ಕಾಪು: ʼಮಾದಕ ವ್ಯಸನ ಮುಕ್ತ ಸಮಾಜʼ ಅಭಿಯಾನ

Update: 2023-10-21 14:35 GMT

ಕಾಪು : ಮಾದಕ ವ್ಯಸನದಿಂದ ಅಪರಾಧ ಕೃತ್ಯಗಳು ಹೆಚ್ಚಾಗುವುದು ಮಾತ್ರವಲ್ಲದೆ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುಯತ್ತದೆ. ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣವಾದಲ್ಲಿ ಅಪರಾಧ ಕೃತ್ಯಗಳು ಕಡಿಮೆಯಾಗುತ್ತದೆ. ಈ ನಿಟ್ಟಿ ನಲ್ಲಿ ಎಲ್ಲಾ ಸಮಾಜದ ಪ್ರತಿಯೊಬ್ಬರು ಯುವಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಮನೋವೈದ್ಯ ಡಾ.ಪಿ.ವಿ. ಭಂಡಾರಿ ಹೇಳಿದರು.

ಅವರು ಕಾಪು ಪೇಟೆಯಲ್ಲಿ ಶನಿವಾರ ಸಂಜೆ ಕಾಪು ಮುಸ್ಲಿಮ್ ಎಂಪವರ್ ಕಮಿಟಿ ಆಯೋಜಿಸಿದ ಮಾದಕ ವ್ಯಸನ ಮುಕ್ತ ಸಮಾಜ ಅಭಿಯಾನದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ಮಾದಕ ವ್ಯವಸದ ಬಗ್ಗೆ ಆಸಕ್ತಿ ಮೂಡಿ ಇದಕ್ಕೆ ಬಲಿಯಾಗುತಿದ್ದಾರೆ. ಪೋಷಕರು ಈ ಬಗ್ಗೆ ತಮ್ಮ ಮಕ್ಕಳ ಚಟುವಟಿಕೆಗಳ ಬಗ್ಗೆ ಗಮನಹರಿಸಬೇಕು ಎಂದು ಅವರು ಸಲಹೆ ಮಾಡಿದರು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಮಾದಕ ವ್ಯಸನ ಎಂಬುವುದು ರಾಷ್ಟ್ರೀಯ ಮಾತ್ರವಲ್ಲದೆ ಅಂತರಾಷ್ಟ್ರೀಯ ಪಿಡುಗಾಗಿದೆ. ಸುಶಿಕ್ಷತರೂ ಈ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಈ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪೊಲಿಪು ಜುಮಾ ಮಸೀದಿಯ ಖತೀಬ್ ಇರ್ಷಾದ್ ಸಅದಿ ಮಾತನಾಡಿ, ಮಕ್ಕಳಲ್ಲಿ ಉಂಟಾಗುವ ಮಾನಸಿಕ ಖಿನ್ನತೆಯಿಂದ ಇಂತಹ ವ್ಯವಸಕ್ಕೆ ಬಲಿಯಾಗುತಿದ್ದಾರೆ. ಈ ನಿಟ್ಟಿನಲ್ಲಿ ಪೋಷಕರ ಜವಾಬ್ದಾ ರಿಯೂ ಹೆಚ್ಚಿದೆ ಎಂದರು.

ಕಾಪು ಎಸ್‍ಐ ಅಬ್ದುಲ್ ಖಾದರ್ ಕಾನೂನು ಮಾಹಿತಿ ನೀಡಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ ಮಾತನಾಡಿದರು. ಎಸ್‍ಡಿಪಿಐ ಕಾಪು ಕ್ಷೇತ್ರ ಅಧ್ಯಕ್ಷ ಮುಹಮ್ಮದ್ ಹನೀಫ್ ಮೂಳೂರು ಪ್ರಮಾಣವಚನ ಬೋಧಿಸಿದರು.

ಅಧ್ಯಕ್ಷತೆಯನ್ನು ಕಾಪು ಮುಸ್ಲಿಮ್ ಎಂಪವರ್ ಕಮಿಟಿಯ ಅಧ್ಯಕ್ಷ ಶಾಬಾನ್ ಕರಂದಾಡಿ ವಹಿಸಿದ್ದರು. ಕೊಂಬಗುಡ್ಡೆ ಜಾಮಿಯಾ ಮಸ್ಜಿದ್ ಜದೀದ್ ಕಲಾಬ್ ಇಮಾಮ್ ಮೌಲಾನಾ ಮುಹಮ್ಮದ್ ಪರ್ವೇಝ್ ಆಲಮ್ ಕುರ್‍ಆನ್ ಪಠಿಸಿ ದರು. ಕೆಎಂಇಸಿ ಗೌರವಾಧ್ಯಕ್ಷ ಶಭಿ ಅಹಮದ್ ಕಾಝಿ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಅಮೀರ್ ಹಂಝ ಪ್ರಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಅನ್ವರ್ ಆಲಿ ಕಾಪು ಕಾರ್ಯಕ್ರಮ ನಿರೂಪಿಸಿದರು. ಕೆಎಂಇಸಿಯ ಪ್ರಧಾನ ಕಾರ್ಯದರ್ಶಿ ನಸೀರ್ ಅಹಮದ್ ಎಕ್ಕಾನ್ ಇದ್ದರು.

ಅಭಿಯಾನದ ಅಂಗವಾಗಿ ಒಂದು ತಿಂಗಳ ಕಾಲ ಮೊಹಲ್ಲಾ ಕಾರ್ನರ್ ಮೀಟಿಂಗ್ ನಡೆದಿದ್ದು, ಎಲ್ಲಾ ಮೊಹಲ್ಲಾಗಳಲ್ಲಿಯೂ ಮಾದಕ ವ್ಯಸನ ಬಗ್ಗೆ ಜಾಗೃತಿ ಮೂಡಿಸಿ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವಂತೆ ಮನವಿ ಮಾಡಲಾಯಿತು. ಕಾರ್ಯಕ್ರಮಕ್ಕೂ ಮೊದಲು ಮಜೂರು ಸರ್ಕಲ್‍ನಿಂದ ಕಾಪು ಪೇಟೆಯವರೆಗೆ ಮಾದಕ ವ್ಯಸನ ವಿರುದ್ಧ ಜನಜಾಗೃತಿ ಪಾದಯಾತ್ರೆ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News