ವಿದ್ಯಾರ್ಥಿಗಳಿಗೆ ಸಾರ್ವಜನಿಕ ಆಡಳಿತ- ಆಡಳಿತಾತ್ಮಕ ವಿಚಾರಗಳ ಪರಿಚಯ: ಯು.ಟಿ.ಖಾದರ್

Update: 2023-07-24 16:12 GMT

ಮಂಗಳೂರು: ರಾಜ್ಯ ಸರಕಾರವು ಸಾರ್ವಜನಿಕ ಆಡಳಿತ ಮತ್ತು ಆಡಳಿತಾತ್ಮಕ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಿದೆ. ಶ್ರೀದಲ್ಲೇ ಈ ಯೋಜನೆ ಜಾರಿಗೊಳಿಸಲಾಗುವುದು. ಈ ವಿಷಯವನ್ನು ಪದವಿ ಪಠ್ಯಕ್ರಮದಲ್ಲಿ ಸೇರಿಸುವುದರಿಂದ ಭವಿಷ್ಯದಲ್ಲಿ ರಾಜಕೀಯ ಪ್ರವೇಶಿಸುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.

ನಗರದ ಸಂತ ಅಲೋಶಿಯಸ್ (ಸ್ವಾಯತ್ತ) ಕಾಲೇಜು, ಹಳೇ ವಿದ್ಯಾರ್ಥಿಗಳ ಸಂ (ಎಸ್‌ಎಸಿಎಎ)ದ ಸಹಯೋಗದಲ್ಲಿ ಕಾಲೇಜಿನ ಎಲ್.ಎಫ್. ರಸ್ಕೀನ್ಹಾ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಭಾರತವು ಜಗತ್ತಿನಲ್ಲಿಯೇ ಶ್ರೇಷ್ಠ ಹಾಗೂ ಉದಾತ್ತವಾದ ಸಂವಿಧಾನವನ್ನು ಹೊಂದಿದ್ದು, ಸಾಂವಿಧಾನಿಕ ಮೌಲ್ಯಗಳಿಗೆ ಗೌರವ ತರುವ ರೀತಿಯಲ್ಲಿ ನಡೆದುಕೊಳ್ಳುವುದು ಪ್ರತಿಯೋರ್ವರ ಕರ್ತವ್ಯ. ಇದರಿಂದ ಯಾರೂ ಹೊರತಾಗಿರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಸಂತ ಅಲೋಶಿಯಸ್ ಕಾಲೇಜಿನಲ್ಲಿ ತಮ್ಮ ಕಲಿಕೆಯ ದಿನಗಳನ್ನು ಮೆಲುಕು ಹಾಕಿದ ಅವರು, ಸಂವಿಧಾನ ಮತ್ತು ಸ್ಪೀಕರ್ ಸ್ಥಾನ ಹಾಗೂ ವ್ಯಾಪ್ತಿ, ಜವಾಬ್ದಾರಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಸಂತ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ಫಾ. ಮೆಲ್ವಿನ್ ಜೆ ಪಿಂಟೊ ಅವರು ಮಾತನಾಡಿ, ದೇಶಕ್ಕೆ ದೊಡ್ಡ ಸಂಖ್ಯೆಯ ಮಹಾನ್ ಸಾಧಕರನ್ನು ಒದಗಿಸಿದ ಹೆಮ್ಮೆ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಿದೆ. ಸ್ಪೀಕರ್ ಯು.ಟಿ.ಖಾದರ್ ಅವರು ಈ ಪರಂಪರೆಯನ್ನು ಮುಂದುವರಿಸಿದ್ದಾರೆ ಎಂದರು.

ಪ್ರಾಂಶುಪಾಲ ಫಾ. ಡಾ.ಪ್ರವೀಣ್ ವಾರ್ಟಿಸ್, ರಿಜಿಸ್ಟ್ರಾರ್ ಮತ್ತು ಪರೀಕ್ಷಾ ನಿಯಂತ್ರಕ ಡಾ.ಅಲ್ವಿನ್ ಡೇಸಾ, ಕಾರ್ಯಕಾರಿ ಸಮಿತಿ ಸದಸ್ಯ ಎನ್.ಜಿ. ಮೋಹನ್ ಮುಂತಾದವರು ಉಪಸ್ಥಿತರಿದ್ದರು.

ವಾನವ ಸಂಪನ್ಮೂಲ ವಿಭಾಗದ ಡೀನ್ ಡಾ.ದಿನೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಎನ್.ಜಿ. ಮೋಹನ್ ಅವರು ಯು.ಟಿ. ಖಾದರ್ ಅವರನ್ನು ಪರಿಚಯಿಸಿದರು. ಡಾ ಆಲ್ವಿನ್ ಡೇಸಾ ಪ್ರಶಸ್ತಿಪತ್ರ ವಾಚಿಸಿದರು. ಎಸ್‌ಎಸಿಎಎ ಅಧ್ಯಕ್ಷ ಸುನೀಲ್ ಕುಂದರ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News