ಬಿಜೆಪಿ ಸರಕಾರದ ಅನುದಾನ ರದ್ದುಪಡಿಸಿದ ಕಾಂಗ್ರೆಸ್ ಸರಕಾರ: ಶಾಸಕ ವೇದವ್ಯಾಸ ಕಾಮತ್ ಅರೋಪ

Update: 2024-12-26 14:49 GMT

ಮಂಗಳೂರು: ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರಕಾರವು ಈ ಸಮುದಾಯಗಳಿಗೆ ಹೊಸ ಅನುದಾನ ನೀಡಿಲ್ಲ. ಬಿಜೆಪಿ ಸರಕಾರದ ಅವಧಿಯಲ್ಲಿ ಬಿಡುಗಡೆಗೊಳಿಸಲಾಗಿದ್ದ ಕೋಟ್ಯಂತರ ರೂ. ಅನುದಾನಗಳನ್ನು ರದ್ದುಪಡಿಸುವ ಆದೇಶ ಹೊರಡಿಸುವ ಮೂಲಕ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.

ನಗರದಲ್ಲಿರುವ ತನ್ನ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ವಿವಿಧ ನಿಗಮಗಳು ಕಾರ್ಯನಿರ್ವಹಿಸುತ್ತಿವೆ. ಬಿಜೆಪಿ ಸರಕಾರವು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ 1 ಸಾವಿರ ಕೋ.ರೂ.ಗೂ ಹೆಚ್ಚು ಅನುದಾನವನ್ನು ವಿವಿಧ ನಿಗಮಗಳಿಗೆ ಬಿಡುಗಡೆ ಮಾಡಿತ್ತು. ಆದರೆ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಹೊಸ ಅನುದಾನವನ್ನು ನೀಡಿಲ್ಲ. ಬಿಜೆಪಿಯ ಅವಧಿಯಲ್ಲಿ ಬಿಡುಗಡೆಗೊಳಿಸಲಾಗಿದ್ದ ಅನುದಾನಗಳನ್ನು ರದ್ದುಪಡಿಸುವ ಆದೇಶ ಹೊರಡಿಸಿರುವುದು ಖಂಡನೀಯ ಎಂದರು.

ಬಿಜೆಪಿ ಸರಕಾರದ ಅವಧಿಯಲ್ಲಿ ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಸಮುದಾಯ ಭವನ, ಸಂಘ ಸಂಸ್ಥೆ, ವಿದ್ಯಾರ್ಥಿ ನಿಲಯ ಸಹಿತ ರಾಜ್ಯಾದ್ಯಂತ ಹಿಂದುಳಿದ ವರ್ಗಗಳ ಹಲವು ಕಾಮಗಾರಿಗಳಿಗೆ ಅನುದಾನ ಮಂಜೂರಾತಿಯನ್ನು ಪ್ರಸ್ತುತ ರಾಜ್ಯ ಸರಕಾರ ಏಕಪಕ್ಷೀಯವಾಗಿ ರದ್ದುಪಡಿಸಿದೆ. ಅದರಲ್ಲಿ ದ.ಕ. ಜಿಲ್ಲೆಯ ದೇವಾಡಿಗ, ಕುಡುಬಿ, ಮೊಗವೀರ, ಬಿಲ್ಲವ, ಶೆಟ್ಟಿಗಾರ್ ಸಹಿತ ಹಿಂದುಳಿದ ಸಮುದಾಯಕ್ಕೆ ಸೇರಿದ ಕಾಮಗಾರಿಗಳು ಕೂಡ ಸೇರಿವೆ. ಈ ಎಲ್ಲ ಹಣ ಗ್ಯಾರಂಟಿ ಯೋಜನೆಗಳಿಗೆ ಬಳಕೆಯಾಗುತ್ತಿದೆ. ಈ ಬಗ್ಗೆ ಕಾಂಗ್ರೆಸಿನರುವ ಹಿಂದುಳಿದ ವರ್ಗಗಳ ನಾಯಕರು ಮೌನ ವಹಿಸಿರುವುದು ವಿಪರ್ಯಾಸ ಎಂದು ವೇದವ್ಯಾಸ ಕಾಮತ್ ಹೇಳಿದರು.

ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪಿಸಿ ಎಂದು ಮಂಗಳೂರಿನಿಂದ ವಿಧಾನಸೌಧವರೆಗೆ ಪಾದಯಾತ್ರೆ ಮಾಡಿದ್ದ ವರು ನಾರಾಯಣ ಗುರು ನಿಗಮಕ್ಕೆ ಈವರೆಗೆ ಅಧ್ಯಕ್ಷರ ನೇಮಕವನ್ನೂ ಮಾಡಿಲ್ಲ, ಅನುದಾನವನ್ನೂ ನೀಡಿಲ್ಲ. ಬಂಟರ ನಿಗಮದ ಸ್ಥಿತಿಯೂ ಭಿನ್ನವಾಗಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಉಪಮೇಯರ್ ಭಾನುಮತಿ, ಪಕ್ಷದ ಮುಖಂಡರಾದ ಪ್ರೇಮಾನಂದ ಶೆಟ್ಟಿ, ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ಪೂರ್ಣಿಮಾ, ರಮೇಶ್ ಕಂಡೆಟ್ಟು, ಲಲ್ಲೇಶ್ ಕುಮಾರ್, ರಮೇಶ್ ಹೆಗ್ಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News