಹಕಾರಿ ಚಿಂತನೆ, ನಾಯಕತ್ವ ಗುಣ ಇತರರಿಗೆ ಮಾದರಿಯಾಗಿದೆ. ಸಹಾಯ ಪಡೆದುಕೊಂಡ ವಿದ್ಯಾರ್ಥಿಗಳು ಮುಂದೆ ಒಂದು ಹಂತಕ್ಕೆ ಬೆಳೆದ ಬಳಿಕ ಇನ್ನೊಬ್ಬರಿಗೆ ಸಹಾಯ ಮಾಡುವ ಮೂಲಕ ಸಮಾಜ ಸೇವೆ ಮಾಡಿದರೆ ಮಾತ್ರ ಸೀತಾರಾಮ ರೈ ಅವರ ಕನಸು ನನಸಾಗಲು ಸಾಧ್ಯ ಎಂದರು.
ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಿದ ರಾಷ್ಟ್ರ ಪ್ರಶಸ್ತಿ ಪುರಸ್ಕøತ ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರ್ ಅರಂತೋಡು ಅವರು ಮಾತನಾಡಿ, ಗಳಿಸಿದ ಹಣವನ್ನು ಸದುದ್ದೇಶಕ್ಕೆ ದಾನ ಮಾಡಿ ಸಂತೃಪ್ತಿ ಪಡೆಯುತ್ತಿರುವ ಸೀತಾರಾಮ ರೈ ಅವರು ಅಭಿನಂದನೀಯರು ಎಂದರು. ಇಂದಿನ ಮಕ್ಕಳು ಮೇಗಾ ಮೀಡಿಯಾದಲ್ಲಿದ್ದಾರೆ. ಇಂದಿನ ಮಕ್ಕಳಿಗೆ ಬಡತನ ಏನೂ ಎಂಬುವುದೇ ಗೊತ್ತಿಲ್ಲ. ಆದರೆ ನಾವಿಂದು ಸ್ಪರ್ಧಾತ್ಮಕ ಯುಗದಲ್ಲಿ ಬುದುಕುತ್ತಿದ್ದೇವೆ ಎಂಬುವುದು ಮಕ್ಕಳಿಗೆ ತಿಳಿದಿರಬೇಕು.ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಲು ಹೋರಾಟ ನಡೆಸಬೇಕಾಗಿದೆ. ನಮ್ಮ ಶ್ರಮ, ಪ್ರಯತ್ನದ ಮೇಲೆ ಭವಿಷ್ಯ ನಿಂತಿದೆ ಎಂಬುವುದನ್ನು ಮಕ್ಕಳು ಅರಿತುಕೊಳ್ಳಬೇಕಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಪುತ್ತೂರು ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್ ಕೆ ಅವರು ಮಾತನಾಡಿ, ಸಹಕಾರಿ ರಂಗದ ಮೂಲಕ ಸೀತಾರಾಮ ರೈ ಅದೆಷ್ಟೋ ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ನೀಡಿದ್ದಾರೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಮುಂದೆ ಹೋಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಅವರು, ಈ ಬಾರಿ 225 ವಿದ್ಯಾರ್ಥಿಗಳಿಗೆ ಸೇರಿದಂತೆ ಈ ತನಕ ಒಟ್ಟು ರೂ.22ಲಕ್ಷದಷ್ಟು ವಿದ್ಯಾನಿಧಿ ವಿತರಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳು ಶಿಕ್ಷಣದಲ್ಲಿ ಮುಂದೆ ಬರಬೇಕು ಎನ್ನುವುದೇ ನಮ್ಮ ಉದ್ದೇಶ ಎಂದರು.
ಉಪಾಧ್ಯಕ್ಷ ಎನ್.ಸುಂದರ ರೈ ಸವಣೂರು, ಮಹಾಪ್ರಬಂಧಕ ವಸಂತ್ ಜಾಲಾಡಿ ಉಪಸ್ಥಿತರಿದ್ದರು. ನಿದೇಶಕ ಜೈರಾಜ್ ಭಂಡಾರಿ ಪುತ್ತೂರು ವಂದಿಸಿದರು. ನಿರ್ದೇಶಕ ಎಸ್.ಎಂ.ಬಾಪು ಸಾಹೇಬ್ ಸುಳ್ಯ ಮತ್ತು ಸಂಘದ ಸುನಾದ್‍ರಾಜ್ ಶೆಟ್ಟಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘ ವ್ಯಾಪ್ತಿಯಲ್ಲಿನ ಪುತ್ತೂರು, ಬಂಟ್ವಾಳ, ಸುಳ್ಯ ಮತ್ತು ಕಡಬ ತಾಲೂಕಿನಲ್ಲಿರುವ ಆಯ್ದ ಸರ್ಕಾರಿ ಶಾಲೆಗಳಲ್ಲಿ 7 ಮತ್ತು 8ನೇ ತರಗತಿಯಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ ಮತ್ತು ಪ್ರತಿಭಾವಂತ 225 ವಿದ್ಯಾರ್ಥಿಗಳಿಗೆ ತಲಾ ರೂ. 2 ಸಾವಿರದಂತೆ ಒಟ್ಟು ರೂ.4.50 ಲಕ್ಷ ಮೊತ್ತದ ಸಹಾಯಧನ ವಿತರಿಸಲಾಯಿತು.